
ಹಿಂದುತ್ವ ನಾಯಕ ದಿವಂಗತ ವಿ ಡಿ ಸಾವರ್ಕರ್ ಅವರನ್ನು ಅವಹೇಳನ ಮಾಡಿದ ಪ್ರಕರಣದ ವಿಚಾರಣೆಯನ್ನು ಸಂಕ್ಷಿಪ್ತವಾಗಿ ಆಲಿಸದೆ ಅದನ್ನು ವಿವರವಾದ ಸಮನ್ಸ್ ವಿಚಾರಣೆಯಾಗಿ ಪರಿವರ್ತಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಮನವಿಗೆ ಸಾವರ್ಕರ್ ಅವರ ಸಂಬಂಧಿ ಹಾಗೂ ಪ್ರಕರಣದ ದೂರುದಾರ ಸಾತ್ಯಕಿ ಅಶೋಕ್ ಸಾವರ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 2023ರಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದ ವೇಳೆ ರಾಹುಲ್ ಅವರು ವಿ ಡಿ ಸಾವರ್ಕರ್ ಅವರ ನಿಲುವಿನ ಬಗ್ಗೆ ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ವಿ ಡಿ ಸಾವರ್ಕರ್ ಮತ್ತವರ ಗುಂಪು ಮುಸ್ಲಿಮರನ್ನು ಥಳಿಸಿದ್ದಾಗಿಯೂ ಅದರಿಂದ ತಮಗೆ ಸಂತೋಷವಾಗಿದ್ದಾಗಿಯೂ ಸಾವರ್ಕರ್ ಬರೆದುಕೊಂಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಆದರೆ ಹೇಳಿಕೆಗಳು ಆಧಾರರಹಿತ ಎಂದು ದೂರಿ 2023ರಲ್ಲಿ ಸಾತ್ಯಕಿ ಸಾವರ್ಕರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಕರಣದ ವಿಚಾರಣೆಯನ್ನು ಸಂಕ್ಷಿಪ್ತವಾಗಿ ಆಲಿಸದೆ ಅದನ್ನು ವಿವರವಾದ ಸಮನ್ಸ್ ವಿಚಾರಣೆಯಾಗಿ ಪರಿವರ್ತಿಸುವಂತೆ ಕೋರಿ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಣೆಯ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತಮ್ಮ ಹೇಳಿಕೆಗಳು ಐತಿಹಾಸಿಕ ಸಂಗತಿಗಳನ್ನು ಆಧರಿಸಿದ್ದು ವಿವರವಾದ ಪುರಾವೆಗಳು ಅಗತ್ಯವಾಗಿರುವುದರಿಂದ 'ಸಮನ್ಸ್ ವಿಚಾರಣೆ' ಹೆಚ್ಚು ಸೂಕ್ತವಾಗುತ್ತದೆ ಎಂದು ರಾಹುಲ್ ವಾದಿಸಿದ್ದರು.
ವಕೀಲ ಎಸ್.ಎ. ಕೊಲ್ಹ್ ಅವರ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಾತ್ಯಕಿ ಅವರು, ವಿಚಾರಣೆ ಹೇಗೆ ನಡೆಯಬೇಕೆಂದು ಆರೋಪಿಗಳು ನ್ಯಾಯಾಲಯಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಪ್ರಕರಣವನ್ನು ಮತ್ತಷ್ಟು ವಿಳಂಬ ಮಾಡದೆ ತ್ವರಿತವಾಗಿ ಮುಂದುವರಿಸಲು ಅವಕಾಶ ನೀಡುವ ಮಹತ್ವವನ್ನು ಇದೇ ವೇಳೆ ಸಾತ್ಯಕಿ ಅವರ ಪರ ವಕೀಲರು ಒತ್ತಿ ಹೇಳಿದರು.
ರಾಹುಲ್ ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ಐತಿಹಾಸಿಕ ಉಲ್ಲೇಖಗಳನ್ನು ಬಳಸುವುದನ್ನು ಸಾತ್ಯಕಿ ಪ್ರಶ್ನಿಸಿದ್ದಾರೆ. ಅಂತಹ ವಾದಗಳು ವಿಚಾರಣೆಯನ್ನು ವಿಳಂಬಗೊಳಿಸುವ ತಂತ್ರ ಮಾತ್ರ ಎಂದು ಹೇಳಿದ್ದಾರೆ.
ವಿಚಾರಣೆಯ ಸ್ವರೂಪವನ್ನು ಬದಲಾಯಿಸಲು ಮತ್ತು ಪ್ರಕರಣವನ್ನು ಅದರ ಆರಂಭಿಕ ಹಂತಗಳನ್ನು ಮೀರಿ ಮುಂದುವರಿಯಲು ಅವಕಾಶ ನೀಡುವಂತೆ ರಾಹುಲ್ ಅವರು ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕೆಂದು ಸಾತ್ಯಕಿ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ. ಪುಣೆ ನ್ಯಾಯಾಲಯ ಮಾರ್ಚ್ 19ರಂದು ಮಾನನಷ್ಟ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.