
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪಂಬಾದಲ್ಲಿ ಶೀಘ್ರದಲ್ಲಿಯೇ ನಡೆಯಲಿರುವ 'ವಿಶ್ವ ಅಯ್ಯಪ್ಪ ಸಂಗಮ' ಕಾರ್ಯಕ್ರಮದಿಂದಾಗಿ ಶಬರಿಮಲೆ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಅಥವಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಪ್ರವೇಶಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕ್ರಮ ಆಯೋಜಿಸಿರುವ ರಾಜ್ಯ ಸರ್ಕಾರ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಗೆ ರಾಜ್ಯ ಹೈಕೋರ್ಟ್ ಗುರುವಾರ ಆದೇಶಿಸಿದೆ [ ಅಜೀಶ್ ಕಲಾಥಿಲ್ ಗೋಪಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ದಾವೆ ಹಾಗೂ ಸಂಬಂಧಿತ ಪ್ರಕರಣಗಳು].
ಅಯ್ಯಪ್ಪ ಸ್ವಾಮಿ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ರಾಜಕೀಯ ಕಾರ್ಯಕ್ರಮ ಇದಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಮತ್ತು ದೇವಸ್ವಂ ಮಂಡಳಿ ನಡೆಸುತ್ತಿರುವುದು ಏಕೆ? ದೇಗುಲದ ನಿಧಿ ಕಾರ್ಯಕ್ರಮಕ್ಕೆ ಬಳಕೆಯಾಗಲಿದ್ದು ಇದರಲ್ಲಿ ಸನಾತನ ಧರ್ಮವನ್ನು ವಿರೋಧಿಸುವ ವ್ಯಕ್ತಿಗಳು ಭಾಗವಹಿಸುವ ಸಾಧ್ಯತೆಗಳಿವೆ ಎಂದು ದೂರಿ ಭಕ್ತರು ಮತ್ತು ಧಾರ್ಮಿಕ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.
ಆದರೆ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾರ್ಯಕ್ರಮ ಮುಂದುವರಿಸಬಹುದು ಎಂದು ನ್ಯಾಯಾಲಯ ಇಂದು ಅಭಿಪ್ರಾಯಪಟ್ಟಿತು. ಅಂತೆಯೇ ಕಾರ್ಯಕ್ರಮ ಆಯೋಜಿಸುವಾಗ ಪಾಲಿಸಬೇಕಾದ ನಿರ್ದೇಶನಗಳನ್ನು ಅದು ಒದಗಿಸಿದೆ:
ನ್ಯಾಯಾಲಯ ನೀಡಿರುವ ನಿರ್ದೇಶನಗಳು
ಪಂಭಾ ನದಿ ಮತ್ತು ದೇವಸ್ಥಾನ ಸ್ವಚ್ಛ ಮತ್ತು ಪವಿತ್ರವಾಗಿರಲಿ.
ಕಾರ್ಯಕ್ರಮಕ್ಕಾಗಿ ತಾತ್ಕಾಲಿಕವೇ ಇರಲಿ ಶಾಶ್ವತವೇ ಆಗಿರಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸಬಾರದು, ಪರಿಸರಕ್ಕೆ ಹಾನಿ ಆಗದಂತೆ ನಿರ್ಮಾಣ ಮಾಡಬೇಕು.
ಪೂಜೆ, ಯಾತ್ರಿಗರ ವಾಸಸ್ಥಳಕ್ಕೆ ಅಡ್ಡಿ ಉಂಟುಮಾಡಬಾರದು.
ಪ್ಲಾಸ್ಟಿಕ್ ಉಪಯೋಗಿಸಿ ತ್ಯಾಜ್ಯ ಹರಡಬಾರದು; ತಕ್ಷಣ ಸ್ವಚ್ಛಗೊಳಿಸಬೇಕು.
ಮುಖ್ಯಮಂತ್ರಿಗಳು ಮತ್ತು ಗಣ್ಯರು ಬಂದರೂ ಸಾಮಾನ್ಯ ಯಾತ್ರಿಕರಿಗೆ ಸೌಲಭ್ಯ ದೊರೆಯದಂತೆ ಆಗಬಾರದು.
ಭಕ್ತರು ದರ್ಶನ ಪಡೆಯುವುದಕ್ಕೆ ಅಡ್ಡಿ ಉಂಟಾಗಬಾರದು.
ಕಾರ್ಯಕ್ರಮಕ್ಕೆ ಆದ ವೆಚ್ಚದ ಬಗ್ಗೆ ಸರಿಯಾದ ಲೆಕ್ಕಪತ್ರ ನಿರ್ವಹಿಸಬೇಕು.
ವಿಶೇಷ ಸೌಲಭ್ಯ ಅಥವಾ ಪ್ರಿವಿಲೇಜ್ ಕಾರ್ಡ್ ನೀಡಬಾರದು.
ಜನಸಂಖ್ಯೆ ನಿರ್ವಹಣೆ ವ್ಯವಸ್ಥೆ, ಪಾರ್ಕಿಂಗ್, ವೈದ್ಯಕೀಯ ಸೇವೆ ಇತ್ಯಾದಿ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸಬೇಕು.
ತಿರುವಾಂಕೂರು ದೇವಸ್ವಂ ಮಂಡಳಿಯ ಎಪ್ಪತನೇ ವಾರ್ಷಿಕೋತ್ಸವದ ಅಂಗವಾಗಿ ಸೆಪ್ಟೆಂಬರ್ 16 ರಿಂದ 21 ರವರೆಗೆ ಶಬರಿಮಲೆಗೆ ಅನತಿ ದೂರದಲ್ಲಿರುವ ಪಂಬಾದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸುತ್ತಿರುವುದು ವಿವಾದ ಹುಟ್ಟುಹಾಕಿತ್ತು. ರಾಜ್ಯ ಸರ್ಕಾರ ಧಾರ್ಮಿಕ ಸ್ಥಳಗಳನ್ನು ರಾಜಕೀಯಗೊಳಿಸುತ್ತಿದ್ದು ದೇವಾಲಯದ ಹಣ ದುರುಪಯೋಗಪಡಿಸಿಕೊಂಡಿದೆ ಎಂದು ಟೀಕಾಕಾರರು ದೂರಿದ್ದರು.
ಶಬರಿಮಲೆಯನ್ನು ವಿಶ್ವ ಯಾತ್ರಾ ಕೇಂದ್ರವಾಗಿ ಬಿಂಬಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮಕ್ಕೆ ದೇವಸ್ವಂ ಮಂಡಳಿ ಮಾತ್ರ ಸೀಮಿತ ಸಹಾಯ ನೀಡುತ್ತಿದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿತ್ತು. 'ತತ್ವಮಸಿ'ಯ ಸಾರ್ವತ್ರಿಕ ಸಂದೇಶವನ್ನು ಹರಡುವುದು ಮತ್ತು ಧಾರ್ಮಿಕ ಸಾಮರಸ್ಯ ಮತ್ತು ವಿಶ್ವ ಏಕತೆಯನ್ನು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿತ್ತು.