Abhishek Banerjee, CBI & ED
Abhishek Banerjee, CBI & ED

ಪ. ಬಂಗಾಳ ನೇಮಕಾತಿ ಹಗರಣ: ಮಂದಗತಿಯ ತನಿಖೆ ಕಾರಣಕ್ಕೆ ಕಲ್ಕತ್ತಾ ಹೈಕೋರ್ಟ್‌ ಕೆಂಗಣ್ಣಿಗೆ ಗುರಿಯಾದ ಸಿಬಿಐ, ಇ ಡಿ

"ಪ್ರಸ್ತುತ ಆಮೆಗತಿಯಲ್ಲಿ ಸಾಗುತ್ತಿರುವ ತನಿಖೆಯಲ್ಲಿ ಯಾವುದೇ ಗಣನೀಯ ಬೆಳವಣಿಗೆ ಕಂಡುಬಂದಿಲ್ಲ" ಎಂದು ಟೀಕಿಸಿದ ಪೀಠ.

ಪಶ್ಚಿಮ ಬಂಗಾಳದ ಶಾಲಾ ನೇಮಕಾತಿ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿಯವರ ಪಾತ್ರದ ಕುರಿತಾದ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ಕಲ್ಕತ್ತಾ ಹೈಕೋರ್ಟ್‌ ಬುಧವಾರ ತರಟೆಗೆ ತೆಗೆದುಕೊಂಡಿದೆ  [ಸೌಮೆನ್ ನಂದಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಎರಡೂ ಕೇಂದ್ರೀಯ ತನಿಖಾ ಸಂಸ್ಥೆಗಳು ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿರುವ ಬಗ್ಗೆ ನ್ಯಾ. ಅಮೃತಾ ಸಿನ್ಹಾ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ವಿಚಾರಣೆ ಆರಂಭವಾದಾಗ ಡೆಪ್ಯುಟಿ ಸಾಲಿಸಿಟರ್ ಜನರಲ್‌ (ಡಿಎಸ್‌ಜಿ) ಬಿಲ್ವದಳ್ ಭಟ್ಟಾಚಾರ್ಯ ಅವರು ಮುಚ್ಚಿದ ಲಕೋಟೆಯಲ್ಲಿ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಿದರು. ತನಿಖೆಯಲ್ಲಿನ ಬೆಳವಣಿಗೆ ಮತ್ತು ಕೇಂದ್ರೀಯ ಸಂಸ್ಥೆ ತನ್ನ ತನಿಖೆಯನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಲು ಯೋಜಿಸುತ್ತಿದೆ ಎಂಬುದನ್ನು ಅವರು ಪೀಠಕ್ಕೆ ತಿಳಿಸಿದರು. ಆದರೆ ಪೀಠ ವರದಿಯಿಂದ ತೃಪ್ತವಾಗಲಿಲ್ಲ. ಅಲ್ಲದೆ, "ಯಾವುದೇ ಗಣನೀಯ ಬೆಳವಣಿಗೆ ನಡೆದಿಲ್ಲ" ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

Also Read
ಶಾಲಾ ಉದ್ಯೋಗ ಹಗರಣ: ಅಭಿಷೇಕ್‌ ಬ್ಯಾನರ್ಜಿ ವಿರುದ್ಧದ ಸಿಬಿಐ, ಇ ಡಿ ತನಿಖೆಗೆ ತಡೆ ನೀಡಲು ಸುಪ್ರೀಂ ನಕಾರ

ಪ್ರಕರಣದಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಹಾಗೂ ಅಭಿಷೇಕ್‌ ಅವರನ್ನು ಹೆಸರಿಸುವಂತೆ ತನಗೆ ಕಿರುಕುಳ ಮತ್ತು ಒತ್ತಡ ಹೇರಲಾಗುತ್ತಿದೆ ಎಂದಿದ್ದ ಪ್ರಕರಣದ ಮತ್ತೊಬ್ಬ ಆರೋಪಿ ಕುಂತಲ್ ಘೋಷ್ ಅವರ ವಿರುದ್ಧದ ತನಿಖೆಯ ವಿಚಾರ ಮಾತನಾಡುತ್ತಿರುವುದಾಗಿ ಡಿಎಸ್‌ಜಿ ಹೇಳಿದರು.

ಸ್ಥಿತಿಗತಿ ವರದಿಯನ್ನು ಅಧಿಕೃತವಾಗಿ ಸ್ವೀಕರಿಸುವ ವೇಳೆ, “ಈ ವಿಚಾರದ ತನಿಖೆಗೆ ಎಷ್ಟು ಸಮಯ ಬೇಕಾಗುತ್ತದೆ? ಕೆಲವು ವ್ಯಕ್ತಿಗಳ ವಿಚಾರಣೆಗೆ ನಿಮಗೆಷ್ಟು ಸಮಯ ಬೇಕು? ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಮಾಡಬಹುದು" ಎಂದು ನ್ಯಾಯಾಲಯ ಕಟುವಾಗಿ ನುಡಿಯಿತು. ಅಲ್ಲದೆ "ಪ್ರಸ್ತುತ ಆಮೆಗತಿಯಲ್ಲಿ ಸಾಗುತ್ತಿರುವ ತನಿಖೆಯಲ್ಲಿ ಯಾವುದೇ ಗಣನೀಯ ಬೆಳವಣಿಗೆ ಕಂಡುಬಂದಿಲ್" ಎಂದಿತು.

ನಂತರ ಇ ಡಿ ನಡೆಸುತ್ತಿರುವ ತನಿಖೆಯ ಪ್ರಗತಿ ಬಗ್ಗೆಯೂ ಪೀಠ ಕೇಳಿತು. ಆದರೆ ಈಗಾಗಲೇ ತನಿಖೆಯ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸಿರುವುದಾಗಿ ಅಕ್ರಮ ಹಣ ವರ್ಗಾವಣೆ ತಡೆಯುವ ಇ ಡಿ ಸಂಸ್ಥೆಯನ್ನು ಪ್ರತಿನಿಧಿಸುವ ವಕೀಲರು ತಿಳಿಸಿದರು.

ಈ ವರದಿ ಕೂಡ ಅತೃಪ್ತಿಕರವಾಗಿದೆ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು. ಆಗ , ಈ ಪ್ರಕರಣದಲ್ಲಿ ಹಣದ ಹಾದಿಯನ್ನು ಸಂಸ್ಥೆ ತನಿಖೆ ನಡೆಸುತ್ತಿದೆ ಎಂದು ಇ ಡಿ ಪರ ವಕೀಲರು ಸಮರ್ಥಿಸಿಕೊಂಡರು. ಈ ಅಂಕಿ ಅಂಶಗಳು ಸುಮಾರು ₹ 300 ಕೋಟಿಯಷ್ಟಿದ್ದು ಇದು ಪ್ರಕರಣದ ಪ್ರಮುಖ ಅಂಶ ಎಂದು ಪೀಠ ಒತ್ತಿ ಹೇಳಿತು. ಜೊತೆಗೆ “ನಿಮ್ಮ (ಇ ಡಿ) ಅಧಿಕಾರಿಗಳು ಪ್ರಕರಣದ ತನಿಖೆ ಮಾಡುವಷ್ಟು ಸಮರ್ಥರಿದ್ದಾರೆಯೇ?” ಎಂದು ನ್ಯಾಯಾಮೂರ್ತಿ ಸಿನ್ಹಾ ಪ್ರಶ್ನಿಸಿದರು.

ಪ್ರತಿಯಾಗಿ ವಕೀಲರು, ತನಿಖೆಯಲ್ಲಿ ಸ್ವಲ್ಪ ಪ್ರಗತಿಯಾಗಲಿದೆ ಮತ್ತು ಮುಂದಿನ ವಿಚಾರಣೆಯೊಳಗೆ ಹೊಸ ಸ್ಥಿತಿಗತಿ ವರದಿಯನ್ನು ಸಲ್ಲಿಸುವುದಾಗಿ ಪೀಠಕ್ಕೆ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com