ಪ್ರಧಾನಿ ಮೋದಿ ವಿರುದ್ಧ ನಿಷೇಧಿತ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದು ಅಶಿಸ್ತು: ದೆಹಲಿ ಹೈಕೋರ್ಟ್‌ನಲ್ಲಿ ವಿವಿ ಹೇಳಿಕೆ

ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಪ್ರದರ್ಶನದ ಹಿಂದಿನ ಸೂತ್ರಧಾರ ಎನ್ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್ ಚುಘ್ ಎಂದು ದೆಹಲಿ ವಿವಿ ಹೇಳಿದೆ.
BBC's documentary , Delhi high court
BBC's documentary , Delhi high court

ಅನುಮತಿಯಿಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ವಿದ್ಯಾರ್ಥಿಗಳು ಪ್ರದರ್ಶಿಸುವುದು ಮತ್ತು ನಿಷೇಧಾಜ್ಞೆ ವಿಧಿಸಿದ್ದರೂ ಪ್ರತಿಭಟನೆಗಳನ್ನು ಆಯೋಜಿಸುವುದು 'ತೀವ್ರ ಅಶಿಸ್ತು' ಎಂದು ದೆಹಲಿ ವಿಶ್ವವಿದ್ಯಾಲಯ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಭಾರತದಲ್ಲಿ ಸಾಕ್ಷ್ಯಚಿತ್ರದ ಎರಡು ಭಾಗಗಳ ಸರಣಿ ನಿಷೇಧಿಸಲಾಗಿದೆ ಎಂಬ ಪತ್ರಿಕಾ ವರದಿ ಆಧರಿಸಿ ಸಾಕಷ್ಯಚಿತ್ರ ಪ್ರದರ್ಶನ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ವಿವಿ ಹೇಳಿದೆ.

Also Read
ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ್ದ ವಿದ್ಯಾರ್ಥಿ ನಾಯಕ ಡಿಬಾರ್: ದೆಹಲಿ ವಿವಿ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿದ್ದಕ್ಕಾಗಿ ತನ್ನನ್ನು ಡಿಬಾರ್‌ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ವಿದ್ಯಾರ್ಥಿ ವಿಭಾಗದ ನಾಯಕ ಲೋಕೇಶ್ ಚುಘ್ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ವಿವಿ ಪ್ರತಿಕ್ರಿಯೆ ಸಲ್ಲಿಸಿದೆ. ಚುಘ್ ಅವರು ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ಘಟಕವಾದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಅವರು ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 27, 2023ರಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ಬಿಬಿಸಿ ನಿರ್ಮಿಸಿದ್ದ ʼಇಂಡಿಯಾ: ದ ಮೋದಿ ಕ್ವೆಶ್ಚನ್‌ʼ ಸಾಕ್ಷ್ಯಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಗೆ ಯಾವುದೇ ವಿಶ್ವವಿದ್ಯಾಲಯ/ಕಾಲೇಜು/ಇಲಾಖೆಯ ಪರೀಕ್ಷೆಯಲ್ಲಿ ಭಾಗವಹಿಸದಂತೆ ಚುಘ್ ಅವರನ್ನು ಡಿಬಾರ್ ಮಾಡಲಾಗಿತ್ತು.

ಪ್ರತಿಭಟನೆಯ ಹಿಂದಿನ ಸೂತ್ರಧಾರ ಚುಘ್ ಎಂದು ವಿವಿ ಹೇಳಿದ್ದು ವಿವಿ ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ವಿಡಿಯೋ ತುಣುಕು ಸಾಬೀತುಪಡಿಸಿದೆ ಎಂದು ಅದು ದೂರಿದೆ.

Related Stories

No stories found.
Kannada Bar & Bench
kannada.barandbench.com