
ಹೈಕೋರ್ಟ್, ಸುಪ್ರೀಂ ಕೋರ್ಟ್ ಸೇರಿದಂತೆ ಉನ್ನತ ನ್ಯಾಯಾಂಗದಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಅತಿ ಕಡಿಮೆ ಪ್ರಮಾಣದಲ್ಲಿರುವ ಬಗ್ಗೆ ಸುಪ್ರೀಂ ಕೋರ್ಟ್ ವಕೀಲರ ಸಂಘ ಶನಿವಾರ ಗಂಭೀರ ಕಳವಳ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿದೆ.
ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಸುಮಾರು 1,100 ನ್ಯಾಯಮೂರ್ತಿ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದ್ದು 670 ಹುದ್ದೆಗಳಲ್ಲಿ ಪುರುಷರು ಕಾರ್ಯನಿರ್ವಹಿಸುತ್ತಿದ್ದರೆ ಕೇವಲ 103 ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ ಎಂದು ಸಂಘದ ಕಾರ್ಯಕಾರಿ ಸಮಿತಿಯು ಅಧ್ಯಕ್ಷ ವಿಕಾಸ್ ಸಿಂಗ್ ಅವರ ನೇತೃತ್ವದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಕೈಗೊಂಡ ನಿರ್ಣಯ ತಿಳಿಸಿದೆ.
ಉತ್ತರಾಖಂಡ್, ತ್ರಿಪುರಾ, ಮೇಘಾಲಯ ಮತ್ತು ಮಣಿಪುರ ಹೈಕೋರ್ಟ್‌ಗಳಲ್ಲಿ ಒಬ್ಬರೇ ಒಬ್ಬರು ಮಹಿಳಾ ನ್ಯಾಯಮೂರ್ತಿ ಇಲ್ಲ. ಅಲ್ಲದೆ ಸುಪ್ರೀಂ ಕೋರ್ಟ್‌ಗೆ ಈಚೆಗೆ ನಡೆದ ನೇಮಕಾತಿಯಲ್ಲಿಯೂ ಮಹಿಳಾ ನ್ಯಾಯಮೂರ್ತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. 2021 ರಿಂದ ಸುಪ್ರೀಂ ಕೋರ್ಟ್‌ಗೆ ಯಾವುದೇ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಿಸಲಾಗಿಲ್ಲ. ಪ್ರಸ್ತುತ ಏಕೈಕ ಮಹಿಳಾ ನ್ಯಾಯಮೂರ್ತಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.
ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಕೋರಿ ಈ ವರ್ಷದ ಮೇ 24 ಮತ್ತು ಜುಲೈ 18 ರಂದೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಜನಸಾಮಾನ್ಯರ ವಿಶ್ವಾಸ ಹೆಚ್ಚಿಸಲು, ನ್ಯಾಯಾಂಗದ ದೃಷ್ಟಿಕೋನ ವಿಸ್ತರಿಸಲು ಹಾಗೂ ಸಮಾಜದ ವೈವಿಧ್ಯತೆ ಬಿಂಬಿಸಲು ಪೀಠದಲ್ಲಿ ಲಿಂಗ ಸಮತೋಲನ ಅತ್ಯಗತ್ಯ ಎಂದು ನಿರ್ಣಯ ಹೇಳಿದೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಮುಂದಿನ ನೇಮಕಾತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಿಸಬೇಕೆಂದು ಸಿಜೆಐ ಮತ್ತು ಕೊಲಿಜಿಯಂಗೆ ಮನವಿ ಮಾಡಲಾಗಿದೆ.