ಸ್ಯಾಂಡಲ್‌ವುಡ್ ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಈಚೆಗೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ಗಲ್ರಾನಿ ಅವರ ಪರ ವಕೀಲ ನಾಸಿರ್ ಅಲಿ ಅವರು ವಿರೋಧ ವ್ಯಕ್ತಪಡಿಸಿದ್ದು, ಆರೋಪಿಯು ಕಳೆದ 50 ದಿನಗಳಿಂದ ಪೊಲೀಸರ ವಶದಲ್ಲಿದ್ದಾರೆ ಎಂದಿದ್ದಾರೆ. ಇದನ್ನು ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ.
ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆಗೆ (ಎನ್‌ಡಿಪಿಎಸ್) ಸಂಬಂಧಿಸಿದ ವಿಶೇಷ ನ್ಯಾಯಾಲಯವು ಈಚೆಗೆ ಗಲ್ರಾನಿ ಹಾಗೂ ಮತ್ತೊಬ್ಬ ಬಂಧಿತ ನಟಿ ರಾಗಿಣಿ ದ್ವಿವೇದಿ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಮೋಜು ಕೂಟ ಮತ್ತು ಸಮಾರಂಭಗಳಲ್ಲಿ ನಿಷೇಧಿತ ಮಾದಕ ವಸ್ತುಗಳ ಸೇವನೆ ಮತ್ತು ಪೂರೈಕೆ ಆರೋಪದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು ಇಬ್ಬರೂ ನಟಿಯರನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯಿದೆ-1985 ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿದ್ದರು.
ವಿದೇಶ ಮತ್ತು ವಿವಿಧ ರಾಜ್ಯಗಳಿಂದ ನಿಷೇಧಿತ ಮಾದಕ ವಸ್ತುಗಳ ಸಂಗ್ರಹಕ್ಕಾಗಿ ಗಲ್ರಾನಿ ಅವರು ತಂಡ ರಚಿಸಿದ್ದರು ಎಂಬ ಆರೋಪ ಅವರ ಮೇಲಿದೆ. ಗಲ್ರಾನಿ ಮತ್ತು ಆಕೆಯ ತಂಡವು ಅಮಲು ಪದಾರ್ಥಗಳನ್ನು ವಿವಿಧ ಫಾರ್ಮ್‌ಹೌಸ್, ಪಂಚತಾರಾ ಹೋಟೆಲ್‌ಗಳು, ಕ್ಲಬ್, ಪಬ್ ಮತ್ತಿತರ ಕಡೆ ಮಾರಾಟ ಮಾಡುತ್ತಿತ್ತು ಎಂಬ ಆರೋಪವಿದೆ. ಈಚೆಗೆ ಗಲ್ರಾನಿ, ರಾಗಿಣಿ ಸೇರಿದಂತೆ ಇನ್ನಿತರ ಮೂವರು ಆರೋಪಿಗಳನ್ನು ವಿಶೇಷ ನ್ಯಾಯಾಲಯವು ಐದು ದಿನಗಳ ಮಟ್ಟಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದ್ದನ್ನೂ ಇಲ್ಲಿ ನೆನೆಯಬಹುದು.