ಆರ್‌ಎಸ್‌ಎಸ್ ಕಾರ್ಯಕರ್ತ ತಮ್ಮ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕೆಲ ಹೆಚ್ಚುವರಿ ದಾಖಲೆಗಳನ್ನು ಅಂಗೀಕೃತ ಸಾಕ್ಷ್ಯವಾಗಿ ಸ್ವೀಕರಿಸಿದ ಥಾಣೆ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ರಾಜೇಶ್ ಕುಂಟೆ ವರ್ಸಸ್ ರಾಹುಲ್ ಗಾಂಧಿ ಮತ್ತಿತರರ ನಡುವಣ ಪ್ರಕರಣ].
ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆಯ ಭಿವಾಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೂನ್ 3ರಂದು ದೂರುದಾರರಾಗಿರುವ ರಾಜೇಶ್ ಕುಂಟೆ ಅವರು ಸಲ್ಲಿಸಿದ್ದ ಕೆಲವು ದಾಖಲೆಗಳನ್ನು ಸ್ವೀಕರಿಸಿತ್ತು. ಮಾನನಷ್ಟ ಮೊಕದ್ದಮೆ ಹೂಡಲಾದ ಆಪಾದಿತ ಅವಹೇಳನಕಾರಿ ಭಾಷಣದ ಲಿಪ್ಯಂತರವನ್ನು ನ್ಯಾಯಾಲಯವು ಸಾಕ್ಷಿಯಾಗಿ ಪರಿಗಣಿಸಿತ್ತು.
ಇದೇ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕುಂಟೆ ಅವರು ಸಲ್ಲಿಸಿರುವ ಮತ್ತೊಂದು ಅರ್ಜಿಯಲ್ಲಿ ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ್ದ ಆದೇಶದ ಉಲ್ಲಂಘನೆಯಾಗಿದೆ ಎಂದು ರಾಹುಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಾನಹಾನಿಕರ ಭಾಷಣವನ್ನು ರಾಹುಲ್ ಮಾಡಿರುವುದನ್ನು ಒಪ್ಪಿಕೊಳ್ಳಲಿ ಅಥವಾ ನಿರಾಕರಿಸಲಿ ಎಂದು ಕುಂಟೆ ಅವರು ಸಲ್ಲಿಸಿದ್ದ ಅರ್ಜಿಯನ್ನು 2021ರಲ್ಲಿ, ನ್ಯಾ. ರೇವತಿ ಮೋಹಿತೆ ಡೆರೆ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಆಪಾದಿತ ವ್ಯಕ್ತಿಗೆ ಅರ್ಜಿಯ ಅಂಶಗಳನ್ನು ಒಪ್ಪಿಕೊಳ್ಳಿ ಅಥವಾ ನಿರಾಕರಿಸಿ ಎಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾ. ಡೆರೆ ತರ್ಕಿಸಿದ್ದರು.
ಸೋಮವಾರ ಗಾಂಧಿಯವರ ಪ್ರಸ್ತುತ ಅರ್ಜಿಯನ್ನು ಕೈಗೆತ್ತಿಕೊಂಡ, ನ್ಯಾ. ಎಸ್ ವಿ ಕೊತ್ವಾಲ್ ಅವರಿದ್ದ ಏಕಸದಸ್ಯ ಪೀಠ, “ಪ್ರಕರಣದ ಬಗ್ಗೆ ಸಮನ್ವಯ ಪೀಠ ಈಗಾಗಲೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಅದೇ ನ್ಯಾಯಮೂರ್ತಿಗಳು ಪ್ರಸ್ತುತ ಅರ್ಜಿ ಆಲಿಸಲು ಅವಕಾಶ ಮಾಡಿಕೊಡುವುದು ಸೂಕ್ತ” ಎಂದು ತಿಳಿಸಿದರು. ಹಾಗಾಗಿ ಈ ಹಿಂದೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸುವಂತೆ ಅವರು ಆದೇಶಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಗೆ ಹಿಂದೂ ಸಂಘಟನೆ ಆರ್‌ಎಸ್‌ಎಸ್ ಕಾರಣ ಎಂದು ರಾಹುಲ್ ಭಾಷಣ ಮಾಡಿದ್ದಾಗಿ ಆರೋಪಿಸಿ ಕುಂಟೆ ಅವರು 2014ರಲ್ಲಿ ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಪ್ರಸ್ತುತ ಪ್ರಕರಣ ಉದ್ಭವಿಸಿದೆ.