
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮತ್ತು ವಿಜಯದಶಮಿ ಉತ್ಸವದ ಭಾಗವಾಗಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ಕ್ಕೆ ಉದ್ದೇಶಿಸಿರುವ ಆರ್‌ಎಸ್‌ಎಸ್ ಪಥಸಂಚಲನ, ಸ್ಥಳ ಮತ್ತು ಸಮಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಕೈಗೊಂಡಿರುವ ನಿರ್ಣಯದ ವರದಿಯನ್ನು ಅಕ್ಟೋಬರ್ 24ಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಭಾನುವಾರ ನಿರ್ದೇಶಿಸಿದೆ.
ಚಿತ್ತಾಪುರದಲ್ಲಿ ಅಕ್ಟೋಬರ್ 19ರ ಮಧ್ಯಾಹ್ನ 3ಕ್ಕೆ ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿರುವ ತಹಶೀಲ್ದಾರ್ ಕ್ರಮಕ್ಕೆ ಆಕ್ಷೇಪಿಸಿ ಆರ್‌ಎಸ್‌ಎಸ್ ಕಲಬುರ್ಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ವಿಶೇಷ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಪಥಸಂಚಲಕ್ಕೆ ಅನುಮತಿ (ಎಲ್ಲಿಂದ ಎಲ್ಲಿಯವರೆಗೆ ಪಥಸಂಚಲನ ನಡೆಯಲಿದೆ) ಕೋರಿ, ಏತಕ್ಕಾಗಿ ಪಥಸಂಚಲನ ನಡೆಸಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಿ, ಸ್ಥಳ ಮತ್ತು ಸಮಯದ ಮಾಹಿತಿ ನೀಡಿ ಅರ್ಜಿದಾರರು ಕಲಬುರ್ಗಿಯ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಪೊಲೀಸರಿಗೆ ಹೊಸದಾಗಿ ಇಂದು ಮನವಿ ಸಲ್ಲಿಸಬೇಕು. 18.10.2025ರಂದು ತಹಶೀಲ್ದಾರ್ ಎತ್ತಿರುವ ವಿಚಾರಗಳಿಗೂ ಅರ್ಜಿದಾರರು ನಿರ್ದಿಷ್ಟವಾಗಿ ಉತ್ತರಿಸಬೇಕು. ಅರ್ಜಿದಾರರ ಪಥಸಂಚಲನದ ಹಾದಿಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಅಕ್ಟೋಬರ್ 24ಕ್ಕೆ ವರದಿ ಸಲ್ಲಿಸಬೇಕು. ಅರ್ಜಿಯ ಮೆರಿಟ್ ಮೇಲೆ ಯಾವುದೇ ಆದೇಶ ಮಾಡಿಲ್ಲ. ಸರ್ಕಾರ ಸಲ್ಲಿಸುವ ವರದಿ ಆಧರಿಸಿ ನ್ಯಾಯಾಲಯವು ನಿರ್ಧರಿಸಲಿದೆ” ಎಂದು ಆದೇಶಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಪಥಸಂಚಲನಕ್ಕೆ ಅನುಮತಿ ಕೋರಿ ಯಾವ ಪ್ರಾಧಿಕಾರಕ್ಕೆ ಅನುಮತಿ ಕೋರಬೇಕು? ಯಾವ ಕಾನೂನಿನ ಅಡಿ ಅನುಮತಿ ಕೋರಬೇಕು ಎಂಬ ವಿಚಾರ ಇಲ್ಲಿದೆ. ಗುಂಪೊಂದು ಪಂಥಸಂಚಲನ ನಡೆಸಲು ಅವಕಾಶವಿದೆಯೇ? ಅದು ಪ್ರತಿಭಟನೆಯೇ ಆಗಿರಬೇಕಿಂದಿಲ್ಲ. ಅದು ಮೌನ ಪ್ರತಿಭಟನೆಯಾಗಿರಬಹುದು? ಜನರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಬಹುದು? ಇದಕ್ಕೆ ಅನುಮತಿ ಬೇಕೆ? ಹಾಗಾದರೆ ಯಾರಿಂದ ಅನುಮತಿ ಪಡೆಯಬೇಕು? ಯಾವ ಕಾನೂನು ಜಾರಿಯಲ್ಲಿದೆ. ಯಾವ ಕಾನೂನಿನ ನಿಬಂಧನೆಗೆ ನಾವು ಒಳಪಟ್ಟಿದ್ದೇವೆ” ಎಂದು ಸರ್ಕಾರವನ್ನು ಪ್ರಶ್ನಿಸಿತು.
ಅದಕ್ಕೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಬೆಂಗಳೂರಿನಲ್ಲಿ ಪ್ರತಿಭಟನೆ, ರ್ಯಾಲಿ, ಸಮಾವೇಶ ನಡೆಸುವುದಕ್ಕೆ ಸಂಬಂಧಿಸಿದಂತೆ 29.10.2021ರ ಆದೇಶವಿದೆ. ಆ ನಿಬಂಧನೆಯನ್ನು ರಾಜ್ಯದ ಬೇರೆ ಕಡೆಗೂ ಅನ್ವಯಿಸಬಹುದು. ಪೊಲೀಸ್ ಕಾಯಿದೆ ಸೆಕ್ಷನ್ 31, 35 ಮತ್ತು 64 ಇದಕ್ಕೆ ಪೂರಕವಾಗಿದೆ. ಇದನ್ನು ಹೊರತುಪಡಿಸಿ ಮನವಿ ಪರಿಗಣಿಸಲು ಯಾವುದೇ ಕಾಯಿದೆ ಇಲ್ಲ” ಎಂದರು.
ಅಲ್ಲದೇ, “ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಕೋರಿರುವ ದಿನವೇ ಭೀಮಾ ಆರ್ಮಿ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಅದೇ ಸ್ಥಳದಲ್ಲಿ, ಅದೇ ದಿನ ಸಮಾವೇಶ ನಡೆಸಲು ಉದ್ದೇಶಿಸಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ತಹಶೀಲ್ದಾರ್ ಅವರು ಅನುಮತಿ 18.10.25 ನಿರಾಕರಿಸಿದ್ದಾರೆ” ಎಂದರು.
ಈ ಹಂತದಲ್ಲಿ ಪೀಠವು “ಬೇರೊಂದು ದಿನ ಪಥಸಂಚಲನ ನಡೆಸಲು ಸಾಧ್ಯವೇ” ಎಂದು ಅರುಣ್ ಶ್ಯಾಮ್ ಅವರನ್ನು ಕೇಳಿತು. ಇದಕ್ಕೆ ಅವರು “ನವೆಂಬರ್ ೨ರಂದು ಆಗಬಹುದು” ಎಂದರು. ಈ ಮಧ್ಯೆ ಅಡ್ವೊಕೇಟ್ ಜನರಲ್ ಅವರು “ಕಾರ್ಯಕ್ರಮ ನಡೆಸಲು ನಿರ್ದಿಷ್ಟ ಪ್ರದೇಶ ಗೊತ್ತು ಮಾಡಲಾಗುವುದು” ಎಂದರು.
ಇದಕ್ಕೆ ಅರುಣ್ ಶ್ಯಾಮ್ ಅವರು “ಈಗಾಗಲೇ ಸಲ್ಲಿಸಿರುವ ನಮ್ಮ ಪಥಸಂಚಲದ ಹಾದಿಯನ್ನು ಸರ್ಕಾರ ಪರಿಗಣಿಸಬೇಕು” ಎಂದರು. ಆಗ ಎಜಿ ಅವರು “ರಸ್ತೆಗಳಲ್ಲಿ ಮೆರವಣಿಗೆ ನಡೆಸುವುದಕ್ಕೆ ನ್ಯಾಯಾಲಯಗಳು ಮಹತ್ವ ನೀಡಿಲ್ಲ. ಆದರೆ, ಸರ್ಕಾರ ಈ ವಿಚಾರವನ್ನು ಪರಿಶೀಲಿಸಲಿದೆ” ಎಂದರು.
ಈ ವೇಳೆ ಅರುಣ್ ಶ್ಯಾಮ್ ಅವರು “ಆರ್‌ಎಸ್‌ಎಸ್‌ಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳಕಳಿ ಇದೆ. ರಾಜ್ಯದಾದ್ಯಂತ ಇದುವರೆಗೆ 250 ಸಮಾವೇಶಗಳನ್ನು ನಡೆಸಲಾಗಿದೆ. ಯಾವುದೇ ದುರ್ಘಟನೆ ನಡೆದಿಲ್ಲ. ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಪಥಸಂಚನವನ್ನು ರದ್ದುಪಡಿಸುವುದು ಅವರ ಉದ್ದೇಶ. ಹೀಗಾಗಿ, ಅನುಮತಿ ನಿರಾಕರಿಸಿದ್ದಾರೆ” ಎಂದರು.
ಅಕ್ಟೋಬರ್ 19ರಂದು ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಶುರುವಾಗಿ ಮತ್ತೆ ಅಲ್ಲಿ ಮರಳುವ ಪಥಸಂಚಲನ ಮತ್ತು ಆನಂತರ ಸಾರ್ವಜನಿಕ ಸಮಾವೇಶ ನಡೆಸಲು ಅನುಮತಿಸುವಂತೆ ಅಶೋಕ್ ಪಾಟೀಲ್ ಅವರು ಅಕ್ಟೋಬರ್ 13ರಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ತಹಶೀಲ್ದಾರ್ ಅಕ್ಟೋಬರ್ 18ರಂದು ತಹಶೀಲ್ದಾರ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.