Shivamurthy Murugha Sharanaru and Karnataka HC
Shivamurthy Murugha Sharanaru and Karnataka HC

ಮುರುಘಾ ಶರಣರ ವಿರುದ್ಧದ ಸಾಮೂಹಿಕ ಅತ್ಯಾಚಾರ, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಪ್ರಾಸಿಕ್ಯೂಷನ್ ಬಿಂಬಿಸಿದ್ದನ್ನು ಆಧರಿಸಿ ಆರೋಪ ನಿಗದಿ ಮಾಡುವಾಗ ವಿಶೇಷ ನ್ಯಾಯಾಲಯವು ಕೇವಲ ಅಂಚೆ ಕಚೇರಿಯಂತೆ ವರ್ತಿಸಬಾರದಿತ್ತು ಎಂದು ಆದೇಶದಲ್ಲಿ ಹೇಳಿರುವ ನ್ಯಾಯಾಲಯ.

ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ವಿವಿಧ ಕಾಯಿದೆಯ ಸೆಕ್ಷನ್‌ಗಳ ಅಡಿ ಆರೋಪ ನಿಗದಿ ಮಾಡಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಜಾ ಮಾಡಿ ಮಹತ್ವದ ಆದೇಶ ಮಾಡಿದೆ. ಆದರೆ, ಅತ್ಯಾಚಾರ ಮತ್ತು ಪೋಕ್ಸೊ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಆರೋಪ ನಿಗದಿ ಮುಂದುವರಿಯಲಿದೆ ಎಂದಿದ್ದು, ಹೊಸದಾಗಿ ಆರೋಪ ನಿಗದಿ ಮಾಡಿ, ಪ್ರಕ್ರಿಯೆ ಮುಂದುವರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

2023ರ ಏಪ್ರಿಲ್‌ 13 ಮತ್ತು 20೦ರಂದು ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ತಮ್ಮ ವಿರುದ್ಧ ಆರೋಪ ನಿಗದಿ ಮಾಡಿರುವ ಆದೇಶಗಳನ್ನು ವಜಾ ಮಾಡುವಂತೆ ಕೋರಿ ಡಾ. ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

“ಪ್ರಾಸಿಕ್ಯೂಷನ್ ಬಿಂಬಿಸಿದ್ದನ್ನು ಆಧರಿಸಿ ಆರೋಪ ನಿಗದಿ ಮಾಡುವಾಗ ವಿಶೇಷ ನ್ಯಾಯಾಲಯವು ಕೇವಲ ಅಂಚೆ ಕಚೇರಿಯಂತೆ ವರ್ತಿಸಬಾರದಿತ್ತು. ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ-1988ರ ಸೆಕ್ಷನ್‌ಗಳಾದ 3(ಎಫ್‌), 3(ಸಿ), 3(5) ಮತ್ತು 7 ಮುರುಘಾ ಮಠಕ್ಕೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ನ ಸಮನ್ವಯ ಪೀಠ ಆದೇಶದಲ್ಲಿ ಹೇಳಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ–1989ರ ಸೆಕ್ಷನ್‌ಗಳಾದ 3(1)(ಡಬ್ಲ್ಯು)(i)(ii), 3(2)(v)(v-a) ಇಲ್ಲಿ ಅನ್ವಯಿಸುವುದಿಲ್ಲ. ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ–2015ರ ಸೆಕ್ಷನ್‌ 75 ಅನ್ನು ತಪ್ಪಾಗಿ ಮುರುಘಾ ಶರಣರಿಗೆ ಅನ್ವಯಿಸಲಾಗಿದ್ದು, ಇದು ಪ್ರಕರಣದಲ್ಲಿ ಎರಡನೇ ಆರೋಪಿ ಬಸವಶ್ರೀಗೆ ಅನ್ವಯಿಸುತ್ತದೆ. ಮುರುಘಾ ಶ್ರೀ ವಿರುದ್ಧ ತಪ್ಪಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ವರದಿಯಾಗುವುದಕ್ಕೂ ಮುನ್ನ 3.5 ವರ್ಷಗಳ ಹಿಂದೆ ಸಾಕ್ಷ್ಯ ನಾಶಪಡಿಸಲಾಗಿದ್ದು, ಐಪಿಸಿ ಸೆಕ್ಷನ್‌ 201ರ ಅಡಿ ತಪ್ಪಾಗಿ ಸಾಕ್ಷ್ಯ ನಾಶ ಆರೋಪ ಹೊರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಇದೇ ವೇಳೆ ನ್ಯಾಯಾಲಯವು “ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ 376(2)ಎನ್‌ ಮತ್ತು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ–2012ರ ಸೆಕ್ಷನ್‌ 4 ಮತ್ತು 6ರ ಅಡಿ ಆರೋಪ ಮುಂದುವರಿಯಲಿವೆ” ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

“ಆರೋಪ ನಿಗದಿ ಎಂಬುದು ಸಮಗ್ರ ವರದಿಯಾಗಿದ್ದು, ಈ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಆರೋಪಿ ಮುರುಘಾ ಶರಣರ ವಿರುದ್ಧ ಮರು ಆರೋಪ ನಿಗದಿ ಮಾಡಬೇಕು. ಈ ನೆಲೆಯಲ್ಲಿ ಅರ್ಜಿಗಳನ್ನು ಭಾಗಶಃ ಪುರಸ್ಕರಿಸಲಾಗಿದ್ದು, 13.4.2023 ಮತ್ತು 20.4.2023ರಂದು ವಿಶೇಷ ನ್ಯಾಯಾಲಯ ಮಾಡಿರುವ ಆರೋಪ ನಿಗದಿ ಆದೇಶಗಳನ್ನು ವಜಾ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಮರು ಆರೋಪ ನಿಗದಿ ಮಾಡಲು ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಲಾಗಿದೆ. ವಿಶೇಷ ನ್ಯಾಯಾಲಯವು ತಪ್ಪೆಸಗಿರುವ ಅಪರಾಧಗಳ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯ ಗಮನದಲ್ಲಿರಿಸಿಕೊಳ್ಳಬೇಕು. ಪುನಾ ಆರೋಪ ನಿಗದಿ ಮಾಡಿದ ಬಳಿಕ ವಿಶೇಷ ನ್ಯಾಯಾಲಯ ವಿಚಾರಣೆ ಮುಂದುವರಿಸಬಹುದಾಗಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

2023ರ ನವೆಂಬರ್‌ 23ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯವು ಇಂದು ಪ್ರಕಟಿಸಿದ್ದು, ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

Also Read
ಪೋಕ್ಸೊ ಪ್ರಕರಣ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧದ ಸಾಕ್ಷ್ಯ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಅರ್ಜಿದಾರರ ಪರವಾಗಿ ವಕೀಲ ಕೆಬಿಕೆ ಸ್ವಾಮಿ ವಕಾಲತ್ತು ಹಾಕಿದ್ದರು. ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ‘ಮುರುಘಾ ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದರು. ಆನಂತರ ಮತ್ತಿಬ್ಬರು ಬಾಲಕಿಯರು ಮುರುಘಾ ಶರಣರ ವಿರುದ್ದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ 2023ರ ನವೆಂಬರ್‌ನಲ್ಲಿ ಶರಣರಿಗೆ ಹೈಕೋರ್ಟ್‌ನಿಂದ ಜಾಮೀನು ದೊರೆತಿದ್ದು, ಚಿತ್ರದುರ್ಗ ಪ್ರವೇಶ ನಿರ್ಬಂಧಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com