
ಅದಾನಿ ಪೋರ್ಟ್ಸ್ ಅಂಡ್ ಎಸ್‌ಇಝಡ್ , ಅದಾನಿ ಪವರ್ ಹಾಗೂ ಅದಾನಿ ಎಂಟರ್‌ಪ್ರೈಸಸ್ ತಮ್ಮ ನಡುವೆ ಹಣದ ವಹಿವಾಟು ನಡೆಸಲು ಮಧ್ಯವರ್ತಿಗಳಾಗಿ ಮೈಲ್ಸ್ಟೋನ್ ಟ್ರೇಡ್ಲಿಂಕ್ಸ್ ಪ್ರೈವೇಟ್ ಲಿಮಿಟೆಡ್ (ಎಂಟಿಪಿಎಲ್) ಮತ್ತು ರೆಹ್ವಾರ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ಗಳನ್ನು (ಆರ್‌ಐಪಿಎಲ್) ಬಳಸಿಕೊಂಡಿವೆ ಎಂದು ಅಮೆರಿಕದ ಬಂಡವಾಳ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ್ದ ಆರೋಪಗಳಿಂದ ಅದಾನಿ ಸಮೂಹವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಗುರುವಾರ ದೋಷಮುಕ್ತಗೊಳಿಸಿದೆ.
2018–19 ಹಣಕಾಸು ವರ್ಷ ಮತ್ತು 2022–23 ಹಣಕಾಸು ವರ್ಷದ ನಡುವಿನ ಸಾಲಗಳು ಬಡ್ಡಿಯೊಂದಿಗೆ ಸಂಪೂರ್ಣವಾಗಿ ಮರುಪಾವತಿಸಲಾದ ನಿಜವಾದ ವಹಿವಾಟುಗಳಾಗಿದ್ದು ಆ ಸಮಯದಲ್ಲಿ ಜಾರಿಯಲ್ಲಿದ್ದ ಕಾನೂನು ಅಂತಹ ಪರೋಕ್ಷ ವಹಿವಾಟುಗಳನ್ನು ಸಂಬಂಧಿತ ಪಕ್ಷದ (ಗುಂಪಿನ) ನಡುವಿನ ವಹಿವಾಟುಗಳು (ಆರ್‌ಪಿಟಿ) ಎಂದು ವರ್ಗೀಕರಿಸಿರಲಿಲ್ಲ ಎಂದು ಸೆಬಿ ತನ್ನ ಅಂತಿಮ ಆದೇಶದಲ್ಲಿ ಹೇಳಿದೆ.
ಜನವರಿ 24, 2023 ರಂದು, ಹಿಂಡೆನ್‌ಬರ್ಗ್ ರಿಸರ್ಚ್ ವರದಿಯೊಂದನ್ನು ಪ್ರಕಟಿಸಿತ್ತು. ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪವರ್ ಮುಂದ್ರಾ (ನಂತರ ಅದಾನಿ ಪವರ್‌ನೊಂದಿಗೆ ವಿಲೀನಗೊಂಡಿತು) 2020–21ರ ಹಣಕಾಸು ವರ್ಷದಲ್ಲಿ ಅದಾನಿ ಇನ್ಫ್ರಾ (ಇಂಡಿಯಾ) ಲಿಮಿಟೆಡ್ ಮೂಲಕ ಎಂಟಿಪಿಎಲ್ ಮತ್ತು ಆರ್‌ಐಪಿಎಲ್‌ನಿಂದ ಹಣ ಪಡೆದಿದೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಎಂಟಿಪಿಎಲ್ ಮತ್ತು ಆರ್‌ಐಪಿಎಲ್‌ನ ಮೂಲ ನಿಧಿ ಎಲ್ಲಿಂದ ಬಂದಿದೆ ಎಂದು ಕೂಡ ಅದು ಪ್ರಶ್ನಿಸಿತ್ತು.
ಪಡೆದಿರುವ ಸಾಲ ಬಹಿರಂಗಪಡಿಸದ ಆರ್‌ಪಿಟಿಯೇ ಅಥವಾ ಮೋಸದ ವಹಿವಾಟುಗಳಾಗಿವೆಯೇ ಎಂದು ಪರಿಶೀಲಿಸಲು ಸೆಬಿ ತನಿಖೆ ಆರಂಭಿಸಿತ್ತು.
ತಮ್ಮ ನಡುವಿನ ಸಾಲದ ವಹಿವಾಟುಗಳನ್ನು ಆರ್‌ಪಿಟಿ ಎಂದು ವರ್ಗೀಕರಣ ಮಾಡುವುದನ್ನು ತಪ್ಪಿಸುವ ಸಲುವಾಗಿ ಎಂಟಿಪಿಎಲ್ ಆರ್‌ಐಪಿಎಲ್‌ಗಳನ್ನು ಮಧ್ಯವರ್ತಿಗಳನ್ನಾಗಿ ಬಳಸಿ ಎಪಿಎಲ್ ಎಇಎಲ್‌ಗೆ ಕೂಡಲೇ ಕಳಿಸಲಾಗಿದೆ ಎಂದು ಶೋಕಾಸ್ ನೋಟಿಸ್ ಹೇಳಿತ್ತು. ಲೆಕ್ಕಪರಿಶೋಧನಾ ಸಮಿತಿ ಅನುಮೋದನೆ ತಪ್ಪಿಸುವುದಕ್ಕಾಗಿ ಗೌತಮ್ ಅದಾನಿ, ರಾಜೇಶ್ ಅದಾನಿ ಹಾಗೂ ಸಿಎಫ್‌ಒ ಜುಗೇಶಿಂದರ್ ಸಿಂಗ್ ಸಂಚು ರೂಪಿಸಿದ್ದರು ಎಂಬ ಆರೋಪ ಶೋಕಾಸ್ ನೋಟಿಸ್‌ನಲ್ಲಿತ್ತು.
ಆದರೆ ಇದನ್ನು ಒಪ್ಪದ ಅದಾನಿ ಸಮೂಹ ಸಂಸ್ಥೆಗಳು ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ನಿಯಮಾವಳಿ ಪ್ರಕಾರ ಅವುಗಳನ್ನು 'ಸಂಬಂಧಿತ ಪಕ್ಷದ ನಡುವಿನ ವಹಿವಾಟುಗಳ' (ಆರ್‌ಟಿಪಿ) ವ್ಯಾಖ್ಯಾನದೊಳಗೆ ಸೇರಿಸಲಾಗದು ಎಂದಿದ್ದವು.
ಹೊಸ ತಿದ್ದುಪಡಿ ಏಪ್ರಿಲ್ 2023ರಿಂದ ಜಾರಿಗೆ ಬಂದಿದ್ದು ಹಳೆಯ ವ್ಯವಹಾರಗಳಿಗೆ ಇದು ಅನ್ವಯವಾಗುವುದಿಲ್ಲ. ಈ ವ್ಯವಹಾರಗಳು ಹೂಡಿಕೆದಾರರಿಗೆ ಯಾವುದೇ ಹಾನಿ ಮಾಡಿಲ್ಲ. ನಿಧಿಗಳ ದುರೋಪಯೋಗ, ಶೇರು ಮೌಲ್ಯ ತಿರುಚುವಿಕೆ, ಅಕ್ರಮ ಲಾಭ ಇದ್ಯಾವುದೂ ಇಲ್ಲ. ಎಲ್ಲಾ ಹಣವನ್ನು ಬಡ್ಡಿ ಸಹಿತ ಮರಳಿಸಲಾಗಿದೆ ಎಂದು ಅವು ಪ್ರತಿಪಾದಿಸಿದ್ದವು.
ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಸೆಬಿ ಎಲ್ಲಾ ಸಾಲಗಳನ್ನು ಬಡ್ಡಿ ಸಹಿತ ಮರುಪಾವತಿಸಲಾಗಿದೆ ಎಂದು ತೀರ್ಪು ನೀಡಿದೆ. ಆರ್‌ಪಿಟಿ ಆಗ ಕೇವಲ ನೇರ ವ್ಯವಹಾರಗಳಿಗೆ ಅನ್ವಯವಾಗುತ್ತಿತ್ತೇ ವಿನಾ ಮಧ್ಯವರ್ತಿ ಮೂಲಕ ನಡೆದ ವ್ಯವಹಾರ ಅದರ ವ್ಯಾಪ್ತಿಗೆ ಒಳಪಡುತ್ತಿರಲಿಲ್ಲ. 2021ರಲ್ಲಿ ನಿಯಮಗಳಿಗೆ ಮಾಡಲಾದ ತಿದ್ದುಪಡಿ ಭವಿಷ್ಯದಲ್ಲಿ ನಡೆಸುವ ಸಾಲದ ವಹಿವಾಟುಗಳಿಗೆ ಅನ್ವಯಿಸುತ್ತದೆಯೇ ವಿನಾ ಹಿಂದಿನ ವ್ಯವಹಾರಗಳಿಗೆ ಅಲ್ಲ ಎಂದಿದೆ. ಜೊತೆಗೆ ಪಿಎಫ್‌ಯುಟಿಪಿ ಆರೋಪಗಳಿಗೆ ಸಂಬಂಧಿಸಿದಂತೆ ವಂಚನೆಯ ಯಾವುದೇ ಪುರಾವೆ ದೊರೆತಿಲ್ಲ ಎಂದು ಅದು ಹೇಳಿದೆ.
ಹೀಗಾಗಿ ಸಾಲದ ವಹಿವಾಟು ತನಿಖೆಯ ಅವಧಿಯಲ್ಲಿ ಜಾರಿಯಲ್ಲಿದ್ದ ನಿಯಮಗಳಡಿ ಸಂಬಂಧಿತ ಪಕ್ಷದ ವಹಿವಾಟುಗಳಲ್ಲ (ಆರ್‌ಟಿಪಿ) ಎಂದಿರುವ ಸೆಬಿ, ಯಾವುದೇ ವಂಚನೆ ಅಥವಾ ಷೇರು ಅವ್ಯವಹಾರ ನಡೆದಿಲ್ಲ. ಮುಖ್ಯ ಆರೋಪವನ್ನೇ ಬದಿಗೆ ಸರಿಸಲಾಗಿರುವುದರಿಂದ ಉಳಿದ ಆರೋಪಗಳೂ ನಗಣ್ಯವಾಗಿವೆ ಎಂಬುದಾಗಿ ತಿಳಿಸಿದೆ.