ಸಾವರ್ಕರ್ ಮೊಕದ್ದಮೆ: ದೂರುದಾರರ ವಂಶವೃಕ್ಷ ಬಹಿರಂಗಪಡಿಸಲು ಕೋರಿದ್ದ ರಾಹುಲ್ ಅರ್ಜಿ ತಿರಸ್ಕರಿಸಿದ ಪುಣೆ ನ್ಯಾಯಾಲಯ

ದೂರುದಾರರ ತಾಯಿ ನಾಥುರಾಮ್ ಗೋಡ್ಸೆ ಅವರ ಕಿರಿಯ ಸಹೋದರ ಗೋಪಾಲ್ ಗೋಡ್ಸೆ ಅವರ ಮಗಳು ಮಾತ್ರವಲ್ಲದೆ ಹಿಂದುತ್ವ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಸಕ್ರಿಯ ರಾಜಕೀಯ ವ್ಯಕ್ತಿ ಕೂಡ ಎಂದು ರಾಹುಲ್ ಹೇಳಿದ್ದರು
Rahul Gandhi
Rahul GandhiFacebook
Published on

ವಿನಾಯಕ ಸಾವರ್ಕರ್ ಮಾನಹಾನಿ ಪ್ರಕರಣದ ದೂರುದಾರ ಸಾತ್ಯಕಿ ಸಾವರ್ಕರ್ ಅವರು ತಮ್ಮ ತಾಯಿಯ ವಂಶಾವಳಿಯ ಬಗ್ಗೆ - ನಿರ್ದಿಷ್ಟವಾಗಿ ಹೇಳುವುದಾದರೆ, ಅವರು ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ಕಿರಿಯ ಸಹೋದರ ಗೋಪಾಲ್ ವಿನಾಯಕ ಗೋಡ್ಸೆಯ ಮೊಮ್ಮಗ ಎಂಬ ಮಹತ್ವದ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ದೂರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುಣೆಯ ನ್ಯಾಯಾಲಯ ಈಚೆಗೆ ತಿರಸ್ಕರಿಸಿದೆ.

ಅರ್ಜಿ ತಿರಸ್ಕರಿಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಮೋಲ್ ಶ್ರೀರಾಮ್ ಶಿಂಧೆ, ಪ್ರಕರಣವು ದೂರುದಾರರ ವಂಶವೃಕ್ಷಕ್ಕೆ ಸಂಬಂಧಿಸಿಲ್ಲ ಮತ್ತು ನ್ಯಾಯಾಲಯದ ಮುಂದೆ ಆ ಕುರಿತ ವ್ಯಾಜ್ಯವಿಲ್ಲ. ಆದ್ದರಿಂದ, ಅದನ್ನು ಬಹಿರಂಗಪಡಿಸುವ ಅಥವಾ ತನಿಖೆ ಮಾಡುವ ಅಗತ್ಯವಿಲ್ಲ ಎಂದರು.

Also Read
ಸಾವರ್ಕರ್ ಪ್ರಕರಣ: ರಾಹುಲ್ ವಿರುದ್ಧ ಅರ್ಜಿದಾರ ಸಾತ್ಯಕಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಪುಣೆ ನ್ಯಾಯಾಲಯ

"ಪ್ರಕರಣ ಶ್ರೀಮತಿ ಹಿಮಾನಿ ಅಶೋಕ್ ಸಾವರ್ಕರ್ ಅವರಿಗೆ ಸಂಬಂಧಿಸಿಲ್ಲ ಅಥವಾ ಅವರ ವಂಶವೃಕ್ಷ ಈ ಪ್ರಕರಣದಲ್ಲಿ ವಿವಾದಿತವಾಗಿಲ್ಲ. ಆದ್ದರಿಂದ, ಆರೋಪಿ (ರಾಹುಲ್‌) ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಹೆಚ್ಚಿನ ತನಿಖೆಗೆ ಪ್ರಕರಣ ವಹಿಸುವ ಅಗತ್ಯವಿಲ್ಲ. ಆದ್ದರಿಂದ ವಾದಾಂಶಗಳ ಅರ್ಹತೆ ಕೊರತೆಯ ಅರ್ಜಿಯನ್ನು ತಿರಸ್ಕರಿಸಬಹುದು" ಎಂದು ಮೇ 28 ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ಮಾರ್ಚ್ 2023ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ರಾಹುಲ್‌ ಅವರು ವಿನಾಯಕ ಸಾವರ್ಕರ್ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅರ್ಜಿ ಸಲ್ಲಿಸಿದ್ದರು.

ಮಾನಹಾನಿ ನಡೆದಿದೆಯೋ ಇಲ್ಲವೋ ಎಂಬುದನ್ನು ನಿರ್ಣಯಿಸುವಲ್ಲಿ ಸಾತ್ಯಕಿ ಅವರ ಕೌಟುಂಬಿಕ ಸಂಬಂಧವು ನ್ಯಾಯಾಲಯಕ್ಕೆ ಗಮನಾರ್ಹವಾಗಿ ಪ್ರಸ್ತುತ ಎಂದು ರಾಹುಲ್‌ ವಾದಿಸಿದ್ದರು.

Also Read
ಸಾವರ್ಕರ್ ವಿರುದ್ಧ ಟೀಕೆ: ರಾಹುಲ್ ಗಾಂಧಿಗೆ ಜಾಮೀನು ನೀಡಿದ ಪುಣೆ ನ್ಯಾಯಾಲಯ

ಸಾತ್ಯಕಿ ಅವರು ತನ್ನ ತಂದೆಯ ವಂಶಾವಳಿಯ ಎರಡು ಆವೃತ್ತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಆದರೆ ತಾಯಿಯ ವಂಶಾವಳಿ ವಿವರಿಸುವ ಯತ್ನ ಮಾಡಿಲ್ಲ. ಹೀಗಾಗಿ ಅದನ್ನು ವಿವರಿಸುವ ಅಫಿಡವಿಟ್‌ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಬೇಕು ಎಂದು ರಾಹುಲ್‌ ಕೋರಿದ್ದರು. ಅವರು ಅಫಿಡವಿಟ್‌ ಸಲ್ಲಿಸದಿದ್ದರೆ ಪ್ರಕರಣವನ್ನು ಮತ್ತಷ್ಟು ತನಿಖೆಗಾಗಿ ಪುಣೆಯ ವಿಶ್ರಂಬಾಗ್ ಪೊಲೀಸ್ ಠಾಣೆಗೆ ಸಿಆರ್‌ಪಿಸಿ ಸೆಕ್ಷನ್ 173(8)ರ ಅಡಿ ಉಲ್ಲೇಖಿಸಬೇಕು ಎಂದು ಮನವಿ ಮಾಡಿದ್ದರು.

ಈ ಅರ್ಜಿಯನ್ನು ಪ್ರಸ್ತುತ ನ್ಯಾಯಾಲಯ ತಿರಸ್ಕರಿಸಿದ್ದು ಅರ್ಹತೆಯ ಆಧಾರದದಲ್ಲಿ ಮಾನಹಾನಿ ಮೊಕದ್ದಮೆಯ ವಿಚಾರಣೆ ಇನ್ನೂ ನಡೆಯಬೇಕಿದೆ.

[ಆದೇಶದ ಪ್ರತಿ]

Attachment
PDF
Satyaki_Savarkar_v__Rahul_Gandhi
Preview
Kannada Bar & Bench
kannada.barandbench.com