ರೇಣುಕಾಸ್ವಾಮಿ ಕೊಲೆ: ಜಾಮೀನು ನಿರಾಕರಿಸಿದ್ದ ತೀರ್ಪು ಮರುಪರಿಶೀಲನೆ ಕೋರಿದ್ದ ಪವಿತ್ರಾ ಅರ್ಜಿ ವಜಾಗೊಳಿಸಿದ ಸುಪ್ರೀಂ

“ಆಕ್ಷೇಪಾರ್ಹವಾದ ತೀರ್ಪು ಮತ್ತು ಸಂಬಂಧಿತ ದಾಖಲೆಗಳನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಲಾಗಿದೆ. ನಮ್ಮ ಅಭಿಪ್ರಾಯದಲ್ಲಿ ಆ ತೀರ್ಪನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ. ಹೀಗಾಗಿ, ಅರ್ಜಿ ವಜಾಗೊಳಿಸಲಾಗಿದೆ” ಎಂದಿರುವ ಸುಪ್ರೀಂ ಕೋರ್ಟ್‌.
Darshan, Pavitra Gowda & Supreme Court
Darshan, Pavitra Gowda & Supreme Court
Published on

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ವಜಾ ಮಾಡಿದೆ.

ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದನ್ನು ಬದಿಗೆ ಸರಿಸಿ ಆಗಸ್ಟ್‌ 14ರಂದು ಮಾಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್‌ ಮಹಾದೇವನ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Justice JB Pardiwala and Justice R Mahadevan
Justice JB Pardiwala and Justice R Mahadevan

“ಪವಿತ್ರಾ ಗೌಡ, ನಟ ದರ್ಶನ್‌ ಸೇರಿದಂತೆ ಏಳು ಮಂದಿಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು 14-8-2025ರಂದು ಪುರಸ್ಕರಿಸಲಾಗಿತ್ತು. ಈ ತೀರ್ಪು ಮತ್ತು ಸಂಬಂಧಿತ ದಾಖಲೆಗಳನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಲಾಗಿದೆ. ನಮ್ಮ ಅಭಿಪ್ರಾಯದಲ್ಲಿ ಆ ತೀರ್ಪನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ. ಹೀಗಾಗಿ, ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

“ಆಗಸ್ಟ್‌ 14ರಂದು ಸುಪ್ರೀಂ ಕೋರ್ಟ್‌ ಪೀಠವು ಹೈಕೋರ್ಟ್ ಆದೇಶ ವಿಕ್ಷಿಪ್ತ ದೋಷಗಳಿಂದ ಕೂಡಿದೆ. ಹೈಕೋರ್ಟ್ ಆದೇಶ ಅಧಿಕಾರದ ಯಾಂತ್ರಿಕ ಬಳಕೆಯನ್ನು ಬಿಂಬಿಸುತ್ತದೆ... ಜಾಮೀನು ಮಂಜೂರು ಮಾಡಿದರೆ ಅದು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಉಂಟಾಗಬಹುದು" ಎಂದು ತೀರ್ಪು ನೀಡಿತ್ತು.

"ಹೈಕೋರ್ಟ್‌ನ ಆದೇಶವು ಗಂಭೀರ ವೈರುಧ್ಯಗಳಿಂದ ಕೂಡಿದೆ. ಜಾಮೀನು ನೀಡಲು ಹೈಕೋರ್ಟ್‌ ಆದೇಶದಲ್ಲಿ ವಿಶೇಷ ಅಥವಾ ಸಕಾರಣಗಳನ್ನು ನೀಡಲಾಗಿಲ್ಲ. ನ್ಯಾಯಾಲಯವು ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ. ಕಾನೂನಾತ್ಮಕವಾಗಿ ಬಹುಮುಖ್ಯವಾದ ವಾಸ್ತವಾಂಶಗಳನ್ನು ಕೈಬಿಟ್ಟಿದೆ. ಹೈಕೋರ್ಟ್‌ ಜಾಮೀನು ನೀಡುವಾಗ ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ. ಹೇಳಿಕೆಯಲ್ಲಿನ ವೈರುಧ್ಯ, ವಿಳಂಬ ಮುಂತಾದ ವಿಚಾರಣಾ ನ್ಯಾಯಾಲಯವು ಪಾಟೀ ಸವಾಲಿನ ಸಂದರ್ಭದಲ್ಲಿ ನಿರ್ಧರಿಸಬೇಕಿರುವ ಅಂಶಗಳನ್ನು ಹೈಕೋರ್ಟ್‌ ಪರಿಗಣಿಸಿದೆ. ಸಾಕ್ಷಿಗಳ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ನಿರ್ಧರಿಸಬೇಕಿರುವುದು ವಿಚಾರಣಾ ನ್ಯಾಯಾಲಯ ಮಾತ್ರ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

“ಕಾನೂನಿನ ಅಡಿ ಸ್ಥಾಪಿತವಾದ ಪ್ರಜಾಪ್ರಭುತ್ವದಲ್ಲಿ ಯಾವುದೇ ವ್ಯಕ್ತಿಯು ತನ್ನ ಸಾಮಾಜಿಕ ಸ್ಥಾನಮಾನದ ಪ್ರಭಾವ, ಕಾನೂನು ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು. ಸಂವಿಧಾನದ 14ನೇ ವಿಧಿಯು ಕಾನೂನಿನ ಅಡಿ ಎಲ್ಲರೂ ಸಮಾನರು ಎಂದು ಖಾತರಿಪಡಿಸಿದ್ದು, ಸ್ವೇಚ್ಛೆಯನ್ನು ನಿಷೇಧಿಸುತ್ತದೆ. ಯಾವುದೇ ವ್ಯಕ್ತಿಯು ತನ್ನ ಜನಪ್ರಿಯತೆ, ಅಧಿಕಾರ, ವಿಶೇಷ ಸ್ಥಾನಮಾನಗಳ ಹೊರತಾಗಿ ಕಾನೂನಿಗೆ ಒಳಪಟ್ಟಿರುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ಎಲ್ಲಾ ಮೇಲ್ಮನವಿಗಳನ್ನು ಪುರಸ್ಕರಿಸಲಾಗಿದ್ದು, 13.12.2024ರಂದು ಹೈಕೋರ್ಟ್‌ ಮಾಡಿರುವ ಆದೇಶವನ್ನು ಬದಿಗೆ ಸರಿಲಾಗಿದೆ. ಆದ್ದರಿಂದ, ಆರೋಪಿಗಳಿಗೆ ಮಂಜೂರು ಮಾಡಿರುವ ಜಾಮೀನು ಬದಿಗೆ ಸರಿಸಲಾಗಿದೆ” ಎಂದು ಪೀಠವು ಮಹತ್ವದ ತೀರ್ಪು ನೀಡಿತ್ತು.

ಚಿತ್ರದುರ್ಗ ಮೂಲದ 33 ವರ್ಷದ ರೇಣುಕಸ್ವಾಮಿ ಅವರ ಮೃತದೇಹ ̄2024ರ ಜೂನ್ 9 ರಂದು ಬೆಂಗಳೂರಿನ ಸುಮನಹಳ್ಳಿ ಬಳಿಯ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ದರ್ಶನ್ ಸೂಚನೆ ಮೇರೆಗೆ ನಡೆದ ಹಲ್ಲೆಯಲ್ಲಿ ಉಂಟಾದ ಗಾಯಗಳಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು.

ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರೇಣುಕಾಸ್ವಾಮಿ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದ ಹಿನ್ನೆಲೆಯಲ್ಲಿ ದರ್ಶನ್‌ ಸೂಚನೆ ಮೇರೆಗೆ ಆತನನ್ನು ದರ್ಶನ್‌ ಸಹಚರರು ಅಪಹರಿಸಿ ಬೆಂಗಳೂರಿನ ಶೆಡ್‌ ಒಂದರಲ್ಲಿ ಹಲ್ಲೆ ನಡೆಸಿ ಹತ್ಯೆಗೈಯಲಾಗಿತ್ತು. ಖುದ್ದು ದರ್ಶನ್‌ ಸಹ ಹಲ್ಲೆ ನಡೆಸಿದ್ದರು ಎಂದು ಅರೋಪಿಸಲಾಗಿತ್ತು.

Also Read
ದರ್ಶನ್‌, ಪವಿತ್ರಾ ಜಾಮೀನು ರದ್ದು: ಹೈಕೋರ್ಟ್‌ ಆದೇಶದ ಹುಳುಕುಗಳನ್ನು ಎತ್ತಿ ತೋರಿದ ಸುಪ್ರೀಂ ಕೋರ್ಟ್‌

ಕಳೆದ ವರ್ಷ ಜೂನ್ 11 ರಂದು ದರ್ಶನ್ ಅವರನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 30ರಂದು, ವೈದ್ಯಕೀಯ ಆಧಾರದ ಮೇಲೆ ಹೈಕೋರ್ಟ್ ಅವರಿಗೆ  ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ತರುವಾಯ, ಡಿಸೆಂಬರ್ 13, 2024 ರಂದು ದರ್ಶನ್, ಪವಿತ್ರಾ ಮತ್ತು ಇತರ ಐದು ಆರೋಪಿಗಳಿಗೆ ನಿಯಮಿತ ಜಾಮೀನು ದೊರೆತಿತ್ತು.

ದರ್ಶನ್‌ ಮತ್ತು ಇತರರಿಗೆ ಜಾಮೀನು ಮಂಜೂರು ಮಾಡುವ ವೇಳೆ ಆರೋಪಿಗಳ ಬಂಧನಕ್ಕೆ ಆಧಾರ ಒದಗಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಸ್‌ ವಿಶ್ವಜಿತ್‌ ಶೆಟ್ಟಿ ಅವರಿದ್ದ ಪೀಠ ಕಾರಣ ನೀಡಿತ್ತು.

ಇದೇ ಪ್ರಕರಣದಲ್ಲಿ ಈಚೆಗೆ ವಿಚಾರಣಾಧೀನ ನ್ಯಾಯಾಲಯವು ಪವಿತ್ರಾ ಗೌಡ, ನಟ ದರ್ಶನ್‌ ಸೇರಿದಂತೆ ಎಲ್ಲಾ 17 ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡಿದೆ,

Attachment
PDF
Pavitra Gowda Vs State of Karnataka
Preview
Kannada Bar & Bench
kannada.barandbench.com