ಹಿಂದುತ್ವ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಸೆಂಬರ್ 2ರಂದು ಖುದ್ದು ಹಾಜರಾಗುವಂತೆ ಪುಣೆ ನ್ಯಾಯಾಲಯ ಸೋಮವಾರ ಸಮನ್ಸ್ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಮೋಲ್ ಶಿಂಧೆ ಅವರು ಈ ಆದೇಶ ಹೊರಡಿಸಿದ್ದಾರೆ. ಇದೇ ನ್ಯಾಯಾಲಯ ಅಕ್ಟೋಬರ್ 23ರಂದು ಹೊರಡಿಸಿದ್ದ ಸಮನ್ಸ್ ಸ್ವೀಕೃತವಾಗಿಲ್ಲ ಎಂದು ರಾಹುಲ್ ಪರ ವಕೀಲ ಮಿಲಿಂದ್ ಪವಾರ್ ಹೇಳಿದ ಹಿನ್ನೆಲೆಯಲ್ಲಿ ಸಾತ್ಯಕಿ ಪರ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ಮತ್ತೊಮ್ಮೆ ಸಮನ್ಸ್ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಈ ಹಿನ್ನೆಲೆಯಲ್ಲಿ ಸಮನ್ಸ್ ಜಾರಿಯಾಗಿದೆ. ಮುಂದೆ ರಾಹುಲ್ ಹಾಜರಾಗುತ್ತಾರೆ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಲಂಡನ್‌ನಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ರಾಹುಲ್ ಮಾಡಿದ ಭಾಷಣ ಆಧರಿಸಿ ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದರು. ವಿ ಡಿ ಸಾವರ್ಕರ್ ಮತ್ತವರ ಗುಂಪು ಮುಸ್ಲಿಮರನ್ನು ಥಳಿಸಿದ್ದಾಗಿಯೂ ಆಗ ಅವರಿಗೆ ಸಂತೋಷವಾಗಿದ್ದಾಗಿಯೂ ಬರೆದುಕೊಂಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಹೇಳಿಕೆಗಳನ್ನು ನಿರಾಕರಿಸಿರುವ ಸಾತ್ಯಕಿ ಅವರು ರಾಹುಲ್ ಅವರ ಟೀಕೆಗಳು ಮಾನಹಾನಿಕರ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ರಾಹುಲ್ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು. ಅಲ್ಲದೆ ಸಿಆರ್‌ಪಿಸಿ ಸೆಕ್ಷನ್ 357ರ ಅಡಿಯಲ್ಲಿ ತಮಗೆ ಗರಿಷ್ಠ ಮಾನನಷ್ಟ ಪರಿಹಾರ ದೊರಕಿಸಿಕೊಡಬೇಕು ಎಂದು ಅವರು ಕೋರಿದ್ದಾರೆ.