ಸಾವರ್ಕರ್ ಮೊಕದ್ದಮೆ: ದೂರುದಾರ ಗೋಡ್ಸೆ ವಂಶಸ್ಥರಾಗಿದ್ದು ತನಗೆ ಜೀವ ಭೀತಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ರಾಹುಲ್

ದೂರುದಾರರ ವಂಶಕ್ಕೆ ಸಂಬಂಧಿಸಿದ ಹಿಂಸಾತ್ಮಕ ಪ್ರವೃತ್ತಿಗಳ ದಾಖಲಿತ ಚರಿತ್ರೆ ಗಮನಿಸಿದರೆ ರಾಹುಲ್ ಅವರಿಗೆ ತೊಂದರೆ ಎದುರಾಗಬಹುದು ಎಂಬ ಸ್ಪಷ್ಟ ಮತ್ತು ಸಮಂಜಸ ಆತಂಕ ಇದೆ ಎಂದು ವಾದಿಸಲಾಯಿತು.
Rahul Gandhi
Rahul Gandhi Facebook
Published on

ತಮ್ಮ ಇತ್ತೀಚಿನ ರಾಜಕೀಯ ಹೋರಾಟಗಳು ಮತ್ತು ತಮ್ಮ ವಿರುದ್ಧದ ಮಾನಹಾನಿ ಮೊಕದ್ದಮೆ ಹೂಡಿರುವ ದೂರುದಾರರಾದ ಸಾತ್ಯಕಿ ಸಾವರ್ಕರ್ ಅವರ ವಂಶಾವಳಿ (ಸಾತ್ಯಕಿ ಅವರು ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯ ವಂಶಸ್ಥ) ಗಮನಿಸಿದರೆ ತಮಗೆ ಜೀವ ಬೆದರಿಕೆ ಇರುವುದಾಗಿ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಪುಣೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮಾನಹಾನಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ತನ್ನ ಸುರಕ್ಷತೆ ಮತ್ತು ಪ್ರಕರಣದ ವಿಚಾರಣೆಯ ನ್ಯಾಯಸಮ್ಮತತೆಗೆ "ಗಂಭೀರ ಆತಂಕ" ಇರುವುದನ್ನು ಗಮನಿಸಬೇಕು ಎಂದು ರಾಹುಲ್‌ ಒತ್ತಾಯಿಸಿದ್ದಾರೆ.

Also Read
ಸಾವರ್ಕರ್ ಕುರಿತ ಹೇಳಿಕೆ ಪ್ರಕರಣ: ರಾಹುಲ್ ಅರ್ಜಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉ. ಪ್ರದೇಶ ಸರ್ಕಾರದ ವಿರೋಧ

ಹೀಗಾಗಿ ತನಗೆ ಸರ್ಕಾರ ರಕ್ಷಣೆ ಒದಗಿಸಬೇಕು. ಅದು ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆ ಎಂದು ಅವರು ಹೇಳಿದ್ದಾರೆ.

ಮಹಾತ್ಮ ಗಾಂಧಿ ಅವರ ಹತ್ಯೆಯು ಭಾವೋದ್ವೇಗದಿಂದ ನಡೆದ ಹತ್ಯೆಯಲ್ಲ, ಬದಲಿಗೆ ಅದು ನಿರ್ದಿಷ್ಟ ಸಿದ್ಧಾಂತದಲ್ಲಿ ಬೇರೂರಿದ ಸಂಚೊಂದರ ಯೋಜಿತ ಫಲಿತಾಂಶವಾಗಿದ್ದು, ನಿಶ್ಶಸ್ತ್ರವಾಗಿದ್ದ ವ್ಯಕ್ತಿಯೊಬ್ಬರ ವಿರುದ್ಧ ನಡೆದ ಉದ್ದೇಶಪೂರ್ವಕ ಹಿಂಸೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ನಡೆಸಿರುವ ಮತಗಳ್ಳತನದ ವಿರುದ್ಧದ ಹೋರಾಟವು ಅವರ ರಾಜಕೀಯ ವಿರೋಧಿಗಳಲ್ಲಿ ಅವರೆಡೆಗೆ ವೈರತ್ವವನ್ನು ಹೆಚ್ಚಿಸಿದೆ ಎಂದೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ವಕೀಲ ಮಿಲಿಂದ್ ದತ್ತಾತ್ರೇಯ ಪವಾರ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಎರಡು ಸಾರ್ವಜನಿಕ ಬೆದರಿಕೆಗಳನ್ನು ಉಲ್ಲೇಖಿಸಲಾಗಿದೆ ಒಂದು ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟು ಅವರು ತಮ್ಮನ್ನು ದೇಶದ ನಂಬರ್‌ ಒನ್‌ ಭಯೋತ್ಪಾದಕ ಎಂದು ಕರೆದಿರುವುದು ಹಾಗೂ ಬಿಜೆಪಿ ನಾಯಕ ತರ್ವಿಂದರ್‌ ಸಿಂಗ್‌ ಮಾರ್ವಾ ಅವರು ನಿನ್ನ ಅಜ್ಜಿಗೆ (ರಾಹುಲ್‌ ಅಜ್ಜಿ ಇಂದಿರಾಗಾಂಧಿ ಭಯೋತ್ಪಾದಕರಿಂದ ಮಡಿದಿದ್ದರು) ಆದ ಗತಿಯೇ ನಿನಗೂ ಆಗಬಹುದು ಎಂದಿರುವುದು. ಸೆಪ್ಟೆಂಬರ್‌ 10ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಮಾರ್ಚ್ 2023ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ರಾಹುಲ್‌ ಅವರು ವಿನಾಯಕ ಸಾವರ್ಕರ್ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅರ್ಜಿ ಸಲ್ಲಿಸಿದ್ದರು.

ಸಾವರ್ಕರ್ ಅವರ ಬರಹಗಳಲ್ಲಿ ವಿವರಿಸಲಾಗಿದೆ ಎನ್ನಲಾದ ಘಟನೆಯನ್ನು ರಾಹುಲ್‌ ಉಲ್ಲೇಖಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪುಸ್ತಕದಲ್ಲಿ ಸಾವರ್ಕರ್‌ ಅವರು ಒಮ್ಮೆ ತಾನು ಮತ್ತು ತನ್ನ ಸಂಗಡಿಗರು ಓರ್ವ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾಗಿಯೂ, ಅದೊಂದು "ಆಹ್ಲಾದಕರ" ಅನುಭವವಾಗಿತ್ತು ಎಂದು ಹೇಳಿರುವುದನ್ನು ರಾಹುಲ್‌ ಉಲ್ಲೇಖಿಸಿದ್ದರು ಎಂದು ವರದಿಯಾಗಿತ್ತು.

Also Read
ಸಾವರ್ಕರ್‌ ಕುರಿತ ಹೇಳಿಕೆ: ಭಾಷಣದಲ್ಲಿ ಉಲ್ಲೇಖಿಸಿದ ಪುಸ್ತಕವನ್ನು ಹಾಜರುಪಡಿಸಲು ರಾಹುಲ್‌ಗೆ ಹೇಳಲಾಗದು ಎಂದ ನ್ಯಾಯಾಲಯ

ಆದರೆ, ಇಂತಹ ಯಾವುದೇ ಘಟನೆಯ ಉಲ್ಲೇಖ ಸಾವರ್ಕರ್ ಅವರ ಯಾವುದೇ ಕೃತಿಗಳಲ್ಲಿ ಇಲ್ಲ ಎಂದು ಸಾತ್ಯಕಿ ಅವರು ಹೇಳಿದ್ದು, ರಾಹುಲ್‌ ಹೇಳಿಕೆ ಸುಳ್ಳು ಹಾಗೂ ಮಾನಹಾನಿಕರ ಎಂದು ಆರೋಪಿಸಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ರಾಹುಲ್‌ ಅವರಿಗೆ ಶಿಕ್ಷೆ ವಿಧಿಸಬೇಕು. ಜೊತೆಗೆ ಸಿಆರ್‌ಪಿಸಿ ಸೆಕ್ಷನ್ 357ರ ಅಡಿಯಲ್ಲಿ ಪರಿಹಾರ ದೊರಕಿಸಿಕೊಡಬೇಕು ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com