![[ಶಾರದಾ ಚಿಟ್‌ಫಂಡ್ ಹಗರಣ] ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತರ ವಶಕ್ಕೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋದ ಸಿಬಿಐ](http://media.assettype.com/barandbench-kannada%2F2020-12%2F5996c0db-1f90-4b81-990e-1c5d5979a873%2Fbarandbench_import_2019_05_Supreme_Court_CBI_kolkata_Police_3.jpg?w=480&auto=format%2Ccompress&fit=max)
ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸುವ ಉದ್ದೇಶದಿಂದ ವಶಕ್ಕೆ ನೀಡಬೇಕು ಎಂದು ಕೋರಿ ಸಿಬಿಐ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ರಾಜೀವ್ ಅವರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅದು ಅರ್ಜಿ ಸಲ್ಲಿಸಿದೆ. ಅವರು ತನಿಖೆಗೆ ಸಹಕಾರ ನೀಡುತ್ತಿಲ್ಲ ಮತ್ತು ಅವರು ಸೂಕ್ತ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಹಗರಣದಲ್ಲಿ ಇತರ ಆರೋಪಿಗಳು ಹೊಂದಿರಬಹುದಾದ ದೊಡ್ಡ ನಂಟು ಮತ್ತು ಅವರು ಹಗರಣದಲ್ಲಿ ಭಾಗಿಯಾಗಿರುವುದನ್ನು ಪತ್ತೆಹಚ್ಚಲು ರಾಜೀವ್ ಅವರನ್ನು ವಶಕ್ಕೆ ಪಡೆಯುವುದು ಅಗತ್ಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಕರಣ ಒಂದು ವರ್ಷದಿಂದ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಶೀಘ್ರ ವಿಚಾರಣೆ ನಡೆಸಬೇಕು. ಕಸ್ಟಡಿ ವಿಚಾರಣೆ ನಡೆಸಬೇಕಿರುವುದರಿಂದ ಕುಮಾರ್ ಅವರಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಬೇಕು ಎಂದು ಕೂಡ ಸಿಬಿಐ ಕೋರಿದೆ.
ಶಾರದಾ ಚಿಟ್ ಫಂಡ್ ಹಗರಣದ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಕುಮಾರ್ ಹಾಳುಗೆಡವಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆರಂಭದಲ್ಲಿ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಗರಣದ ತನಿಖೆ ನಡೆಸಿತ್ತು. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದಾಗ ಚುನಾಯಿತ ಜನಪ್ರತಿನಿಧಿಗಳಿಗೆ ನೀಡಿದ ಹಣದ ಕುರಿತಾದ ದಾಖಲೆಗಳು ಕಾಣೆಯಾಗಿವೆ. ಈ ಹಿನ್ನೆಲೆಯಲ್ಲಿ ಕುಮಾರ್ ಅವರ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಅದು ಮನವಿ ಸಲ್ಲಿಸಿದೆ.
2019ರ ಫೆಬ್ರುವರಿಯಲ್ಲಿ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಸಿಬಿಐ ಅಧಿಕಾರಿಗಳ ತಂಡ ಮುಂದಾದಾಗ ಹಲವು ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ಸಿಬಿಐ ಅಧಿಕಾರಿಗಳು ರಾಜೀವ್ ಅವರ ಅಧಿಕೃತ ಬಂಗಲೆ ಮೇಲೆ ದಾಳಿ ಮಾಡಿದಾಗ ಕೊಲ್ಕತ್ತಾ ಪೊಲೀಸರು ಅವರನ್ನು ಬಂಧಿಸದಂತೆ ತಡೆದಿದ್ದರು, ಮಾತ್ರವಲ್ಲ ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದ್ದರು. ಹೀಗಾಗಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
2019ರ ಫೆಬ್ರವರಿ 5ರಂದು ನ್ಯಾಯಾಲಯ ತನಿಖೆಗೆ ಸಹಕರಿಬೇಕೆಂದು ನಿರ್ದೇಶಿಸಿ ರಾಜೀವ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಿತ್ತು. ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರಿದ್ದ ಪೀಠ ಈ ಆದೇಶ ಹೊರಡಿಸಿತ್ತು.
ಈ ನಿಟ್ಟಿನಲ್ಲಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕುಮಾರ್ ಅವರಿಗೆ ಸ್ವಾತಂತ್ರ್ಯ ನೀಡಿದ್ದರೂ 2019ರ ಮೇ 17ರಂದು ನ್ಯಾಯಪೀಠ ಮಧ್ಯಂತರ ರಕ್ಷಣೆ ಹಿಂಪಡೆದಿತ್ತು. ಆನಂತರ ಕಲ್ಕತ್ತಾ ಹೈಕೋರ್ಟ್ ರಾಜೀವ್ ಬಂಧನದಿಂದ ರಕ್ಷಣೆ ಒದಗಿಸಿತ್ತು. ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ 2019 ರ ನವೆಂಬರ್‌ನಲ್ಲಿ ಸಿಬಿಐ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.