ಪಶ್ಚಿಮ ಬಂಗಾಳದ ಐವರು ಬಿಜೆಪಿ ನಾಯಕರ ವಿರುದ್ಧ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಯಾವುದೇ ಬಲಾತ್ಕಾರದ ಕ್ರಮಕೈಗೊಳ್ಳದಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಅರ್ಜುನ್ ಸಿಂಗ್, ಕೈಲಾಶ್ ವಿಜಯವರ್ಗಿಯಾ, ಪವನ್ ಸಿಂಗ್, ಸೌರವ್ ಸಿಂಗ್ ಮತ್ತು ಮುಕುಲ್ ರಾಯ್ ವಿರುದ್ಧ ಯಾವುದೇ ಬಲಾತ್ಕಾರದ ಕ್ರಮಕ್ಕೆ ಮುಂದಾಗದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಹೃಷಿಕೇಷ್ ರಾಯ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ತ್ರಿಸದಸ್ಯ ಪೀಠವು ಆದೇಶಿಸಿದ್ದು, ನಾಯಕರುಗಳ ವಿರುದ್ಧದ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಿಚಾರಣೆ ವರ್ಗಾವಣೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಒತ್ತಾಯದ ಮೇರೆಗೆ ಪಶ್ಚಿಮ ಬಂಗಾಳ ಪೊಲೀಸರು ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ತೃಣಮೂಲ ಕಾಂಗ್ರೆಸ್ ತೊರೆದ ಮೇಲೆ ಯಾವುದೇ ತೆರನಾದ ಪ್ರಾಥಮಿಕ ತನಿಖೆ ನಡೆಸದೇ ಅರ್ಜುನ್ ಸಿಂಗ್ ಅವರ ವಿರುದ್ದ ಪಶ್ಚಿಮ ಬಂಗಾಳ ಪೊಲೀಸರು 64 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪ್ರಮುಖ ದೂರುದಾರರಾದ ಸಿಂಗ್ ಪರ ವಕೀಲೆ ಆವಂತಿಕಾ ಮನೋಹರ್ ವಾದಿಸಿದ್ದಾರೆ.
ಅರ್ಜುನ್ ಸಿಂಗ್ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಕಾನೂನು ರೀತ್ಯಾ ನಡೆದುಕೊಳ್ಳದೆ ಕೈಗೊಂಡಿರುವ "ಉದ್ದೇಶಪೂರ್ವಕ ಕ್ರಮದಿಂದಾಗಿ" ಅವರ ಸ್ವಾತಂತ್ರ್ಯನಿರ್ಬಂಧಗೊಂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆರನೇ ಅರ್ಜಿದಾರರಾದ ಕಬೀರ್ ಶಂಕರ್ ಬೋಸ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಪೀಠವು ಅವರ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿಲ್ಲ. ಬೋಸ್ ಅವರಿಗೆ ಭದ್ರತೆ ಕಲ್ಪಿಸಿರುವ ಸಿಐಎಸ್‌ಎಫ್‌ಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.