ಆಡಳಿತ ಪಕ್ಷದ ಹಿತಾಸಕ್ತಿಗೆ ಅನುಗಣವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನ್ ಟ್ರಸ್ಟಿಗಳ ನೇಮಕ ನಡೆಯಬಾರದು: ಬಾಂಬೆ ಹೈಕೋರ್ಟ್

ಶಿರಡಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಪ್ರಸ್ತುತ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕಾತಿ ರದ್ದುಗೊಳಿಸಿದ ಔರಂಗಾಬಾದ್ ಪೀಠ 8 ವಾರಗಳಲ್ಲಿ ಹೊಸ ಸಮಿತಿ ರಚಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
Shirdi Saibaba
Shirdi Saibaba

ಧಾರ್ಮಿಕ ಟ್ರಸ್ಟ್‌ ನಿರ್ವಹಣೆ ಮಾಡುವ ಧರ್ಮದರ್ಶಿಗಳ ನೇಮಕ ಭಕ್ತರ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಇರಬೇಕಿದ್ದು ಸರ್ಕಾರ ತನ್ನ ಖಾಸಗಿ ಹಿತಸಕ್ತಿಗಾಗಿ ಪಕ್ಷದ ಕಾರ್ಯಕರ್ತರು ಅಥವಾ ರಾಜಕಾರಣಿಗಳಿಗೆ ಅಲ್ಲಿ ನೆಲೆಯೊದಗಿಸಬಾರದು ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ತಿಳಿಸಿದೆ  [ಉತ್ತಮರಾವ್ ರಾಮ್ಭಾಜಿ ಶೆಲ್ಕೆ ಇನ್ನಿತರರು ಮತ್ತು  ಮಹಾರಾಷ್ಟ್ರ ಸರ್ಕಾರ ಹಾಗೂ ಸಂಬಂಧಿತ ಮನವಿಗಳ ನಡುವಣ ಪ್ರಕರಣ].

ಸಾರ್ವಜನಿಕ ಟ್ರಸ್ಟ್‌ನ ಧರ್ಮದರ್ಶಿಗಳ ಹುದ್ದೆಗಳಲ್ಲಿ ರಾಜಕೀಯ ಹಿನ್ನೆಲೆ ಇರುವ ಸದಸ್ಯರು ಅಥವಾ ರಾಜಕಾರಣಿಗಳ ನಿಕಟವರ್ತಿಗಳೇ ತುಂಬಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಆರ್‌ ಡಿ ಧನುಕಾ ಮತ್ತು ಎಸ್‌‌ ಜಿ ಮೆಹರೆ ಅವರಿದ್ದ ಪೀಠ ಹೇಳಿತು.

ಇದು ಕಾನೂನಿನ ತತ್ವಗಳಿಗೆ ವಿರುದ್ಧವಾಗಿದ್ದು ಟ್ರಸ್ಟ್ ರಚನೆಯ ಉದ್ದೇಶ ಈಡೇರಿಸಲು  ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಒತ್ತಿಹೇಳಿತು.

Also Read
[ಕುತುಬ್‌ ಮಿನಾರ್‌ ವಿವಾದ] 150 ವರ್ಷಗಳ ಬಳಿಕ ಎಚ್ಚೆತ್ತು, ಆಧಾರವಿಲ್ಲದೇ ನ್ಯಾಯಾಲಯದ ಕದ ತಟ್ಟಲಾಗಿದೆ: ಎಎಸ್‌ಐ

ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಪ್ರಸ್ತುತ ಇರುವ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕಾತಿ ರದ್ದುಗೊಳಿಸಿದ ತೀರ್ಪಿನಲ್ಲಿ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಸಮಿತಿಯಲ್ಲಿ 12 ಸದಸ್ಯರನ್ನು ಟ್ರಸ್ಟಿಗಳಾಗಿ ನೇಮಕ ಮಾಡುವ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಟ್ರಸ್ಟಿಗಳು ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ  (ಎನ್‌ಸಿಪಿ) ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸೇರಿದವರಾಗಿದ್ದು ಅವರಿಗೆ ಕ್ರಿಮಿನಲ್‌ ಹಿನ್ನೆಲೆ ಇದೆ ಇಲ್ಲವೇ ಚುನಾವಣೆಯಲ್ಲಿ ಅವರು ಸೋತಿದ್ದಾರೆ ಎಂಬುದು ಅರ್ಜಿದಾರರ ಅಹವಾಲಾಗಿತ್ತು.

ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ಲಾಭಕ್ಕಾಗಿ ನ್ಯಾಯಾಲಯ ಮಂಜೂರು ಮಾಡಿದ ಯೋಜನೆಯಡಿ ರಾಜ್ಯ ಸರ್ಕಾರ ಅಂತಹ ಟ್ರಸ್ಟ್‌ ರಚಿಸುವ ಸಂಪೂರ್ಣ ಇಂಗಿತ ಮತ್ತು ಉದ್ದೇಶವನ್ನು ಮಣಿಸಿದೆ ಎಂದು ಕೂಡ ನ್ಯಾಯಾಲಯ ಟೀಕಿಸಿದೆ.

 “ನಮ್ಮ ದೃಷ್ಟಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮತ್ತು ದೇಶ ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಸಾರ್ವಜನಿಕ ಉದ್ದೇಶದಿಂದ ಸ್ಥಾಪಿಸಲಾದ ಸಂಸ್ಥಾನ್‌ ಟ್ರಸ್ಟ್‌ಗೆ ಟ್ರಸ್ಟಿಗಳನ್ನು ನೇಮಿಸುವುದು ಆಡಳಿತ ಪಕ್ಷಕ್ಕೆ ಹತ್ತಿರವಾಗಿರುವವರಿಗೆ ಆಶ್ರಯ ಕಲ್ಪಿಸಲು ಇಲ್ಲವೇ ಹಿಂದಿನ ಚುನಾವಣೆಯಲ್ಲಿ ಸೋತ ರಾಜಕಾರಣಿಗಳಿಗೆ ಆಶ್ರಯ ನೀಡುವುದಕ್ಕಾಗಿ ಅಲ್ಲ” ಎಂದು ನ್ಯಾಯಾಲಯ ಕಟುಪದಗಳಲ್ಲಿ ತಿಳಿಸಿದೆ.

ಟ್ರಸ್ಟನ್ನು ರೂಪಿಸಲಾದ ಕಾಯಿದೆಗೆ ಅನುಗುಣವಾಗಿ ಇನ್ನು ಎಂಟು ವಾರಗಳಲ್ಲಿ ಹೊಸ ಸಮಿತಿ ರಚಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Uttamrao_Rambhaji_Shelke___Ors__v__State_of_Maharashtra___Ors__and_connected_plea.pdf
Preview

Related Stories

No stories found.
Kannada Bar & Bench
kannada.barandbench.com