ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಬಂಧಿತನಾಗಿದ್ದ ಪಶ್ಚಿಮ ಆಫ್ರಿಕಾದ ಸೆನೆಗಲ್ ನಿವಾಸಿಗೆ ಮಂಜೂರು ಮಾಡಿದ್ದ ಜಾಮೀನನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದು ಮಾಡಿದೆ.
ಕಾಟನ್ ಪೇಟೆ ಪೊಲೀಸರು ಡ್ರಗ್ಸ್ ಕುರಿತಾಗಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಲೂಮ್ ಪೆಪ್ಪರ್ ಸಾಂಬಾ ಎಂಬಾತನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಆತ ಆರೋಪಿಯಾಗಿದ್ದು, ಆತನಿಗೆ ವಿಚಾರಣಾಧೀನ ನ್ಯಾಯಾಲಯವು ಕಳೆದ ಫೆಬ್ರವರಿಯಲ್ಲಿ ಜಾಮೀನು ಮಂಜೂರು ಮಾಡಿತ್ತು.
“ಪ್ರಸ್ತುತ ಅರ್ಜಿದಾರರ ವಿರುದ್ಧ ವಿದೇಶಿಯರ ಕಾಯಿದೆಯ ನಿಬಂಧನೆಗಳನ್ನು ಬಳಸಿರುವುದರ ಬಗ್ಗೆಯೂ ಯಾವುದೇ ಆಕ್ಷೇಪಣೆಗಳಿಲ್ಲ. ವಿಚಾರಣಾಧೀನ ನ್ಯಾಯಾಲಯ ಹೊರಡಿಸಿರುವ ಆಕ್ಷೇಪಾರ್ಹ ಆದೇಶವನ್ನು ಪರಿಶೀಲಿಸಿದಾಗ ಇಂಥ ಯಾವುದೇ ವಿಚಾರಗಳ ಬಗ್ಗೆ ಚರ್ಚಿಸಿರುವುದನ್ನು ನಾನು ನೋಡಿಲ್ಲ. ಮತ್ತೊಂದು ಕಡೆ, ಸುಪ್ರೀಂ ಕೋರ್ಟ್ ರಾಗಿಣಿ ದ್ವಿವೇದಿ ಪ್ರಕರಣದಲ್ಲಿ ಕೈಗೊಂಡಿರುವ ನಿರ್ಧಾರವನ್ನು ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯವು ಮನವಿಗೆ ಸಮ್ಮತಿಸಿದೆ” ಎಂದು ನ್ಯಾಯಮೂರ್ತಿ ಎಂ ಜಿ ಉಮಾ ನೇತೃತ್ವದ ಪೀಠವು ಜಾಮೀನು ರದ್ದುತಿ ಆದೇಶದಲ್ಲಿ ಹೇಳಿದ್ದು, ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಿದೆ.
ಜಾಮೀನು ಮಂಜೂರು ಮಾಡುವಾಗ ವಿಚಾರಾಧೀನ ನ್ಯಾಯಾಲಯವು ಆರೋಪಿ ಸಾಂಬಾ ಬಳಿಯಿಂದ ವಾಣಿಜ್ಯ ಪ್ರಮಾಣದ (ಸ್ವಯಂ ಬಳಕೆಗಲ್ಲದೆ ಮಾರಾಟ ಮಾಡುವ ಉದ್ದೇಶಕ್ಕಾಗಿ ಸಂಗ್ರಹಿಸುವ ಅಮಲು ಪದಾರ್ಥಗಳ ಪರಿಮಾಣ) ಎಂಡಿಎಂಎ (ಮೀಥೈಲ್ ಎನ್ಯಾಕ್ಸಿ ಮೆಥಾಂಫೆಟಮೈನ್) ವಶಪಡಿಸಿಕೊಂಡಿದ್ದನ್ನು ಪರಿಗಣಿಸಿಲ್ಲ. ಅಲ್ಲದೇ, ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆಯ ಸೆಕ್ಷನ್ 37(1)(ಬಿ)ರ ಅಡಿ ಸಾಂಬಾ ವಿರುದ್ಧ ಪ್ರಕರಣ ದಾಖಲಿಸಿರುವುದನ್ನೂ ವಿಚಾರಣಾಧೀನ ನ್ಯಾಯಾಲಯ ಪರಿಶೀಲಿಸಿಲ್ಲ ಎಂದು ಎಂದು ರಾಜ್ಯ ಸರ್ಕಾರವು ಸಲ್ಲಿಸಿದ್ದ ಜಾಮೀನು ರದ್ದತಿ ಮನವಿಯಲ್ಲಿ ವಾದಿಸಿತ್ತು.
ಪಾಸ್‌ಪೋರ್ಟ್ ಅವಧಿ ಮುಗಿದರೂ ಸಾಂಬಾ ಭಾರತದಲ್ಲೇ ನೆಲೆಸಿದ್ದರು. ಹೀಗಿದ್ದರೂ ಆರೋಪಿಯನ್ನು ಆತನ ಮೂಲಸ್ಥಾನಕ್ಕೆ ಕಳುಹಿಸಬೇಕಿತ್ತು ಎಂಬ ವಿಚಾರವನ್ನೂ ವಿಚಾರಣಾಧೀನ ನ್ಯಾಯಾಲಯವು ಪರಿಶೀಲಿಸುವ ಗೋಜಿಗೆ ಹೋಗಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತ್ತು.
ರಾಜ್ಯ ಸರ್ಕಾರದ ವಾದಕ್ಕೆ ಆಕ್ಷೇಪಿಸಿರುವ ಸಾಂಬಾ ಪರ ವಕೀಲರು “ಸಾಂಬಾ ಅವರಿಂದ ಹತ್ತು ಗ್ರಾಂನಷ್ಟು ಎಂಡಿಎಂಎ ಮಾತ್ರ ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯಿದೆ ಅಡಿ 10 ಗ್ರಾಂಗಿಂತ ಹೆಚ್ಚಿನ ಪ್ರಮಾಣದ ಎಂಡಿಎಂಎ ವಶಪಡಿಸಿಕೊಂಡರೆ ಅದು ವಾಣಿಜ್ಯ ಉದ್ದೇಶಕ್ಕೆ ಸಂಗ್ರಹಿಸಿರುವುದು ಎನ್ನಬಹುದಾಗಿದೆ ಎಂದು ಉಲ್ಲೇಖಿಸಲಾಗಿದೆ” ಎಂದರು.
ಪ್ರಕರಣದಲ್ಲಿ ಆರೋಪಿಗಳಾಗಿರುವ ಐವರು ವಿದೇಶಿ ಪ್ರಜೆಗಳನ್ನು ಸೆರೆಯಲ್ಲಿಡಲು ಆದೇಶಿಸುವ ಬದಲಿಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದೂ ವಾದಿಸಲಾಗಿದೆ. ಕನ್ನಡದ ನಟಿ ರಾಗಿಣಿ ದ್ವಿವೇದಿ ಪ್ರಕರಣದ ವಿಚಾರಗಳು ಸದರಿ ವಿಚಾರಕ್ಕೆ ಅನ್ವಯಿಸುವುದಿಲ್ಲ ಎಂದು ಜಾಮೀನು ಮರುಪರಿಶೀಲನಾ ಮನವಿ ಪರಿಶೀಲಿಸಿದ ಬಳಿಕ ನ್ಯಾಯಾಲಯ ಹೇಳಿದೆ.
ಮೇಲಿನ ವಿಚಾರದ ಹಿನ್ನೆಲೆಯಲ್ಲಿ ಆರೋಪಿಗೆ ನೀಡಲಾಗಿರುವ ಜಾಮೀನನ್ನು ರದ್ದುಪಡಿಸಿದ್ದು, ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ರಾಜ್ಯ ಸರ್ಕಾರವನ್ನು ವಕೀಲ ಟಿ ವಿ ಗದಿಗೆಪ್ಪ ಪ್ರತಿನಿಧಿಸಿದ್ದರೆ, ಆರೋಪಿ ಸಾಂಬಾ ಪರವಾಗಿ ವಕೀಲ ಕೆ ಎಸ್ ವಿಶ್ವನಾಥ್ ವಾದಿಸಿದ್ದರು.