ನ್ಯಾಯಾಂಗ ನಿಂದನೆ ಅರ್ಜಿಗೆ ಎಚ್‌ಡಿಕೆ ಆಕ್ಷೇಪ: ಹೈಕೋರ್ಟ್‌ ಎಡತಾಕಲು ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂ

ನ್ಯಾಯಾಂಗ ನಿಂದನೆ ಅರ್ಜಿಯ ಸಂಬಂಧ ಹೈಕೋರ್ಟ್‌ 2020ರಿಂದ 2025ರವರೆಗೆ ಮಾಡಿರುವ ಒಟ್ಟು 21 ಆದೇಶಗಳನ್ನು ಅರ್ಜಿಯಲ್ಲಿ ಕುಮಾರಸ್ವಾಮಿ ಪ್ರಶ್ನಿಸಿದ್ದರು.
H D Kumaraswamy & SC
H D Kumaraswamy & SC
Published on

ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿನ‌ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಹೈಕೋರ್ಟ್‌ ಎಡತಾಕಲು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಸೂಚಿಸಿ, ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಇತ್ಯರ್ಥಪಡಿಸಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯ ಭಾಗವಾಗಿ ಮಾಡಲಾಗಿರುವ 21 ಆದೇಶಗಳನ್ನು ಪ್ರಶ್ನಿಸಿ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್‌ ಮತ್ತು ಎಸ್‌ವಿಎನ್‌ ಭಟ್ಟಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ನ್ಯಾಯಾಂಗ ನಿಂದನೆ ಅರ್ಜಿ ಪ್ರಕ್ರಿಯೆಯು ಕುಮಾರಸ್ವಾಮಿ ಅವರ ಬೆನ್ನ ಹಿಂದೆ ನಡೆಯುತ್ತಿದೆ ಎಂಬುದನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಬಹುದು” ಎಂದು ಅರ್ಜಿದಾರರಿಗೆ ಸೂಚಿಸಿರುವ ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿದೆ.

ನ್ಯಾಯಾಂಗ ನಿಂದನೆ ಅರ್ಜಿಯ ಭಾಗವಾಗಿ 21.12.2020, 21.01.2021, 16.02.2021, 15.12.2022, 12.01.2023, 19.01.2023, 31.01.2023, 07.02.2023, 15.02.2023, 09.03.2023, 16.03.2023, 11.04.2023, 31.05.2023, 08.06.2023, 21.09.2023, 27.09.2023, 15.03.2024, 09.08.2024, 24.10.2024, 07.01.2025 ಮತ್ತು 29.01.2025ರಂದು ಹೈಕೋರ್ಟ್‌ ಮಾಡಿರುವ ಆದೇಶಗಳನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದರು. 03.03.2021ರಂದು ಲೋಕಾಯುಕ್ತವು ತನಿಖಾ ವರದಿ ಸಲ್ಲಿಸಿರುವುದರಿಂದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಿರರ್ಥಕವಾಗಿದ್ದು ವ್ಯಾಪ್ತಿ ಮುಂದುವರಿಸಿರುವುದು ನ್ಯಾಯಾಂಗದ ಗುರಿ ಮೀರಿದ ಚಟುವಟಿಕೆಯಾಗಿದ್ದು, ಅದರಿಂದ ಕುಮಾರಸ್ವಾಮಿ ಅವರ ವಿರುದ್ಧ ಪೂರ್ವಾಗ್ರಹ ಉಂಟು ಮಾಡಿದೆ ಎಂದು ಆಕ್ಷೇಪಿಸಲಾಗಿತ್ತು.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿನ ಸರ್ವೇ ನಂಬರ್‌ 7, 8, 9, 10, 16, 17 ಮತ್ತು 79ರ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಮಾಜಿ ಸಂಸದ ಜಿ ಮಾದೇಗೌಡ ಅವರು 2011ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ 05.08.2014ರಂದು ಲೋಕಾಯುಕ್ತವು ರಾಜ್ಯ ಸರ್ಕಾರಕ್ಕೆ ಆದೇಶಿಸಿ, ಅಕ್ರಮ ಒತ್ತುವರಿ ತೆರವು ಮಾಡುವಂತೆ ಆದೇಶಿಸಿತ್ತು.

Also Read
ಎಚ್‌ಡಿಕೆ ಭೂಒತ್ತುವರಿ: ದಾಖಲೆ ನಾಪತ್ತೆ ಎಂದ ಅಧಿಕಾರಿ ಕಠಾರಿಯಾ, ಜಮೀನು ನಾಪತ್ತೆಯಾಗಬಹುದು ಎಂದು ಹೈಕೋರ್ಟ್‌ ಕಿಡಿ

ಇದನ್ನು ಆಧರಿಸಿ ಸರ್ಕಾರೇತರ ಸಂಸ್ಥೆಯು ಸಮಾಜ ಪರಿವರ್ತನಾ ಸಮುದಾಯವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಲೋಕಾಯುಕ್ತ ವರದಿ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಸರ್ಕಾರದ ಮುಚ್ಚಳಿಕೆ ಆಧರಿಸಿ ಹೈಕೋರ್ಟ್‌ 14.01.2020ರಂದು ಪಿಐಎಲ್‌ ಇತ್ಯರ್ಥಪಡಿಸಿತ್ತು. ಈ ಆದೇಶ ಜಾರಿ ಮಾಡದೆ ಇದ್ದುದನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ಕುಮಾರಸ್ವಾಮಿ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟ್ಗಿ, ವಕೀಲ ನಿಶಾಂತ್‌ ಎ ವಿ, ಹರ್ಷ ತ್ರಿಪಾಠಿ ಮತ್ತು ಬಾಲಾಜಿ ಶ್ರೀನಿವಾಸನ್‌ ಹಾಜರಿದ್ದರು. ಸಮಾಜ ಪರಿವರ್ತನಾ ಸಮುದಾಯದ ಪರವಾಗಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ ವಾದಿಸಿದರು.

Kannada Bar & Bench
kannada.barandbench.com