ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ವೀರೇಂದ್ರ ಖನ್ನಾ ವಿರುದ್ಧದ ಎರಡು ಆರೋಪ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್‌

“ತನಿಖಾ ವೈಫಲ್ಯಗಳನ್ನು ಸರಿಪಡಿಸಿ, ಕಾನೂನು ಪ್ರಕಾರ ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆಗಳು ಕ್ರಮಕೈಗೊಳ್ಳಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ವೀರೇಂದ್ರ ಖನ್ನಾ ವಿರುದ್ಧದ ಎರಡು ಆರೋಪ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್‌

Virendra Khanna and Karnataka HC

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಎಂದೇ ಕುಖ್ಯಾತಿಯಾಗಿರುವ 2020ರಲ್ಲಿ ನಡೆದಿದ್ದ‌ ಮಾದಕ ವಸ್ತು ಪ್ರಕರಣದಲ್ಲಿ ಆರೋಪಿಯಾಗಿದ್ದ ಮೋಜು ಕೂಟಗಳ ವ್ಯವಸ್ಥಾಪಕ ವೀರೇಂದ್ರ ಖನ್ನಾ ವಿರುದ್ಧದ ಎರಡು ಆರೋಪ ಪಟ್ಟಿಗಳ ವಿಚಾರದಲ್ಲಿ ಕಾರ್ಯವಿಧಾನದಲ್ಲಿ ಲೋಪವಾಗಿದೆ ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್‌ ಈಚೆಗೆ ಅವುಗಳನ್ನು ರದ್ದುಗೊಳಿಸಿದೆ.

ಬೆಂಗಳೂರಿನ ಬಾಣಸವಾಡಿ ಮತ್ತು ಕಾಟನ್‌ ಪೇಟೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ 33ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಹಾಗೂ ಎನ್‌ಡಿಪಿಎಸ್‌ ಪ್ರಕರಣಗಳನ್ನು ನಡೆಸುವ ವಿಶೇಷ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ವೀರೇಂದ್ರ ಖನ್ನಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

“ತನಿಖಾ ವೈಫಲ್ಯಗಳನ್ನು ಸರಿಪಡಿಸಿ, ಕಾನೂನು ಪ್ರಕಾರ ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆಗಳು ಕ್ರಮಕೈಗೊಳ್ಳಬಹುದಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಸಿಸಿಬಿ ಪೊಲೀಸರು ಖನ್ನಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, 2021ರಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 2015, 2018 ಮತ್ತು 2019ರಲ್ಲಿ ವಿವಿಧೆಡೆ ಆಯೋಜಿಸಿದ್ದ ಮೋಜು ಕೂಟಗಳಿಗೆ ಖನ್ನಾ ಅಮಲು ಪದಾರ್ಥಗಳನ್ನು ಪೂರೈಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಖನ್ನಾ ವಿರುದ್ಧ 2018ರಲ್ಲಿ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ 2019ರಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಹಸ್ಮತ್‌ ಪಾಷಾ ಅವರು “2020ರಲ್ಲಿ ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ಹಿಂದಿನ ಪ್ರಕರಣದಲ್ಲಿ 12 ತಿಂಗಳು ಪೂರೈಸಿರುವುದರಿಂದ ಅರ್ಜಿದಾರರನ್ನು ತನಿಖೆ ಒಳಪಡಿಸಲಾಗದು. ಎಫ್ಐಆರ್‌ ದಾಖಲಿಸದೇ ವಿಭಿನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಅರ್ಜಿದಾರರನ್ನು ತನಿಖೆಗೆ ಗುರಿಪಡಿಸಲಾಗದು” ಎಂದು ವಾದಿಸಿದ್ದರು.

Also Read
ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್‌

ಸಿಆರ್‌ಪಿಸಿ ಸೆಕ್ಷನ್‌ 219ರ ಪ್ರಕಾರ 2015, 2018 ಮತ್ತು 2019ರಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ 2020ರಲ್ಲಿ ದಾಖಲಿಸಿರುವ ಎಫ್‌ಐಆರ್‌ ಮೂಲಕ ಅವರನ್ನು ತನಿಖೆಗೆ ಒಳಪಡಿಸಲಾಗದು. “ಅದೇ ವ್ಯಕ್ತಿಯು ಹಿಂದೆ ಎಸಗಿದ ಕೃತ್ಯಗಳು ಬೆಳಕಿಗೆ ಬಂದಾಗ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ, ಅದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸುವುದನ್ನು ಯಾರೂ ತಡೆಯುವುದಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 219 ಎಲ್ಲಾ ಆರೋಪಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಅನುಮತಿಸುವುದಿಲ್ಲ. ಸದರಿ ಪ್ರಕರಣದಲ್ಲಿ 2015, 2018 ಮತ್ತು 2019ರಲ್ಲಿನ ಪ್ರಕರಣಗಳಿಗೆ ಒಂದೇ ಎಫ್‌ಐಆರ್‌ ಸಾಕು ಎಂದು ಪೊಲೀಸರು ಭಾವಿಸಿದಂತಿದೆ” ” ಎಂದು ನ್ಯಾಯಾಲಯ ಹೇಳಿದೆ.

“ಹೀಗಾಗಿ, ಕಾರ್ಯವಿಧಾನದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ತನಿಖಾ ಸಂಸ್ಥೆಯು ಅನುಮತಿ ಪಡೆಯಬೇಕಿದೆ. ಎನ್‌ಡಿಪಿಎಸ್ ಕಾಯಿದೆ ಅಡಿ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಪೂರಕವಾದ ದಾಖಲೆಗಳಿದ್ದರೆ ಕಾನೂನಿನ ಅನ್ವಯ ಅನುಮಾನಕ್ಕೆ ಆಸ್ಪದವಿಲ್ಲದಂತೆ ಅದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಬೇಕಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Attachment
PDF
Virendra Khanna Versus State of Karnataka.pdf
Preview

Related Stories

No stories found.