ಪ್ರಕ್ರಿಯಾತ್ಮಕ ಲೋಪದ ಆಧಾರವಷ್ಟೇ ಅಲ್ಲದೆ ಅರ್ಹತೆಯ ಆಧಾರದಲ್ಲಿಯೂ ಪ್ರೊ. ಸಾಯಿಬಾಬಾ ಎರಡನೇ ಬಾರಿ ಖುಲಾಸೆ

ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಗತ್ಯವಿರುವ ಅನುಮತಿ ಪಡೆದಿಲ್ಲದಿರುವುದನ್ನು ಗಮನಿಸಿದ ಪೀಠ, ಪ್ರಕರಣದ ಅರ್ಹತೆಯ ಆಧಾರದ ವಿಚಾರದಿಂದಲೂ ಸಾಯಿಬಾಬಾ ಅವರನ್ನು ನಿರಪರಾಧಿ ಎಂದು ಘೋಷಿಸಿತು.
ನಾಗಪುರ ಪೀಠ, ಬಾಂಬೆ ಹೈಕೋರ್ಟ್
ನಾಗಪುರ ಪೀಠ, ಬಾಂಬೆ ಹೈಕೋರ್ಟ್
Published on

ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ ಎನ್‌ ಯಿಬಾಬಾ ಹಾಗೂ ಉಳಿದ ಐವರನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಖುಲಾಸೆಗೊಳಿಸುತ್ತಿರುವುದು ಇದು ಎರಡನೇ ಬಾರಿ. ಆದರೆ ಈ ಬಾರಿಯ ವಿಚಾರಣೆ ವೇಳೆ ಕೇವಲ ಪ್ರಕ್ರಿಯಾತ್ಮಕ ಲೋಪದ ಆಧಾರದ ಮೇಲಷ್ಟೇ ಅಲ್ಲದೆ ಅರ್ಹತೆಯ ಆಧಾರದಲ್ಲಿಯೂ ಸಾಯಿಬಾಬಾ ಅವರನ್ನು ನಿರಪರಾಧಿ ಎಂದು ಘೋಷಿಸಲಾಗಿದೆ.

ಈ ಮುನ್ನ ಅಕ್ಟೋಬರ್ 14, 2022ರಂದು, ಹೈಕೋರ್ಟ್‌ನ ಮತ್ತೊಂದು ನ್ಯಾಯಪೀಠ ಇದೇ ಪ್ರಕರಣದಲ್ಲಿ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆ ತೀರ್ಪನ್ನು ಬದಿಗೆ ಸರಿಸಿ ಹೊಸದಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಪ್ರಕರಣ ವರ್ಗಾಯಿಸಿತ್ತು.

ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್ಎ ಮೆನೆಜಸ್ ಅವರಿದ್ದ ಪೀಠ ಮಂಗಳವಾರ ಈ ಸಂಬಂಧ ತೀರ್ಪು ನೀಡಿದ್ದು ಸಾಯಿಬಾಬಾ ಅವರನ್ನು ಕಾರ್ಯವಿಧಾನದ ಆಧಾರದ ಮೇಲಷ್ಟೇ ಅಲ್ಲದೆ ಅರ್ಹತೆಯ ಆಧಾರದ ಮೇಲೆ ಖುಲಾಸೆಗೊಳಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ (ಯುಎಪಿಎ) ಸೆಕ್ಷನ್ 45 (1)ರ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಇಲ್ಲದಿರುವಾಗ ಸೆಷನ್ಸ್ ನ್ಯಾಯಾಲಯ ಸಾಯಿಬಾಬಾ ವಿರುದ್ಧ ಆರೋಪಗಳನ್ನು ನಿಗದಿಪಡಿಸಿತ್ತು ಎಂಬ ಆಧಾರದ ಮೇಲೆ ನ್ಯಾಯಮೂರ್ತಿಗಳಾದ ರೋಹಿತ್ ಬಿ ದೇವ್ ಮತ್ತು ಅನಿಲ್ ಪನ್ಸಾರೆ ಅವರಿದ್ದ ಹಿಂದಿನ ಪೀಠ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿತ್ತು.

ಭಯೋತ್ಪಾದನೆಯು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಬೆದರಿಕೆಯೊಡ್ಡುತ್ತಿರುವಾಗ ಬತ್ತಳಿಕೆಯಲ್ಲಿರುವ ಪ್ರತಿಯೊಂದು ಕಾನೂನುಬದ್ಧ ಬಾಣವನ್ನೂ ಅದರ ವಿರುದ್ಧ ಹೂಡಬೇಕಿದೆ. ನಾಗರಿಕ ಪ್ರಜಾಪ್ರಭುತ್ವ ಆರೋಪಿಗಳಿಗೆ ಒದಗಿಸಲಾದ ಕಾರ್ಯವಿಧಾನದ ರಕ್ಷಣೆಯನ್ನು ತ್ಯಾಗ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ದಾಖಲಿಸಿತ್ತು. ಆದರೂ, ನ್ಯಾ. ದೇವ್‌ ನೇತೃತ್ವದ ಪೀಠ ಸಾಯಿಬಾಬಾ ಅವರ ವಿರುದ್ಧದ ಆರೋಪಗಳ ಅರ್ಹತೆಯನ್ನು ಪರಿಶೀಲಿಸಿರಲಿಲ್ಲ.

ಇತ್ತ ಮಂಗಳವಾರ ತೀರ್ಪು ನೀಡಿರುವ ನ್ಯಾಯಮೂರ್ತಿಗಳಾದ ಜೋಶಿ ಮತ್ತು ಮೆನೆಜಸ್ ಅವರಿದ್ದ ಪೀಠ, ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಗತ್ಯವಿರುವ ಅನುಮತಿ ಪಡೆದಿಲ್ಲದರುವುದನ್ನು ಕಂಡುಕೊಂಡಿದ್ದಲ್ಲದೆ, ಪ್ರಕರಣದ ಅರ್ಹತೆಯ ಆಧಾರದ ಮೇಲೂ ಸಾಯಿಬಾಬಾ ಅವರನ್ನು ನಿರಪರಾಧಿ ಎಂದು ಘೋಷಿಸಿದೆ.

ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್.ಎ.
ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್.ಎ.

ಯುಎಪಿ ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಸಂಪೂರ್ಣವಾಗಿ ಪಾಲಿಸದೆ ಇರುವ ಮೂಲಕ ಕಾರ್ಯವಿಧಾನದ ಉಲ್ಲಂಘನೆಯಾಗಿರುವ ಬಗ್ಗೆ ಮಂಗಳವಾರದ ತೀರ್ಪಿನಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ. ಕಾನೂನಿನ ಕಡ್ಡಾಯ ಸೆಕ್ಷನ್‌ಗಳನ್ನು ಉಲ್ಲಂಘಿಸಿದ್ದರೂ ಸಹ ವಿಚಾರಣೆಯನ್ನು ನಡೆಸಿದ್ದು ನ್ಯಾಯದ ವೈಫಲ್ಯವನ್ನು ಸೂಚಿಸುತ್ತದೆ ಎಂದು ಅದು ವಿವರಿಸಿದೆ.

ಇನ್ನು ಪ್ರಕರಣದ ಅರ್ಹತೆ ಕುರಿತಂತೆಯೂ ಮಾತನಾಡಿರುವ ನ್ಯಾಯಾಲಯ ಕೇವಲ ಮಾವೋವಾದಿ ಸಾಹಿತ್ಯ ಇರಿಸಿಕೊಂಡಿರುವುದು ಯುಎಪಿಎ ಅಡಿ ಅಪರಾಧವಲ್ಲ ಎಂದಿದೆ. ಅಂತಹ ಸಾಹಿತ್ಯ ಅಂತರ್ಜಾಲದಲ್ಲಿ ಸುಲಭವಾಗಿ ದೊರೆಯುತ್ತಿದ್ದು ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಓದಿದ ಅಥವಾ ಆ ಸಿದ್ಧಾಂತದ ಬಗ್ಗೆ ಸಹಾನುಭೂತಿ ಹೊಂದಿದ ಮಾತ್ರಕ್ಕೆ ಯುಎಪಿಎ ಅಡಿ ಜನರನ್ನು ಹೊಣೆಗಾರರನ್ನಾಗಿ ಮಾಡಲಾಗದು. ಹಾಗೆ ಹೊಣೆಗಾರರನ್ನಾಗಿ ಮಾಡುವುದು ಸಂವಿಧಾನದ 19ನೇ ವಿಧಿಯಡಿ ಒದಗಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಒಂದು ಹಂತಕ್ಕೆ ಉಲ್ಲಂಘಿಸಿದಂತಾಗುತ್ತದೆ ಎಂದು ವಿವರಿಸಿದೆ.

ಐವರು ಆರೋಪಿಗಳ ಬಂಧನ ಸಮರ್ಥಿಸಿಕೊಳ್ಳಲು ಪ್ರಾಸಿಕ್ಯೂಷನ್‌ ವಿಫಲವಾಗಿದ್ದು ಸಾಯಿಬಾಬಾ ಅವರ ಮನೆಯಿಂದ ಆಕ್ಷೇಪಾರ್ಹ ವಸ್ತುಗಳನ್ನು ತಾನು ವಶಪಡಿಸಿಕೊಂಡಿರುವುದನ್ನು ಸಾಬೀತುಪಡಿಸಲು ಅದಕ್ಕೆ ಸಾಧ್ಯವಾಗಿಲ್ಲ ಎಂದಿದೆ. ಆದ್ದರಿಂದ, ಮಾರ್ಚ್ 2017ರ ಸಾಮಾನ್ಯ ತೀರ್ಪು ಮತ್ತು ಶಿಕ್ಷೆಯ ಆದೇಶವನ್ನು ಬದಿಗೆ ಸರಿಸಿ ಎರಡೂ ಮೇಲ್ಮನವಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದು ಅದು ತಿಳಿಸಿದೆ.

ಹೈದಾರಾಬಾದ್‌ನಲ್ಲಿ 2012ರಲ್ಲಿ ನಡೆದ ಸಮಾವೇಶದಲ್ಲಿ ಪ್ರಕರಣದ ಇಬ್ಬರು ಆರೋಪಿಗಳು ಮಾಡಿರುವ ಭಾಷಣ ಭಯೋತ್ಪಾದನಾ ಕೃತ್ಯವನ್ನು ಬಹಿರಂಗಪಡಿಸುವುದಿಲ್ಲ ಎಂದು ಕೂಡ ನ್ಯಾಯಾಲಯ ತಿಳಿಸಿದೆ.

ಸಾಯಿಬಾಬಾ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿ ಸುಮಾರು 8 ತಿಂಗಳು ಕಳೆದರೂ ಅವರನ್ನು ಬಂಧಿಸಿರಲಿಲ್ಲ ಎಂದು ನ್ಯಾಯಮೂರ್ತಿ ಜೋಶಿ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

"ಸಾಯಿಬಾಬಾ ಅವರ ಅಂಗವೈಕಲ್ಯ ಮತ್ತು ಅವರ ವಾಸಸ್ಥಳದ ಬಗ್ಗೆ ತಿಳಿದಿದ್ದರೂ ಅವರನ್ನು ಸಾಕಷ್ಟು ಸಮಯದವರೆಗೆ ಬಂಧಿಸದೆ ಇರಲು ಕಾರಣವೇನು ಎಂಬುದನ್ನು ನಮಗೆ ತೃಪ್ತಿಕರವಾಗಿ ವಿವರಿಸಿಲ್ಲ" ಎಂದು ಆರೋಪಿಗಳನ್ನು ಖುಲಾಸೆಗೊಳಿಸುವಾಗ ನ್ಯಾಯಾಲಯ ವಿವರಿಸಿದೆ.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
GN Saibaba and 5 Ors. v. State of Maharashtra & Ors..pdf
Preview
Kannada Bar & Bench
kannada.barandbench.com