ಅಧಿಕೃತ ಅನುವಾದಕರ ಸಮೂಹ ರಚನೆಗೆ ಕೋರಿ ಸಿಜೆಐಗೆ ಎಸ್‌ಸಿಎಒಆರ್‌ಎ ಪತ್ರ

ಸ್ಥಳೀಯ ಭಾಷೆಗಳಿಂದ ತೀರ್ಪು ಭಾಷಾಂತರಿಸಲು ನ್ಯಾಯಾಲಯ ಬಳಸುತ್ತಿರುವ ಅನುವಾದ ತಂತ್ರಾಂಶವನ್ನೇ ಅಡ್ವೊಕೇಟ್ ಆನ್ ರೆಕಾರ್ಡ್‌ಗಳೂ ಬಳಸಲು ಅವಕಾಶ ನೀಡಬೇಕು ಎಂದು ಸಹ ಸಂಘ ಕೋರಿದೆ.
Supreme Court Advocates-On-Record Association
Supreme Court Advocates-On-Record Association
Published on

ನ್ಯಾಯಾಲಯದ ವಿಚಾರಣೆಗಳಿಗೆ ಅಗತ್ಯವಿರುವ ದಾಖಲೆಗಳ ನಿಖರ, ಪ್ರಮಾಣೀಕೃತ ಮತ್ತು ಕಡಿಮೆ ವೆಚ್ಚದ ಅನುವಾದ ಸೌಲಭ್ಯ ದೊರೆಯುವಂತಾಗಲು ಸುಪ್ರೀಂ ಕೋರ್ಟ್‌ನಲ್ಲಿ ಅನುವಾದಕರ ಅಧಿಕೃತ ಸಮೂಹ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ​​(ಎಸ್‌ಸಿಎಒಆರ್‌ಎ) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದೆ.

ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಲು ಅಗತ್ಯವಾದ ಸ್ಥಳೀಯ ಭಾಷೆಗಳ ದಾಖಲೆಗಳ ವಿಶ್ವಾಸಾರ್ಹ ಇಂಗ್ಲಿಷ್‌ ಅನುವಾದಗಳನ್ನು  ಪಡೆಯುವಲ್ಲಿ ಉಂಟಾಗಿರುವ ತೊಂದರೆ ನಿವಾರಣೆಗೆ ಪ್ರತಿಕ್ರಿಯಿಸಿರುವ ಎಸ್‌ಸಿಎಒಆರ್‌ಎ ಅಧ್ಯಕ್ಷ ವಿಪಿನ್‌ ನಾಯರ್‌ ಈ ಮನವಿ ಮಾಡಿದ್ದಾರೆ.

Also Read
ಎ ಐ ಮಾಡುವ ಅನುವಾದ ಎಡವಟ್ಟುಗಳತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೆರಳು

ಅಧಿಕೃತ ಅನುವಾದದ ವ್ಯವಸ್ಥೆ ಇಲ್ಲದೆ ಇರುವುದರಿಂದ ವಕೀಲರು ಬಾಹ್ಯ ಮೂಲಗಳನ್ನು ಅವಲಂಬಿಸುವಂತಾಗಿದ್ದು ಇದರಿಂದ ಹೆಚ್ಚುನ ವೆಚ್ಚ, ವಿಳಂಬ ಹಾಗೂ ಕಾನೂನು ದಾಖಲೆಗಳಲ್ಲಿ ಆಗ್ಗಾಗ್ಗೆ ದೋಷ ಉಂಟಾಗುವುದಕ್ಕೆ ಕಾರಣವಾಗುತ್ತದೆ ಎಂದು ಸಂಘ ತಿಳಿಸಿದೆ.

ಪ್ರಕರಣವೊಂದರ ಕೆಲ ದಾಖಲೆಗಳ ಅನುವಾದದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ತಪ್ಪು ಅನುವಾದಗಳ ಸಮಸ್ಯೆಯನ್ನು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅರವಿಂದ್ ಕುಮಾರ್ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠ ಪ್ರಸ್ತಾಪಿಸಿತ್ತು.

ಅಂತಹ ದಾಖಲೆಗಳನ್ನು ಪ್ರಮಾಣೀಕರಿಸಬೇಕಿರುವುದರಿಂದ ಎಒಆರ್‌ಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಅದು ಸಂಘವನ್ನು ಕೇಳಿತ್ತು.

ಯಾವುದೇ ಪ್ರಕರಣದಲ್ಲಿ ಅಂತಿಮ ವಿಚಾರಣೆ ಪ್ರಾರಂಭವಾಗುವ ಮೊದಲು ಎಲ್ಲಾ ಸ್ಥಳೀಯ ಭಾಷೆಯ ದಾಖಲೆಗಳನ್ನು ಅನುವಾದಿಸುವ ಕುರಿತು ಹಾಗೂ ಸಾಂಸ್ಥಿಕ ಬದಲಾವಣೆಯ ಜೊತೆಗೆ ಅನುವಾದಕರ ಗುಂಪನ್ನು ರಚಿಸುವ ಬಗ್ಗೆಯೂ ಸಂಘ ತನ್ನ ಅಭಿಪ್ರಾಯ ತಿಳಿಸಬೇಕಿತ್ತು.

ಅದಕ್ಕೆ ಅನುಗುಣವಾಗಿ ಎಸ್‌ಸಿಎಒಆರ್‌ಎ ಇದೀಗ ಸಿಜೆಐ ಅವರು ಮಧ್ಯಪ್ರವೇಶಿಸುವಂತೆ ಕೋರಿದ್ದು ತನ್ನ ವಿನಂತಿಯ ಹಿಂದೆ ಹಲವು ಪ್ರಮುಖ ಉದ್ದೇಶಗಳು ಇರುವುದನ್ನು ಅದು ವಿವರಿಸಿದೆ.

ಪತ್ರದ ಪ್ರಮುಖಾಂಶಗಳು

  • ಕಾನೂನು ಪರಿಭಾಷೆಯ ನಿಖರತೆ ಮತ್ತು ಅದರ ಪಾಲನೆಗಾಗಿ ಮಾನ್ಯತೆ ಪಡೆದ ಅನುವಾದಕರ ಸಮೂಹ ರಚನೆಯಾಗಬೇಕು.

  • ಸ್ಥಳೀಯ ಭಾಷೆಗಳಿಂದ ತೀರ್ಪು ಭಾಷಾಂತರಿಸಲು ನ್ಯಾಯಾಲಯ ಬಳಸುತ್ತಿರುವ ಅನುವಾದ ತಂತ್ರಾಂಶವನ್ನೇ ಅಡ್ವೊಕೇಟ್ ಆನ್ ರೆಕಾರ್ಡ್‌ಗಳೂ ಬಳಸಲು ಅವಕಾಶ ನೀಡಬೇಕು.

  • ದಾವೆ ಹೂಡುವವರ ಮೇಲೆ ಹೆಚ್ಚಿನ ಶುಲ್ಕ ವಿಧಿಸುವುದನ್ನು ತಪ್ಪಿಸಲು ಅನುವಾದಕ್ಕೆ ದರ ನಿಗದಿಪಡಿಸಬೇಕು.

  • ಇ-ಫೈಲಿಂಗ್ ಪೋರ್ಟಲ್‌ನಂತೆಯೇ ಎಒಆರ್‌ ಕೋಡ್‌ಗೆ ಸಂಪರ್ಕ ಹೊಂದಿದ ಪಾಸ್‌ವರ್ಡ್-ರಕ್ಷಿತ ವ್ಯವಸ್ಥೆಯ ಮೂಲಕ ಇದನ್ನು ಕಾರ್ಯಗತಗೊಳಿಸಬಹುದು. ಇದರಿಂದಾಗಿ ಮೊಕದ್ದಮೆ ವೆಚ್ಚ ಕಡಿಮೆಯಾಗುತ್ತದೆ.

  • ಸುಪ್ರೀಂ ಕೋರ್ಟ್ ಆವರಣದಲ್ಲಿ ತ್ವರಿತ ಮತ್ತು ಪರಿಣಾಮಕಾರಿ ಅನುವಾದ ಸಾಧ್ಯವಾದರೆ ವಾದ ಮಂಡನೆಯೂ ತ್ವರಿತವಾಗುತ್ತದೆ.

  • ನ್ಯಾಯಾಲಯಕ್ಕೆ ಸಲ್ಲಿಸುವ ದಾಖಲೆಗಳ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಅನುವಾದಗಳು ಏಕರೂಪದ ಮಾನದಂಡ ಅನುಸರಿಸಬೇಕು.

  • ಹೈಕೋರ್ಟ್ ಮಟ್ಟದಲ್ಲಿ ಅಂತಿಮ ವಾದಗಳು ನಡೆಯುವ ಮೊದಲು ಎಫ್ಐಆರ್‌, ಆರೋಪಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ಆದೇಶಗಳಂತಹ ಪ್ರಮುಖ ಕಾನೂನು ದಾಖಲೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಬೇಕು.

  • ಮೊಕದ್ದಮೆಯ ಆರಂಭಿಕ ಹಂತದಲ್ಲಿ ಅನುವಾದ ಕಾರ್ಯಕ್ಕಾಗಿ ಜಿಲ್ಲಾ ನ್ಯಾಯಾಲಯ ಮಟ್ಟದಲ್ಲಿ ಅಧಿಕೃತ ಅನುವಾದಕರು ಇರಬೇಕು. ಆ ಅನುವಾದದ ವೆಚ್ಚವನ್ನು ದಾವೆದಾರರು ಪ್ರಮಾಣೀಕೃತ ಪ್ರತಿಗಳಿಗೆ ಭರಿಸುವಂತೆಯೇ ಭರಿಸಬೇಕು.  

  • ಈ ಕ್ರಮಗಳನ್ನು ಜಾರಿಗೆ ತರುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಅನುವಾದ-ಸಂಬಂಧಿತ ವಿಳಂಬಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ದೇಶದ ದಾವೆದಾರರಿಗೆ ಹೆಚ್ಚು ಹೆಚ್ಚು ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ.

Kannada Bar & Bench
kannada.barandbench.com