ಸಾವರ್ಕರ್ ಕುರಿತ ಹೇಳಿಕೆ ಪ್ರಕರಣ: ರಾಹುಲ್ ಅರ್ಜಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉ. ಪ್ರದೇಶ ಸರ್ಕಾರದ ವಿರೋಧ

ರಾಹುಲ್‌ಗೆ ನೀಡಲಾಗಿದ್ದ ಸಮನ್ಸ್‌ಗೆ ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ತಡೆ ನೀಡಿತ್ತು. ಆದರೆ ಸಾವರ್ಕರ್ ಬ್ರಿಟಿಷರ ಅನುಯಾಯಿಯಾಗಿದ್ದು ಅವರಿಂದ ಪಿಂಚಣಿ ಪಡೆಯುತ್ತಿದ್ದರು ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಸಾವರ್ಕರ್ ಕುರಿತ ಹೇಳಿಕೆ ಪ್ರಕರಣ: ರಾಹುಲ್ ಅರ್ಜಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉ. ಪ್ರದೇಶ ಸರ್ಕಾರದ ವಿರೋಧ
Published on

ಹಿಂದುತ್ವವಾದಿ ಚಿಂತಕ ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ ಆರೋಪದಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ಪ್ರದೇಶ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ರಾಹುಲ್‌ "ಪೂರ್ವ ಯೋಜಿತ ಕ್ರಮಗಳ ಮೂಲಕ ಉದ್ದೇಶಪೂರ್ವಕವಾಗಿ ದ್ವೇಷ ಹರಡಿದ್ದಾರೆ" ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದ್ದು, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅವರ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದೆ.

Also Read
ಸಾವರ್ಕರ್‌ ಕುರಿತ ಹೇಳಿಕೆ: ತಾನು ನಿರ್ದೋಷಿ ಎಂದು ರಾಹುಲ್‌ ಔಪಚಾರಿಕ ಸಮರ್ಥನೆ; ವಿಚಾರಣೆ ಆರಂಭಕ್ಕೆ ಸಿದ್ಧತೆ

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಾಸ್ತವಾಂಶ ಮತ್ತು ಸಾಕ್ಷ್ಯಗಳಿಗೆ ಅನುಗುಣವಾಗಿ ತನ್ನ ನ್ಯಾಯಾಂಗ ವಿವೇಚನೆ ಬಳಸಿದೆ. ಐಪಿಸಿ ಸೆಕ್ಷನ್‌ 153-ಎ ಮತ್ತು 505ರ ಅಡಿ ಅದು ಮೇಲ್ನೋಟಕ್ಕೆ ಪ್ರಕರಣದ ತೀರ್ಪು ನೀಡಿದೆ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ನೋಟಿಸ್‌ಗೆ ಅದು ಪ್ರತಿಕ್ರಿಯಿಸಿದೆ.

ಡಿಸೆಂಬರ್ 12, 2024 ರಂದು ಲಖನೌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಹುಲ್‌ ಅವರಿಗೆ ಸಮನ್ಸ್ ನೀಡಿತ್ತು. ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ಇದಕ್ಕೆ ತಡೆ ನೀಡಿತ್ತು. ಆದರೆ ಸಾವರ್ಕರ್ ಬ್ರಿಟಿಷರ ಅನುಯಾಯಿಯಾಗಿದ್ದು ಅವರಿಂದ ಪಿಂಚಣಿ ಪಡೆಯುತ್ತಿದ್ದರು ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ವಿರುದ್ಧ ರಾಹುಲ್ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದ್ದು ಇದೇ ರೀತಿಯ ಹೇಳಿಕೆ ನೀಡಿದರೆ ನ್ಯಾಯಾಲಯ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಎಚ್ಚರಿಕೆನೀಡಿತ್ತು.

"ಕಾನೂನಿನ ಉತ್ತಮ ಅಂಶವನ್ನು ನೀವು ಎತ್ತಿರುವುದರಿಂದ ನಿಮಗೆ ತಡೆಯಾಜ್ಞೆ ಸಿಗುತ್ತದೆ. ಆದರೆ ನೀವು ಭವಿಷ್ಯದಲ್ಲಿ ನೀಡುವ ಇಂತಹ ಹೇಳಿಕೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲಾಗುವುದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎರಡು‌ ಮಾತಿಲ್ಲ. ಅವರು ನಮಗೆ ಸ್ವಾತಂತ್ರ್ಯ ನೀಡಿದ್ದಾರೆ, ನಾವು ಅವರನ್ನು ಈ ರೀತಿ ಕಾಣಬೇಕೆ? ನೋಟಿಸ್ ನೀಡಿ. ಆಕ್ಷೇಪಿಸಲಾದ ಆದೇಶಕ್ಕೆ ತಡೆ ನೀಡಿ" ಎಂದು ನ್ಯಾಯಾಲಯ ನಿರ್ದೇಶಿಸಿತ್ತು.

Also Read
ಸಾವರ್ಕರ್‌ ಕುರಿತ ಹೇಳಿಕೆ: ಭಾಷಣದಲ್ಲಿ ಉಲ್ಲೇಖಿಸಿದ ಪುಸ್ತಕವನ್ನು ಹಾಜರುಪಡಿಸಲು ರಾಹುಲ್‌ಗೆ ಹೇಳಲಾಗದು ಎಂದ ನ್ಯಾಯಾಲಯ

ರಾಹುಲ್ ಅವರ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಾವರ್ಕರ್ ಅವರನ್ನು ಶ್ಲಾಘಿಸಿ ಪತ್ರ ಬರೆದಿದ್ದರು ಎಂಬುದನ್ನು ಪೀಠ ಪ್ರಸ್ತಾಪಿಸಿತ್ತು. ಇದಕ್ಕೂ ಮುನ್ನ ಅಲಾಹಾಬಾದ್‌ ಹೈಕೋರ್ಟ್‌ ರಾಹುಲ್‌ಗೆ ಪರಿಹಾರ ನೀಡಲು ನಿರಾಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಕೀಲ ನೃಪೇಂದ್ರ ಪಾಂಡೆ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಹಗೆತನಕ್ಕೆ ಕುಮ್ಮಕ್ಕು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಮೊಕದ್ದಮೆ ಹೂಡಲಾಗಿತ್ತು. ನವೆಂಬರ್ 17, 2022ರಂದು ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವರ್ಕರ್ ಅವರನ್ನು ಬ್ರಿಟಿಷರ ಅನುಯಾಯಿ ಎಂದು ಉಲ್ಲೇಖಿಸಿದ್ದರು. ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರು ಎಂದು ಹೇಳಿದ್ದರು. ಇದಕ್ಕೆ ಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದರು.

Kannada Bar & Bench
kannada.barandbench.com