ಪಶ್ಚಿಮ ಬಂಗಾಳದಲ್ಲಿ 32,000 ಶಿಕ್ಷಕರ ನೇಮಕಾತಿ ರದ್ದತಿ ಆದೇಶಕ್ಕೆ ತಡೆ ನೀಡಿದ ಕಲ್ಕತ್ತಾ ಹೈಕೋರ್ಟ್‌

36,000 ಶಿಕ್ಷಕರ ನೇಮಕಾತಿಯನ್ನು ಏಕಸದಸ್ಯ ಪೀಠವು ರದ್ದು ಮಾಡಿ ಆದೇಶಿಸಿತ್ತು. ಈ ಸಂಖ್ಯೆ 32,000 ಎಂದು ವಿಭಾಗೀಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ ತಿದ್ದುಪಡಿ ಮಾಡಲಾಗಿದೆ.
Calcutta High Court
Calcutta High Court

ಪಶ್ಚಿಮ ಬಂಗಾಳದಲ್ಲಿ ಲಂಚ ಪಡೆದು ಶಿಕ್ಷಕರ ಉದ್ಯೋಗ ಮಾರಾಟ ಮಾಡಲಾಗಿದೆ ಎಂದು 32,000 ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಿ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿದ್ದ ಆದೇಶಕ್ಕೆ ಶುಕ್ರವಾರ ವಿಭಾಗೀಯ ಪೀಠವು ತಡೆ ನೀಡಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಭಾದಿತ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸುಬ್ರತಾ ತಾಲೂಕ್ದಾರ್‌ ಮತ್ತು ಸುಪ್ರತಿಮ್‌ ಭಟ್ಟಾಚಾರ್ಯ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. 2022ರ ನವೆಂಬರ್‌ 28ರಂದು ಮಂಡಳಿಯು ಹೊಸ ದಾಖಲೆಗಳನ್ನು ಪತ್ತೆ ಮಾಡಿದ್ದರಿಂದ ನೇಮಕಾತಿ ಪ್ರಶ್ನಿಸಿ ಮೂಲ ಅರ್ಜಿ ಸಲ್ಲಿಸಿದ್ದವರಲ್ಲಿ ವ್ಯಾಜ್ಯ ಕಾರಣವಿತ್ತು ಎಂದು ನ್ಯಾಯಾಲಯ ಹೇಳಿದೆ.

ಹೊಸ ದಾಖಲೆಗಳ ಪತ್ತೆಗೆ ಸಂಬಂಧಿಸಿದ್ದರ ಕುರಿತು ಪರಿಶೀಲಿಸುವ ವ್ಯಾಪ್ತಿಯನ್ನು ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಅವರು ಹೊಂದಿದ್ದರು. ಅದಾಗ್ಯೂ, ಯಾವುದೇ ಆದೇಶ ಮಾಡುವುದಕ್ಕೂ ಮುನ್ನ ಪ್ರತಿವಾದಿ ಭಾದಿತರನ್ನು ಆಲಿಸುವ ಕರ್ತವ್ಯ ಭಾರ ಅವರ ಮೇಲಿತ್ತು ಎಂದು ವಿಭಾಗೀಯ ಪೀಠ ಹೇಳಿದೆ.

“ನ್ಯಾ. ಗಂಗೋಪಾಧ್ಯಾಯ ಅವರು ಪ್ರಾತಿನಿಧಿಕವಾದರೂ ಹಾಲಿ ಅರ್ಜಿದಾರರ ವಾದವನ್ನು ಆಲಿಸಲು ಅವಕಾಶ ಮಾಡಿಕೊಡುವ ಕರ್ತವ್ಯ ಹೊಂದಿದ್ದರು. ಈ ಹಿಂದೆ ಪ್ರತ್ಯೇಕವಾದ ಎರಡು ಏಕಸದಸ್ಯ ಪೀಠಗಳು ಮಾಡಿರುವ ನಿರ್ಧಾರಗಳಿಂದ ಮೇಲ್ಮನವಿದಾರರನ್ನು ಉದ್ಯೋಗ ನಷ್ಟದಿಂದ ಪಾರು ಮಾಡುಬಹುದಾಗಿತ್ತು” ಎಂದು ಪೀಠವು ಹೇಳಿದೆ.

“ನ್ಯಾಯದಾನ ತಡವಾದಷ್ಟೂ ನ್ಯಾಯ ನಿರಾಕರಿಸಿದಂತೆ. ಅಂತೆಯೇ ನ್ಯಾಯದಾನದಲ್ಲಿ ಅವಸರವಾದಷ್ಟೂ ನ್ಯಾಯ ನಾಶ ಮಾಡಿದಂತೆ. ಈ ನೆಲೆಯಲ್ಲಿ ಎರಡು ಬಾರಿ ರಕ್ಷಣೆ ನೀಡಿದ ಹೊರತಾಗಿಯೂ ಭಾದಿತರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡದೇ ಇರುವುದರಿಂದ ಉದ್ಯೋಗಗಳ ರದ್ದತಿಯ ವಿಚಾರದಲ್ಲಿ ಮೇಲ್ನೋಟಕ್ಕೆ ನ್ಯಾಯಾಂಗ ಮಧ್ಯಪ್ರವೇಶ ಮಾಡುವ ಅಗತ್ಯವಿದೆ. ಹೀಗಾಗಿ, 2023ರ ಸೆಪ್ಟೆಂಬರ್‌ವರೆಗೆ ಉದ್ಯೋಗ ರದ್ದತಿಗೆ ಮಧ್ಯಂತರ ತಡೆ ನೀಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

Also Read
ಪ. ಬಂಗಾಳ ಶಾಲಾ ನೇಮಕಾತಿ ಹಗರಣ: 36 ಸಾವಿರ ಶಿಕ್ಷಕರ ನೇಮಕಾತಿ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಅದಾಗ್ಯೂ, ನ್ಯಾ. ಗಂಗೋಪಾಧ್ಯಾಯ ಅವರ ಆದೇಶದಂತೆ ಮಂಡಳಿಯು 2023ರ ಆಗಸ್ಟ್‌ ಅಂತ್ಯದ ವೇಳೆಗೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಬೇಕು. ಬಳಿಕ ಪ್ರಕರಣವನ್ನು ಸೆಪ್ಟೆಂಬರ್‌ಗೆ ವಿಭಾಗೀಯ ಪೀಠದ ಮುಂದೆ ಇಡುವಂತೆ ಆದೇಶಿಸಿದೆ.

ಕಲ್ಕತ್ತಾ ಹೈಕೋರ್ಟ್‌ನ ನ್ಯಾ. ಗಂಗೋಪಾಧ್ಯಾಯ ಅವರ ಏಕಸದಸ್ಯ ಪೀಠವು ನೇಮಕಾತಿ ಹಗರಣದಲ್ಲಿ ಅಕ್ರಮದ ವಾಸನೆ ಹೊಡೆಯುತ್ತಿದೆ ಎಂದು ಹೇಳಿ ಸೂಕ್ತ ನಿಯಮ ಪಾಲಿಸದೆ 2016ರಲ್ಲಿ ನೇಮಕ ಮಾಡಲಾಗಿದ್ದ ಪಶ್ಚಿಮ ಬಂಗಾಳದ 36,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಮೇ 12ರಂದು ರದ್ದುಪಡಿಸಿತ್ತು.

Related Stories

No stories found.
Kannada Bar & Bench
kannada.barandbench.com