
ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸರ್ಕಾರದ ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ಇನ್ನು ತನ್ನ ಅನುಮತಿಯಿಲ್ಲದೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸುವಂತೆ ಕೋರಿ ಉದಯನಿಧಿ ಅವರು ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠ ಮಧ್ಯಂತರ ಆದೇಶ ಹೊರಡಿಸಿತು.
ಏಪ್ರಿಲ್‌ನಲ್ಲಿ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿದ ಅದು ಅಲ್ಲಿಯವರೆಗೂ ಮಧ್ಯಂತರ ಆದೇಶ ಮುಂದುವರಿಯುತ್ತದೆ ಮತ್ತು ಸೇರಿಸಲಾದ ಹೊಸ ಪ್ರಕರಣಗಳಿಗೂ ಆದೇಶ ಅನ್ವಯವಾಗುತ್ತದೆ. ಈ ಕಾರಣಕ್ಕಾಗಿ ಯಾವುದೇ ಎಫ್‌ಐಆರ್ ದಾಖಲಿಸಬಾರದು ಎಂದು ನಿರ್ದೇಶಿಸುತ್ತಿರುವುದಾಗಿ ತಿಳಿಸಿತು.
ಬಿಹಾರದಲ್ಲಿಯೂ ಉದಯನಿಧಿ ಅವರ ವಿರುದ್ಧ ಹೊಸದಾಗ ಎಫ್‌ಐಆರ್ ದಾಖಲಾಗಿದೆ ಎಂಬುದನ್ನು ಅರಿತ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಉದಯನಿಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಎ ಎಂ ಸಿಂಘ್ವಿ ಅವರು ಅರ್ನಬ್ ಗೋಸ್ವಾಮಿ, ನೂಪುರ್ ಶರ್ಮಾ ಅವರಂತಹ ಇನ್ನೂ ಅನೇಕರು ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಅವರು ಪಾರಾಗಿದ್ದಾರೆ ಎಂದರು.
ಆದರೆ ಸ್ಟಾಲಿನ್ ವಿರುದ್ಧ ಪ್ರಕರಣ ದಾಖಲಾಗಿರುವ ಸ್ಥಳಗಳಲ್ಲಿ ಒಂದಾದ ಮಹಾರಾಷ್ಟ್ರದ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉದಯನಿಧಿ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದ್ದವು ಎಂದರು.
ಉದಯನಿಧಿ ಅವರು ನಿರ್ಮೂಲನೆ ಮಾಡಬೇಕು ಎಂದು ಹೇಳಿದ ಸಮುದಾಯ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲ ಎಂಬ ಕಾರಣಕ್ಕೆ ಅವರು ಈ ರೀತಿ ಹೇಳುವಂತಿಲ್ಲ ಎಂದು ಮೆಹ್ತಾ ನುಡಿದರು.
" ಸುಪ್ರೀಂ ಕೋರ್ಟ್ ಆಗಿ, ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಸಿಜೆಐ ಖನ್ನಾ ಹೇಳಿದರು.
ಈ ಮಧ್ಯೆ ಉದಯನಿಧಿ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪಿ ವಿಲ್ಸನ್ ಅವರು "ನಾನು ನಮ್ಮ ನೆಲವಾದ ತಮಿಳುನಾಡಿಗೆ ಮೆಹ್ತಾ ಅವರನ್ನು ಕರೆದೊಯ್ಯಲು ಬಯಸುವೆ ಅಲ್ಲಿ ವಾದಗಳನ್ನು ಕಾನೂನಾತ್ಮಕವಾಗಿ ಮಂಡಿಸಲಾಗುತ್ತದೆಯೇ ವಿನಾ ರಾಜಕೀಯವಾಗಿ ಅಲ್ಲ. ರಾಜಕೀಯ ಸಮೂಹಕ್ಕಾಗಿ ಸಾಲಿಸಿಟರ್ ಜನರಲ್ ತಮ್ಮ ವಾದ ಮಂಡಿಸುತ್ತಿದ್ದಾರೆ” ಎಂದು ತಿವಿದರು.
ಇದಕ್ಕೆ ತಿರುಗೇಟು ನೀಡಿದ ಎಸ್ ಜಿ ಮೆಹ್ತಾ ಉದಯನಿಧಿ ಅವರ ಮಾತುಗಳು ನಿಮ್ಮ ನೆಲದಲ್ಲಿಯೇ ಮೂಡಿವೆ. ನಾನು ಪತ್ರಿಕಾಗೋಷ್ಠಿ ಉದ್ದೇಶಿಸದೆ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದರು. ಆಗ ಮಧ್ಯಪ್ರವೇಶಿಸಿದ ಸಿಂಘ್ವಿ ಅವರು ನೀವು ಖಾಸಗಿ ದೂರುದಾರರಿಗಿಂತಲೂ ಉಗ್ರವಾಗಿ ವಾದ ಮಂಡನೆಯಲ್ಲಿ ತೊಡಗಿದ್ದೀರಿ ಎಂದರು. ಹೌದು ಒಪ್ಪುತ್ತೇನೆ ಎಂದು ಮೆಹ್ತಾ ಮಾರುತ್ತರ ನೀಡಿದರು. ಆದರೆ ತಮ್ಮ ಎಲ್ಲೆಯನ್ನು ಮೀರುತ್ತಿದ್ದೀರಿ ಎಂದು ಈ ವೇಳೆ ವಿಲ್ಸನ್ ಪ್ರತಿಕ್ರಿಯಿಸಿದರು.