ಬ್ಯಾಂಕ್‌ಗೆ ವಂಚನೆ ಪ್ರಕರಣ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ವಿಧಿಸಿದ್ದ ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್‌

ವಿಶೇಷ ನ್ಯಾಯಾಲಯ ವಿಧಿಸಿರುವ ₹5.25 ಲಕ್ಷ ದಂಡದ ಮೊತ್ತವನ್ನು ಠೇವಣಿ ಇಡಬೇಕು ಎಂಬ ಷರತ್ತಿಗೆ ಒಳಪಟ್ಟು ಕೃಷ್ಣಯ್ಯ ಶೆಟ್ಟಿಗೆ ವಿಧಿಸಿರುವ ಮೂರು ವರ್ಷ ಜೈಲು ಶಿಕ್ಷೆ ಅಮಾನತುಗೊಳಿಸಿರುವ ನ್ಯಾಯಾಲಯ.
ಬ್ಯಾಂಕ್‌ಗೆ ವಂಚನೆ ಪ್ರಕರಣ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ವಿಧಿಸಿದ್ದ ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್‌
Published on

ನಕಲಿ ವೇತನ ಪ್ರಮಾಣಪತ್ರಗಳನ್ನು ಸಲ್ಲಿಸಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಿಂದ ₹7.17 ಕೋಟಿ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಅಮಾನತುಗೊಳಿಸಿದೆ.

ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ಪರಿಗಣಿಸಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2025ರ ಫೆಬ್ರವರಿ 6ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಮಾಜಿ ಸಚಿವ ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಕೃಷ್ಣಯ್ಯ ಶೆಟ್ಟಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಮೇಲ್ಮನವಿದಾರರಿಗೆ ವಿಶೇಷ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣವು ವಂಚನೆ ಆರೋಪಕ್ಕೆ ಸಂಬಂಧಿಸಿದೆ. ಮೇಲ್ಮನವಿ ಕುರಿತು ನ್ಯಾಯಾಲಯವು ದೀರ್ಘವಾಗಿ ವಾದ ಆಲಿಸಬೇಕು. ಶಿಕ್ಷೆ ಪ್ರಮಾಣ ಮೂರು ವರ್ಷವಾಗಿದೆ. ಈಗಾಗಲೇ ಶಿಕ್ಷೆಯನ್ನು ವಿಶೇಷ ನ್ಯಾಯಾಲಯವೇ ಅಮಾನತ್ತಿನಲ್ಲಿರಿಸಿದೆ. ಆ ಆದೇಶವನ್ನು ಮುಂದುವರಿಸಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರರಿಗೆ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಹೊರಡಿಸಿರುವ ಆದೇಶವನ್ನು ಅಮಾನತ್ತಿನಲ್ಲಿ ಇರಿಸಿತು. ದಂಡದ ಮೊತ್ತವನ್ನು ಪ್ರಕರಣದ ಸಂತ್ರಸ್ತರಿಗೆ ಪರಿಹಾರವಾಗಿ ವಿತರಿಸಲು ಆರೋಪಿಗೆ ನಿರ್ದೇಶಿಸಿದ್ದ ವಿಶೇಷ ನ್ಯಾಯಾಲಯದ ತೀರ್ಪಿನ ಭಾಗಕ್ಕೂ ತಡೆಯಾಜ್ಞೆ ನೀಡಿತು. ಅಲ್ಲದೆ, ವಿಶೇಷ ನ್ಯಾಯಾಲಯ  ವಿಧಿಸಿರುವ ₹5.25 ಲಕ್ಷ ದಂಡವನ್ನು ಠೇವಣಿ ಇಡಬೇಕು ಎಂಬ ಷರತ್ತಿಗೆ ಒಳಪಟ್ಟು ಕೃಷ್ಣಯ್ಯ ಶೆಟ್ಟಿಗೆ ವಿಧಿಸಿರುವ ಶಿಕ್ಷೆಯನ್ನು ನ್ಯಾಯಾಲಯ ಅಮಾನತುಗೊಳಿಸಿದೆ. ಇದೇ ವೇಳೆ ಸಿಬಿಐಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಕೃಷ್ಣಯ್ಯ ಶೆಟ್ಟಿ ಮತ್ತು ಇತರ ಆರೋಪಿಗಳು ಮೆಸರ್ಸ್‌ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ ಮೂಲಕ ನಕಲಿ ವೇತನ ಸರ್ಟಿಫಿಕೇಟ್‌ಗಳು, ಎಚ್‌ಎಎಲ್‌, ಐಟಿಐ, ಬಿಇಎಂಎಲ್‌, ಬಿಎಂಟಿಸಿ, ಬೆಸ್ಕಾಂ, ಎಡಿಇ, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್‌ ನೋವಾ ಟೆಕ್ನಾಲಜೀಸ್‌ ಇತ್ಯಾದಿ ಸಂಸ್ಥೆಗಳಲ್ಲಿ ನಾನಾ ಕಾರಣಗಳಿಂದ ಕೆಲಸ ತೊರೆದ ಉದ್ಯೋಗಿಗಳ ಫಾರ್ಮ್‌ ನಂಬರ್‌ 16 ಸಲ್ಲಿಸಿ ₹7.17 ಕೋಟಿ ಮೊತ್ತದ 181 ಗೃಹ ಸಾಲಗಳನ್ನು ಪಡೆದಿದ್ದಾರೆ. ಈ ಪೈಕಿ ವಿವಿಧ ಖಾತೆಗಳ ₹3.53 ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದು, ಆ ಮೂಲಕ ಕಾನೂನುಬಾಹಿರವಾಗಿ ಬ್ಯಾಂಕ್‌ಗೆ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

Also Read
ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರಿಗೆ ತಲಾ 3 ವರ್ಷ ಜೈಲು; ₹21.5 ಲಕ್ಷ ದಂಡ ವಿಧಿಸಿದ ವಿಶೇಷ ನ್ಯಾಯಾಲಯ

ಬೆಂಗಳೂರಿನ ಕೆ ಜಿ ರಸ್ತೆಯಲ್ಲಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಮುಖ್ಯ ವಿಚಕ್ಷಣಾಧಿಕಾರಿಯು 30.1.2008ರಂದು ನೀಡಿದ ದೂರು ಆಧರಿಸಿ ಸಿಬಿಐ ಐಪಿಸಿ ಸೆಕ್ಷನ್‌ಗಳಾದ 120ಬಿ, 409, 419, 420, 467 ಮತ್ತು 471 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಪ್ರಕರಣ ದಾಖಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ವ್ಯವಸ್ಥಾಪಕ ಹಾಗೂ ಒಂದನೇ ಆರೋಪಿ ಎಂಟಿವಿ ರೆಡ್ಡಿ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಕೆ ಮುನಿರಾಜು, ಕೆ ಶ್ರೀನಿವಾಸ್‌ ಅವರನ್ನು ದೋಷಿಗಳು ಎಂದು ತೀರ್ಮಾನಿಸಿತ್ತು.

ದಂಡದ ಮೊತ್ತದ ಪೈಕಿ ರೆಡ್ಡಿ ಎಂಟಿವಿ ₹7.75 ಲಕ್ಷ, ಕೃಷ್ಣಯ್ಯ ಶೆಟ್ಟಿ ₹5.25 ಲಕ್ಷ, ಕೆ ಮುನಿರಾಜು ₹4.25 ಲಕ್ಷ, ಕೆ ಶ್ರೀನಿವಾಸ್‌ ₹4.25 ಲಕ್ಷ ಪಾವತಿಸಬೇಕು ಎಂದು ತೀರ್ಪು ನೀಡಿತ್ತು.

Kannada Bar & Bench
kannada.barandbench.com