[ಸುಶಾಂತ್ ಸಿಂಗ್‌ ರಜಪೂತ್ ಪ್ರಕರಣ] ಆರೋಪಿ ಸಾಹಿಲ್ ಶಾಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್

ಶಾ ಅಪರಾಧದಲ್ಲಿ ಪಾಲ್ಗೊಂಡಿರುವುದನ್ನು ವಾಟ್ಸಾಪ್ ಸಂದೇಶಗಳು, ಬಂಧಿತ ಆರೋಪಿಗಳ ಹೇಳಿಕೆ ಹಾಗೂ ನಡೆಸಲಾಗಿರುವ ತನಿಖೆಗಳು ಹೇಳುತ್ತವೆ ಎಂಬುದಾಗಿ ನ್ಯಾಯಮೂರ್ತಿ ಪಿ ಡಿ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
Narcotics Control Bureau, Sushant Singh Rajput
Narcotics Control Bureau, Sushant Singh Rajput

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಮಾದಕ ವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆಯಡಿ ಆರೋಪ ಹೊತ್ತಿರುವ ಮಾದಕವಸ್ತು ವ್ಯಾಪಾರಿ ಸಾಹಿಲ್‌ ಶಾಗೆ ನಿರೀಕ್ಷಣಾ ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ನಿರಾಕರಿಸಿದೆ.

ಶಾ ಅಪರಾಧದಲ್ಲಿ ಪಾಲ್ಗೊಂಡಿರುವುದನ್ನು ವಾಟ್ಸಾಪ್ ಸಂದೇಶಗಳು, ಬಂಧಿತ ಆರೋಪಿಗಳ ಹೇಳಿಕೆ ಹಾಗೂ ನಡೆಸಲಾಗಿರುವ ತನಿಖೆಗಳು ಹೇಳುತ್ತವೆ ಎಂಬುದಾಗಿ ನ್ಯಾಯಮೂರ್ತಿ ಪಿ ಡಿ ನಾಯಕ್ ಅಭಿಪ್ರಾಯಪಟ್ಟಿದ್ದಾರೆ. ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ನಿರೀಕ್ಷಣಾ ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ ಎಂದು ಪೀಠ ತಿಳಿಸಿದೆ.

ಮಾದಕ ವಸ್ತುಗಳ ಸೇವನೆ ಅವುಗಳಿಗೆ ಹಣಕಾಸು ಒದಗಿಸುವುದು ಹಾಗೂ ಸಂಗ್ರಹಕ್ಕೆ ಸಂಬಂಧಿಸಿದಂತೆ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 8 (ಸಿ), 27, 27 ಎ, 28, 29 ಮತ್ತು 30ರ ಅಡಿಯಲ್ಲಿ ಶಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಹ ಆರೋಪಿಗಳಾದ ಗಣೇಶ್‌ ಶೇರ್‌ ಮತ್ತು ಸಿದ್ಧಾರ್ಥ್‌ ಅಮೀನ್‌ ಅವರಿಂದ ಎನ್‌ಸಿಬಿ 310 ಗ್ರಾಂನಷ್ಟು ಗಾಂಜಾ ವಶಪಡಿಕೊಂಡಿತ್ತು. ಇದನ್ನು ಶಾ ಸರಬರಾಜು ಮಾಡಿದ್ದ ಎಂದು ಶಂಕಿಸಲಾಗಿತ್ತು.

Also Read
[ಸುಶಾಂತ್‌ ಪ್ರಕರಣ] ಎನ್‌ಡಿಪಿಎಸ್‌ ನ್ಯಾಯಾಲಯಕ್ಕೆ 61,000 ಪುಟಗಳಿಗೂ ಹೆಚ್ಚಿನ ಆರೋಪಪಟ್ಟಿ ಸಲ್ಲಿಸಿದ ಎನ್‌ಸಿಬಿ

ಸೆಷನ್ಸ್‌ ನ್ಯಾಯಾಲಯ ತನ್ನ ಬಂಧನಕ್ಕೆ ಆದೇಶಿಸಬಹುದು ಎಂಬುದನ್ನು ಮನಗಂಡ ಶಾ ಮುಂಬೈನ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ರಕ್ಷಣೆ ನೀಡಲು ಏಪ್ರಿಲ್ 23ರಂದು ವಿಶೇಷ ನ್ಯಾಯಾಲಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಶಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಶಾ ಪರವಾಗಿ ವಕೀಲರಾದ ಪಿ.ಎಸ್.ಮಾಲ್ಹಿ, ಅಮನ್‌ದೀಪ್‌ ಸಿಂಗ್‌ ಮತ್ತು ಎನ್‌ಸಿಬಿ ಪರವಾಗಿ ವಕೀಲ ಶ್ರೀರಾಂ ಶ್ರೀಸತ್‌ ವಾದ ಮಂಡಿಸಿದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಶಾಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು.

Related Stories

No stories found.
Kannada Bar & Bench
kannada.barandbench.com