ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ರೋಹಿಂಟನ್ ಎಫ್‌ ನಾರಿಮನ್‌ ಅವರಿದ್ದ ಪೀಠವು ಮಾದಕವಸ್ತು ಸೇವನೆ ಹಾಗೂ ಪೂರೈಕೆ ಕುರಿತಾದ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿಗೆ ಜಾಮೀನು ಮಂಜೂರು ಮಾಡಿದೆ.
ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್‌

ಮಾದಕವಸ್ತು ಸೇವನೆ ಹಾಗೂ ಪೂರೈಕೆ ಕುರಿತಾದ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿದ್ದು, ನಾಲ್ಕೂವರೆ ತಿಂಗಳ ಬಳಿಕ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಜಾಮೀನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿಂಟನ್‌ ಎಫ್‌ ನಾರಿಮನ್‌ ಅವರಿದ್ದ ಪೀಠವು ರಾಗಿಣಿಗೆ ಜಾಮೀನು ನೀಡಿದೆ.

ಅರ್ಜಿದಾರೆಯಾದ ದ್ವಿವೇದಿ ಅವರಿಗೆ ಸೇರಿದ ಸ್ಥಳದಲ್ಲಿ ಪರಿಶೀಲನೆ ನಡೆಸಿದರೂ ಅಲ್ಲಿ ಯಾವುದೇ ತೆರನಾದ ಮಾದಕ ವಸ್ತುಗಳು ದೊರೆತಿಲ್ಲ. ಆದರೂ ಆಕೆಯ ವಿರುದ್ಧ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ 37ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೀಠ ಹೇಳಿದೆ. “ಹೆಚ್ಚೆಂದರೆ ಅರ್ಜಿದಾರೆ ಮೋಜಿನ ಕೂಟದಲ್ಲಿ ಮಾದಕ ವಸ್ತು ಸೇವಿಸಿದ್ದಾರೆ ಎಂದು ಹೇಳಬಹುದಷ್ಟೆ” ಎಂದು ನ್ಯಾಯಾಲಯ ಹೇಳಿದೆ.

“ಹೈಕೋರ್ಟ್‌ ಮತ್ತು ಸೆಷನ್‌ ನ್ಯಾಯಾಧೀಶರು ತಪ್ಪಾಗಿ ಸೆಕ್ಷನ್‌ 37 ಅನ್ನು ಚಲಾಯಿಸಿದ್ದಾರೆ. ಇದಕ್ಕೆ ಜಾಮೀನು ದೊರೆಯಬೇಕು. ಹೈಕೋರ್ಟ್‌ ತೀರ್ಪನ್ನು ಬದಿಗೆ ಸರಿಸಲಾಗಿದ್ದು, ರಾಗಿಣಿ ದ್ವಿವೇದಿ ಜಾಮೀನಿಗೆ ಅರ್ಹರಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ರಾಗಿಣಿ ವಿರುದ್ಧ ಆಕೆ ಹಾಗೂ ಇತರರು ಆಯೋಜಿಸಿದ್ದ ಮೋಜುಕೂಟಗಳಲ್ಲಿ ಮಾದಕವಸ್ತುಗಳನ್ನು ಸೇವಿಸಿರುವ ಹಾಗೂ ಪೂರೈಸಿರುವ ಆರೋಪವಿದೆ. ರಾಗಿಣಿ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ಲೂತ್ರಾ ಅವರು “ಆಕೆ ಒಬ್ಬ ನಟಿಯಾಗಿದ್ದು, ಇದಾಗಲೇ 140 ದಿನ ಬಂಧನದಲ್ಲಿದ್ದಾರೆ. ಆಕೆಯಿಂದ ಯಾವುದೇ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಸಹ ಆರೋಪಿ ರವಿಶಂಕರ್‌ ಆಕೆಯ ವಿರುದ್ಧ ನೀಡಿರುವ ಹೇಳಿಕೆಯನ್ನಷ್ಟೇ ಆಧರಿಸಲಾಗಿದೆ. ಆಕೆ ಡ್ರಗ್ಸ್‌ ಮಾರಾಟಕ್ಕೆ ಹಣಕಾಸು ಒದಗಿಸುತ್ತಾರೆ ಎನ್ನಲಾಗಿದೆ. ಕೇವಲ 1.5 ಗ್ರಾಂ ಎಕ್ಸ್ಟೆಸಿ ಸೇವನೆ ಬಗ್ಗೆ ಮಾತ್ರವೇ ತಿಳಿಸಲಾಗಿದೆ” ಎಂದು ಲೂತ್ರಾ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ನಾರಿಮನ್‌ ಅವರು “ಅದೆಲ್ಲವೂ ಅಭಿಯೋಜಕರ ವಾದ” ಎಂದರು.

“ಮಾದಕ ವಸ್ತು ಪತ್ತೆಹಚ್ಚುವ ಪ್ರಯೋಗಾಲಯದ ವರದಿಯನ್ನು ತಿರುಚುವ ಉದ್ದೇಶದಿಂದ ಮೂತ್ರದ ಬದಲಿಗೆ ನೀರಿನ ಮಾದರಿ ಬದಲಿಸಲಾಗಿದೆ ಎಂದು ದ್ವಿವೇದಿ ವಿರುದ್ಧ ಆರೋಪಿಸಲಾಗಿದೆ. ವಶಕ್ಕೆ ಪಡೆಯುವ ಮನವಿಯಲ್ಲಿ ಬದಲಿಸಲಾಗಿಲ್ಲ ಎಂದು ಹೇಳಲಾಗಿದೆ. ರಾಗಿಣಿಯನ್ನು ಇದರಲ್ಲಿ ಎಳೆದು ತಂದಿದ್ದು ದುರದೃಷ್ಟಕರ” ಎಂದು ಲೂಥ್ರಾ ಹೇಳಿದರು.

“ಸದರಿ ಪ್ರಕರಣದಲ್ಲಿ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 37 ಅನ್ನು ಬಳಕೆ ಮಾಡಬಾರದು ಎಂದೇನಿಲ್ಲ. ಈ ಮಹಿಳೆಯು 140 ದಿನಗಳಿಂದ ಪೊಲೀಸ್‌ ವಶದಲ್ಲಿದ್ದಾರೆ. ರಾಗಿಣಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗಿಲ್ಲ, ಮತ್ತೊಂದು ಪ್ರಕರಣದಲ್ಲಿ ಶೋಧನಾ ಆದೇಶ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್‌ 42 ಅನ್ನು ಉಲ್ಲಂಘಿಸಲಾಗಿದೆ” ಎಂದು ಲೂಥ್ರಾ ವಾದಿಸಿದರು.

“ಶೋಧನಾ ಆದೇಶ ಇಲ್ಲದಾಗ ಮಾತ್ರ ಸೆಕ್ಷನ್‌ 42 ಉಲ್ಲಂಘನೆಯಾಗುತ್ತದೆ” ಎಂದು ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಹೇಳಿದರು.

“ಮಾದಕ ವಸ್ತುವನ್ನು ವೈಯಕ್ತಿಕವಾಗಿ ಸೇವನೆ ಮಾಡಿದ ಪ್ರಕರಣ ಇದಲ್ಲ. ಆರೋಪಿಯು ಮೋಜಿನ ಕೂಟ ಆಯೋಜಿಸಿ, ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು” ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮಧ್ಯಪ್ರವೇಶ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೂಥ್ರಾ ಅವರು “ಚಾಲಕರು ಮತ್ತಿತರರ ಹೇಳಿಕೆಗಳನ್ನು ಅವರು ತೋರಿಸುತ್ತಿದ್ದಾರೆ. ಆದರೆ, ರವಿಶಂಕರ್‌ ಅವರದ್ದು ಪ್ರಮುಖ ಹೇಳಿಕೆಯಾಗಿದೆ. ಇದರಲ್ಲಿ ಒಂದು ಗ್ರಾಂ ಸೇವನೆಯನ್ನು ಮಾತ್ರ ಕಾರಣವನ್ನಾಗಿ ನೀಡಲಾಗಿದೆ” ಎಂದಿದ್ದಾರೆ.

Also Read
ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್‌

ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 37 ಅನ್ನು ಉಲ್ಲೇಖಿಸಿ ವಿಚಾರಣಾಧೀನ ನ್ಯಾಯಾಲಯವು ಮನವಿ ವಜಾ ಮಾಡಿದೆ. ಆಕೆಗೆ ಜಾಮೀನು ನಿರಾಕರಿಸಲಾಗಿದೆ. ರವಿಶಂಕರ್‌ ಹೇಳಿಕೆಯ ಮೇಲೆ ಹೈಕೋರ್ಟ್‌ ಆದೇಶ ನಿಂತಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪಿತೂರಿ ಆರೋಪವನ್ನು ಆಧರಿಸಿ ಅರ್ಜಿದಾರೆಯನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿಲ್ಲ. ಅರ್ಜಿದಾರೆಯ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 21, 22 ಉಲ್ಲಂಘಿಸಿದ ಆರೋಪ ಮಾಡಲಾಗಿದೆ. ಆದರೆ, ಮೇಲ್ನೋಟಕ್ಕೆ ಅವರ ವಿರುದ್ಧ ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಸೆಕ್ಷನ್‌ 27ರ ದೂರು ದಾಖಲಿಸಬಹುದಷ್ಟೆ ಎಂದು ಪೀಠ ಅಭಿಪ್ರಾಯಪಟ್ಟು, ನಟಿ ರಾಗಿಣಿಗೆ ಜಾಮೀನು ಮಂಜೂರು ಮಾಡಿತು.

Related Stories

No stories found.
Kannada Bar & Bench
kannada.barandbench.com