

ಶಬರಿಮಲೆ ದೇವಸ್ಥಾನದಲ್ಲಿ ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನ ಕಾಣೆಯಾಗಿರುವ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಅಧಿಕಾರಿಗಳ ಲೋಪದ ಬಗ್ಗೆ ಕೇರಳ ಹೈಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಎಂಬ ವ್ಯಕ್ತಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
ಪೊಟ್ಟಿ ವಂಚನೆ ನಡೆಸುವುದಕ್ಕೆ ದೇವಸ್ಥಾನದ ಅಧಿಕಾರಿಗಳು ಸಹಕರಿಸಿರುವಂತೆ ತೋರುತ್ತದೆ. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯಿದೆ- 1988ರ ಅಡಿಯಲ್ಲಿ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬಹುದೇ ಎಂಬ ಕುರಿತು ಪರಿಶೀಲಿಸುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಅವರಿದ್ದ ಪೀಠ ಸೂಚಿಸಿತು.
ಗಮನಾರ್ಹ ಸಂಗತಿ ಎಂದರೆ ಪೊಟ್ಟಿ ಅವರ ಪ್ರಾಯೋಜಕತ್ವದಡಿಯಲ್ಲಿ ದುರಸ್ತಿ ಕಾರ್ಯವನ್ನು ಚೆನ್ನೈ ಮೂಲದ 'ಸ್ಮಾರ್ಟ್ ಕ್ರಿಯೇಷನ್ಸ್' ಎಂಬ ಸಂಸ್ಥೆಗೆ ಟಿಡಿಬಿ ವಹಿಸಿತ್ತು. ಆದರೆ ದುರಸ್ತಿ ಕಾರ್ಯದ ಬಳಿಕ ಚಿನ್ನದ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದ್ದು ವಿವಾದಕ್ಕೆ ನಾಂದಿ ಹಾಡಿತ್ತು. ನಂತರ ಪೊಟ್ಟಿಯವರ ಸಹೋದರಿ ಮನೆಯಿಂದ ಸ್ವಲ್ಪ ಮಟ್ಟಿನ ಚಿನ್ನಲೇಪಿತ ತಗಡುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಹೈಕೋರ್ಟ್ ಕಳೆದ ತಿಂಗಳು ನೀಡಿದ್ದ ಆದೇಶದಂತೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದ್ದು ಪೊಟ್ಟಿ ಪ್ರಸ್ತುತ ಬಂಧನದಲ್ಲಿದ್ದಾರೆ. ವಿಶೇಷ ತನಿಖಾ ತಂಡದ ತನಿಖೆಯ ಪ್ರಗತಿಯನ್ನು ಹೈಕೋರ್ಟ್ ಸಹ ಮೇಲ್ವಿಚಾರಣೆ ಮಾಡುತ್ತಿದೆ.
ದೇವಾಲಯದ ಅಮೂಲ್ಯ ವಸ್ತುಗಳ ದಾಖಲೆ ಬಗ್ಗೆ ಜುಲೈ 28, 2025ರವರೆಗೆ ಮಾತ್ರವೇ ಮಾಹಿತಿ ಇದೆ. ಬಂಗಾರದ ಫಲಕಗಳ ದುರಸ್ತಿ ಕುರಿತ ದಾಖಲೆಗಳು ಅಸ್ಪಷ್ಟವಾಗಿವೆ. ದುರಸ್ತಿ ಪೂರ್ಣಗೊಂಡ ನಂತರವೂ ವಸ್ತುಗಳು ಹಲವು ದಿನಗಳು ಪೊಟ್ಟಿ ಅವರ ವಶದಲ್ಲಿಯೇ ಇದ್ದವು. ಇದು ಟಿಡಿಬಿಯ ಮೇಲ್ವಿಚಾರಣೆ ಕೊರತೆಯನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಆಸ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಟಿಡಿಬಿಗೆ ಇದೆ. ಟಿಡಿಬಿಎ ಎಚ್ಚರಿಕೆ ವಹಿಸದಿದ್ದರೆ ಅಮೂಲ್ಯ ವಸ್ತುಗಳನ್ನು ಕಳವು ಮಾಡಿ ನಕಲಿ ವಸ್ತುಗಳನ್ನು ತಂದಿಡಬಹುದು. ಕಳುವಾದ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳ್ಳಸಾಗಣೆಯಾಗುವ ಅಪಾಯವಿದೆ ಎಂದ ನ್ಯಾಯಾಲಯ ಕುಖ್ಯಾತ ಕಳ್ಳಸಾಗಣೆದಾರ ಸುಭಾಷ್ ಕಪೂರ್ ಪ್ರಕರಣವನ್ನು ನೆನೆಯಿತು.
2018 ಮತ್ತು 2019ರ ನಡುವೆ ಪೊಟ್ಟಿ ದೇವಸ್ಥಾನದ ಮುಖ್ಯದ್ವಾರದ ದುರಸ್ತಿ ಕಾರ್ಯ ನಡೆಸಿದ್ದರ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಸೂಚಿಸಿದ ನ್ಯಾಯಾಲಯ 2019ರಲ್ಲಿ ಬಳಸಿದ ಬಂಗಾರದ ನಿಜವಾದ ನಷ್ಟದ ಪ್ರಮಾಣವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದಿತು.
ಮೂರು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಯಲಿದೆ. ಎಸ್‌ಐಟಿ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಪ್ರಕರಣದ ದಾಖಲೆಗಳು ಅಲ್ಲಿಯವರೆಗೆ ಮುಚ್ಚಿದ ಲಕೋಟೆಯಲ್ಲಿ ಇರಲಿವೆ. ಎಸ್‌ಐಟಿ ಅಧಿಕಾರಿಗಳು ಇಂದು ನೀಡಿದ ವರದಿಯನ್ನು ಗೌಪ್ಯವಾಗಿ ನ್ಯಾಯಾಲಯ ದಾಖಲಿಸಿಕೊಂಡಿತು.