ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಯೋಗ್ಯ ಪದ ಬಳಕೆ: ಸೂಲಿಬೆಲೆ ವಿರುದ್ಧದ ತನಿಖೆಗೆ ಸುಪ್ರೀಂ ತಡೆ

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಪಂಕಜ್‌ ಮಿತ್ತಲ್‌ ಅವರ ವಿಭಾಗೀಯ ಪೀಠವು ಐಪಿಸಿ ಸೆಕ್ಷನ್‌ 153ಎ, 153ಬಿ, ಮತ್ತು 505(2) ಅಡಿ ಆರೋಪಗಳಿಗೆ ತಡೆ ನೀಡಿದೆ.
Mallikarjun Kharge & Supreme Court
Mallikarjun Kharge & Supreme Court
Published on

ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ಕರೆದು ಜರಿದ ಆರೋಪಕ್ಕೆ ಸಂಬಂಧಿಸಿದಂತೆ ನಮೋ ಬ್ರಿಗೇಡ್‌ ಮುಖಂಡ ಮಿಥುನ್‌ ಚಕ್ರವರ್ತಿ ದೇವಿದಾಸ್‌ ಅಲಿಯಾಸ್‌ ಚಕ್ರವರ್ತಿ ಸೂಲಿಬೆಲೆ ವಿರುದ್ಧದ ತನಿಖೆಗೆ ಶುಕ್ರವಾರ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ (ದೌರ್ಜನ್ಯ ನಿಷೇಧ) ಕಾಯಿದೆ ಅಡಿ ಆರೋಪಕ್ಕೆ ತಡೆ ನೀಡಿ, ಐಪಿಸಿ ಸೆಕ್ಷನ್‌ 153ಎ, 153ಬಿ, ಮತ್ತು 505(2) ಅಡಿ ಆರೋಪಗಳ ತನಿಖೆಗೆ ಅನುಮತಿಸಿದ್ದ ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್‌ 27ರ ಆದೇಶ ಪ್ರಶ್ನಿಸಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಪಂಕಜ್‌ ಮಿತ್ತಲ್‌ ಅವರ ವಿಭಾಗೀಯ ಪೀಠ ತನಿಖೆಗೆ ತಡೆ ನೀಡಿದೆ.

Justice MM Sundresh & Justice Pankaj Mithal
Justice MM Sundresh & Justice Pankaj Mithal

“ಅಯೋಗ್ಯ ಪದವನ್ನು ವ್ಯಾಖ್ಯಾನಿಸುವಾಗ ಹೈಕೋರ್ಟ್‌ ಪ್ರಮಾದ ಎಸಗಿದೆ. ಈ ಪದವನ್ನು ನಿಷ್ಪ್ರಯೋಜಕ ಎಂದು ಅರ್ಥೈಸಿಕೊಳ್ಳಬೇಕೆ ವಿನಾ ನೀತಿಗೆಟ್ಟ (ರ್ಯಾಸ್ಕಾಲ್)‌ ಎಂದಲ್ಲ. ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ ಮತ್ತು 505 ಅನ್ವಯಿಸಲು ಸೂಕ್ತ ಅಂಶಗಳು ಇಲ್ಲ. ಇಲ್ಲಿ ಸಮುದಾಯಗಳ ನಡುವೆ ಅಶಾಂತಿ ಅಥವಾ ದ್ವೇಷ ಬಿತ್ತುವ ಯಾವುದೇ ಕೆಲಸವಾಗಿಲ್ಲ. ಅಯೋಗ್ಯ ಪದಕ್ಕೆ ಹಲವು ಅರ್ಥಗಳಿದ್ದು, ಹತ್ತಿರದ ಅರ್ಥ ನಿಷ್ಪ್ರಯೋಜಕ ಎಂಬುದಾಗಿದೆ. ಇದನ್ನು ಗುರುತಿಸಲು ಹೈಕೋರ್ಟ್‌ ವಿಫಲವಾಗಿದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸೂಲಿಬೆಲೆ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿದ್ದರು.

Also Read
ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ನಿಂದನೆ: ಸೂಲಿಬೆಲೆ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಪ್ರಕರಣದ ಹಿನ್ನೆಲೆ: ನಮೋ ಬ್ರಿಗೇಡ್‌ ವತಿಯಿಂದ 2024ರ ಜನವರಿ 18ರಂದು ರಾಯಚೂರಿನ ಸಿರಿವಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಭಾಗವಹಿಸಿದ್ದ ಸೂಲಿಬೆಲೆ ಭಾಷಣದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ನಿಂದಿಸಿದ್ದಲ್ಲದೇ ಆಧಾರರಹಿತ ಸುಳ್ಳು ಭಾಷಣ ಮಾಡಿದ್ದಾರೆ ಎಂದು ಕಲಬುರ್ಗಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ್‌ ಗುತ್ತೇದಾರ್‌ ಕಾಳಗಿ ಅವರು ಕಲಬರ್ಗಿಯ ಬ್ರಹ್ಮಾಪುರ ಠಾಣೆಯಲ್ಲಿ ದೂರು ನೀಡಿದ್ದರು.

ತಮ್ಮ ಭಾಷಣದ ಮೂಲಕ ಸೂಲಿಬೆಲೆ ಕೋಮು ದ್ವೇಷ ಹರಡು ಪ್ರಯತ್ನ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಕೃತ್ಯದಲ್ಲಿ ಸೂಲಿಬೆಲೆ ಭಾಗವಹಿಸಿದ್ದು, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಸೂಲಿಬೆಲೆ ಭಾಷಣದ ಡಿವಿಡಿಗಳನ್ನು ಒಳಗೊಂಡ ದೂರನ್ನು ದಾಖಲಿಸಲಾಗಿತ್ತು

ಇದರ ಆಧಾರದಲ್ಲಿ ಸೂಲಿಬೆಲೆ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 505(2) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಸೆಕ್ಷನ್‌ 3(2) (v-a) ಅಡಿ ಪ್ರಕರಣ ದಾಖಲಿಸಿ, ಅದನ್ನು ರಾಯಚೂರು ಜಿಲ್ಲೆಯ ಸಿರಿವಾರ ಠಾಣೆಗೆ ವರ್ಗಾಯಿಸಲಾಗಿತ್ತು.

Kannada Bar & Bench
kannada.barandbench.com