
ಮರಾಠಿ ಭಾಷಿಗರು ಕರ್ನಾಟಕದಲ್ಲಿ ನೆಲೆಸಿರುವ ಕೆಲವು ಭಾಗಗಳನ್ನು ಮಹಾರಾಷ್ಟ್ರದ ವ್ಯಾಪ್ತಿಗೆ ಸೇರಿಸಬೇಕು ಎಂದು ಕೋರಿ ಮಹಾರಾಷ್ಟ್ರ ಸರ್ಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಕೈಗೆತ್ತಿಕೊಳ್ಳಲಿಲ್ಲ.
ರಾಜ್ಯ ಪುನರ್ ವಿಂಗಡಣಾ ಕಾಯಿದೆ 1956ರ ಸೆಕ್ಷನ್ 3,7 & 8 ರ ಅಡಿ ಕೆಲವು ಭಾಗಗಳು ಕರ್ನಾಟಕಕ್ಕೆ ಅಧಿಕಾರ ಮೀರಿ ಸೇರ್ಪಡೆಯಾಗಿದ್ದು, ಇದು ಸಂವಿಧಾನದ 14 ಮತ್ತು 29ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ 2004ರಲ್ಲಿ ಅಸಲು ದಾವೆ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ವಿ ರಾಮಸುಬ್ರಣಿಯನ್ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಬೇಕಿತ್ತು.
ಜಲ್ಲಿಕಟ್ಟು ಓಟಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರ ನೇತೃತ್ವದ ಸಾಂವಿಧಾನಿಕ ಪೀಠವು ವ್ಯಸ್ತವಾಗಿದ್ದ ಹಿನ್ನೆಲೆಯಲ್ಲಿ ಅವರದೇ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ಕೈಗೊಳ್ಳಲಿಲ್ಲ.