ಶರಣರನ್ನು ಹೊರಗಿಟ್ಟು 3 ದಿನದಲ್ಲಿ ಮಠ, ಎಸ್‌ಜೆಎಂ ವಿದ್ಯಾಪೀಠ ನಿರ್ವಹಣೆಗೆ ಸಮಿತಿ ರಚಿಸಲು ಸರ್ಕಾರಕ್ಕೆ ಸುಪ್ರೀಂ ಆದೇಶ

ಮಧ್ಯಂತರ ನಿರ್ದೇಶನವು ಅರ್ಜಿಗಳು ಇತ್ಯರ್ಥವಾಗುವವರೆಗೆ ಚಾಲ್ತಿಯಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಸ್ಪಷ್ಟಪಡಿಸಿದೆ.
Shivamurthy Murugha Sharanaru and Supreme Court
Shivamurthy Murugha Sharanaru and Supreme Court

ಚಿತ್ರದುರ್ಗದ ಮುರುಘಾ ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣೆಗೆ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ಎಚ್‌ ಏಕಾಂತಯ್ಯ (ಅರ್ಜಿದಾರ) ಅವರನ್ನು ಹೊರಗಿಟ್ಟು ಮೂರು ದಿನಗಳಲ್ಲಿ ಸಮಿತಿ ರಚಿಸುವಂತೆ ಮಂಗಳವಾರ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಎಚ್‌ ಏಕಾಂತಯ್ಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಪ್ರಶಾಂತ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಮಠ, ಎಸ್‌ಜೆಎಂ ವಿದ್ಯಾಪೀಠದ ಅಡಿ ಬರುವ ಸಂಸ್ಥೆಗಳ ನಿರ್ವಹಣೆಗೆ ಈಗಾಗಲೇ ಸಮಿತಿ ರಚಿಸದಿದ್ದಲ್ಲಿ ಮೂರು ದಿನಗಳ ಒಳಗೆ ಅರ್ಜಿದಾರ ಏಕಾಂತಯ್ಯ ಮತ್ತು ಪ್ರತಿವಾದಿ ಶಿವಮೂರ್ತಿ ಮುರುಘಾ ಶರಣರನ್ನು ಹೊರಗಿಟ್ಟು ರಾಜ್ಯ ಸರ್ಕಾರ ಸಮಿತಿ ರಚಿಸಬೇಕು. ಈ ಮಧ್ಯಂತರ ನಿರ್ದೇಶನವು ಅರ್ಜಿಗಳು ಇತ್ಯರ್ಥವಾಗುವವರೆಗೆ ಚಾಲ್ತಿಯಲ್ಲಿರಲಿದೆ ಎಂದು ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಆರಂಭದಲ್ಲಿ ಮಠ, ಸಂಸ್ಥೆಗಳ ಮೇಲ್ವಿಚಾರಣೆಯನ್ನು ರಾಜ್ಯ ಸರ್ಕಾರ ರಚಿಸಿರುವ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ನೋಡಿಕೊಳ್ಳುತ್ತಿದೆ ಎಂದರು. ಬಳಿಕ ಈ ಸೂಚನೆಯನ್ನು ಖಾತರಿಪಡಿಸಿಕೊಂಡು ಅದನ್ನು ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ಸಲ್ಲಿಸಲು ಕಾಲಾವಕಾಶ ಬೇಕೆಂದು ಕೋರಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಶಿವಮೂರ್ತಿ ಮುರುಘಾ ಶರಣರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಈಗಾಗಲೇ ಪ್ರತ್ಯುತ್ತರ ಅಫಿಡವಿಟ್‌ ಸಲ್ಲಿಸಿದ್ದು, ಹೆಚ್ಚುವರಿ ದಾಖಲೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಕೋರಿದ್ದಾರೆ. ಅದಕ್ಕೂ ಸಮ್ಮತಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಅಂತಿಮವಾಗಿ ಪೀಠವು ವಿಚಾರಣೆಯನ್ನು 2024ರ ಏಪ್ರಿಲ್‌ 2ಕ್ಕೆ ಮುಂದೂಡಿದೆ.

Also Read
ಮುರುಘಾ ಮಠ, ವಿದ್ಯಾಪೀಠದ ಆಡಳಿತ ಶಿವಮೂರ್ತಿ ಶರಣರಿಗೆ ಹಸ್ತಾಂತರ

ಚಿತ್ರದುರ್ಗದ ಮುರುಘಾ ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ಆಡಳಿತವನ್ನು ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು 2023ರ ಡಿಸೆಂಬರ್‌ 5ರಂದು ಹಸ್ತಾಂತರಿಸಿರುವುದಾಗಿ ತಿಳಿದು ಬಂದಿತ್ತು. ಈ ಕುರಿತು ಮಠವು ಡಿಸೆಂಬರ್‌ 7ರಂದು ಪ್ರಕಟಣೆ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ಹೊರತುಪಡಿಸಿ ಯಾವುದೇ ನೀತಿ-ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ವಿದ್ಯಾಪೀಠದ ಅಧ್ಯಕ್ಷರಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ 2024ರ ಜನವರಿ 9ರಂದು ಮೌಖಿಕವಾಗಿ ಸೂಚಿಸಿತ್ತು.

Also Read
ವಿದ್ಯಾಪೀಠದ ದೈನಂದಿನ ವ್ಯವಹಾರದ ಹೊರತಾದ ನಿರ್ಧಾರ ಕೈಗೊಳ್ಳುವಂತಿಲ್ಲ: ಮುರುಘಾ ಶ್ರೀಗೆ ಹೈಕೋರ್ಟ್‌ ಸೂಚನೆ

ಪೋಕ್ಸೊ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಮಠದ ಎಸ್‌ಜೆ‌ಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಆಕ್ಷೇಪಿಸಿ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕ ಆರ್‌ ನಾಗರಾಜ್ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ವಿಭಾಗೀಯ ಪೀಠ ಮೇಲಿನಂತೆ ಹೇಳಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

2023ರ ನವೆಂಬರ್‌ 8ರಂದು ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಹೈಕೋರ್ಟ್‌ ಆದೇಶ ಮಾಡಿತ್ತು.

Attachment
PDF
H Ekanthaiah Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com