ರಾಜ್ಯ ಸರ್ಕಾರವು 2011ರ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿಯ ಇಡೀ ಪ್ರಕ್ರಿಯೆಯನ್ನು ಸಿಐಡಿ ಮಧ್ಯಂತರ ವರದಿ ಆಧರಿಸಿ 2013ರ ಅಕ್ಟೋಬರ್ 15ರಂದು ಹಿಂಪಡೆದಿತ್ತು. ಸುಮಾರು ಒಂದು ದಶಕದ ಬಳಿಕ 2022ರಲ್ಲಿ ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚಿನ ಗೆಜೆಟೆಡ್ ಪ್ರೊಬೆಷನರ್ಸ್ ಆಯ್ಕೆ ಸಿಂಧುತ್ವ ಮತ್ತು ನೇಮಕಾತಿ) ಕಾಯಿದೆ ಮೂಲಕ ಅವರ ಆಯ್ಕೆಗೆ ಅನುವು ಮಾಡಿಕೊಡಲಾಯಿತು. ಇದೇ ನಿಯಮವನ್ನು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಪ್ರಕರಣದಲ್ಲಿ ಪಾಲಿಸಬೇಕು ಎಂದು ಹಿರಿಯ ವಕೀಲ ಪಿ ಎಸ್ ರಾಜಗೋಪಾಲ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಬಲವಾಗಿ ಪ್ರತಿಪಾದಿಸಿದರು.
ಬೆಂಗಳೂರಿನ ವಸಂತ್ ನಾಯಕ್ ಸೇರಿದಂತೆ ನೂರಾರು ಅಭ್ಯರ್ಥಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಪ್ರಕರಣದಲ್ಲಿ ವಕಾಲತ್ತು ಹಾಕಿರುವ ವಕೀಲ ಸಂತೋಷ್ ನಾಗರಾಳೆ ಅವರನ್ನು ಪ್ರತಿನಿಧಿಸಿರುವ ರಾಜಗೋಪಾಲ ಅವರು “ಪಿಎಸ್‌ಐ ನೇಮಕಾತಿಯಲ್ಲಿ ಆಯ್ಕೆಯಾಗಿರುವ 545 ಅಭ್ಯರ್ಥಿಗಳ ಪೈಕಿ 53 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇವರಲ್ಲಿ 52 ಮಂದಿಗೆ 2022ರ ಏಪ್ರಿಲ್ 6ರಂದು ಷೋಕಾಸ್ ನೋಟಿಸ್ ನೀಡಿ, 2023 ಜೂನ್ 20ರಂದು ಅವರನ್ನು ಡಿಬಾರ್ ಮಾಡಲಾಗಿದೆ. 53 ಮಂದಿ ಆರೋಪಿಗಳನ್ನು ಹೊರತುಪಡಿಸಿ ಉಳಿದವರ ವಿರುದ್ಧ ಯಾವುದೇ ಆರೋಪಗಳು ಇಲ್ಲ. ಹೀಗಾಗಿ, ಅವರಿಗೆ ಕರ್ನಾಟಕ ನಾಗರಿಕ ಸೇವೆಗಳ ಕಾಯಿದೆಯನ್ನು ಅನ್ವಯಿಸುವ ಮೂಲಕ ಕಳಂಕರಹಿತರನ್ನು ರಕ್ಷಿಸಬೇಕಿದೆ” ಎಂದು ಬಲವಾಗಿ ವಾದಿಸಿದರು.
ಮುಂದುವರಿದು, “ಒಟ್ಟು 54,103 ಮಂದಿ ಪಿಎಸ್‌ಐ ನೇಮಕಾತಿಯ ಲಿಖಿತ ಪರೀಕ್ಷೆಗೆ ಆಯ್ಕೆಯಾಗಿದ್ದು, 545 ಮಂದಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. 2022ರ ಏಪ್ರಿಲ್ 20ರಂದು ಪರೀಕ್ಷೆ ರದ್ದುಪಡಿಸುವ ಆಕ್ಷೇಪಾರ್ಹವಾದ ಆದೇಶ ಪ್ರಕಟಿಸುವ ವೇಳೆಗೆ ಕಳಂಕರಹಿತ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯು ಅಂತಿಮ ಹಂತ ತಲುಪಿದ್ದು, 171 ಮಂದಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ವಿತರಿಸಲು ಬಾಕಿ ಇತ್ತು” ಎಂದು ಅವರು ಪೀಠಕ್ಕೆ ವಿವರಿಸಿದರು.
“ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಲು ಬೇಕಾದ ಅಗತ್ಯ ದಾಖಲೆಗಳು ರಾಜ್ಯ ಸರ್ಕಾರದ ಬಳಿ ಇಲ್ಲವೇ ಇಲ್ಲ. ಲಿಖಿತ ಪರೀಕ್ಷೆ ರದ್ದುಪಡಿಸಿ 15 ತಿಂಗಳು ಕಳೆದರೂ ಸರ್ಕಾರದ ಮುಂದೆ ದಾಖಲೆಗಳು ಇಲ್ಲವಾಗಿದೆ. ಇನ್ನೆಷ್ಟು ದಿನ ಆಯ್ಕೆಯಾದ ಅಭ್ಯರ್ಥಿಗಳು ನರಳಬೇಕು? ಕಳಂಕಿತ ಅಭ್ಯರ್ಥಿಗಳು ಹಾಗೂ ಕಳಂಕರಹಿತ ಅಭ್ಯರ್ಥಿಗಳು ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬ ಪ್ರಕರಣ ಇದೇನಲ್ಲ” ಎಂದು ರಾಜಗೋಪಾಲ ಪೀಠಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಅರ್ಜಿದಾರರ ಪರವಾಗಿ ವಕೀಲರಾದ ಸಂತೋಷ್ ನಾಗರಾಳೆ, ಎಚ್ ರಘು, ಅರ್ನವ್ ಬಾಗಲವಾಡಿ, ವರುಣ್ ಗೌಡ, ಸಿರಿ ರಾಜಶೇಖರ್, ಮೊಹಮ್ಮದ್ ಶಾಮೀಲ್ ವಕಾಲತ್ತು ಹಾಕಿದ್ದಾರೆ. ಸುದೀರ್ಘ ಒಂದು ತಾಸು ವಾದ ಆಲಿಸಿದ ಪೀಠವು ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.