ಪುರುಷ ಜನನಾಂಗ ಹೊಂದಿರುವ ತನ್ನ ಹೆಂಡತಿ ಆ ವಿಚಾರ ತಿಳಿಸದೇ ತನಗೆ ಮೋಸ ಮಾಡಿದ್ದಾಳೆ ಎಂದು ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಹರಿ ಓಂ ಶರ್ಮಾ ಮತ್ತು ಪ್ರಿಯಾಂಕಾ ಶರ್ಮಾ ನಡುವಣ ಪ್ರಕರಣ].
ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಪತ್ನಿ ವಿರುದ್ಧ ಪತಿ ದಾಖಲಿಸಿದ್ದ ವಂಚನೆ ಪ್ರಕರಣವನ್ನು ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ಅರ್ಜಿದಾರ ಹರಿ ಓಂ ಶರ್ಮಾ ಪ್ರಶ್ನಿಸಿದ್ದಾರೆ.
ಮೌಖಿಕ ಸಾಕ್ಷ್ಯದ ಆಧಾರದ ಮೇಲೆ ಪತ್ನಿ ವಿರುದ್ಧ ಸೆಕ್ಷನ್ 420ರ ಅಡಿ ಯಾವುದೇ ಅಪರಾಧ ನಿಗದಿಪಡಿಸಲಾಗದು ಎಂದು ಮಧ್ಯಪ್ರದೇಶ ಹೈಕೋರ್ಟ್ ಈ ಹಿಂದೆ ಪ್ರಕರಣವನ್ನು ವಜಾಗೊಳಿಸಿತ್ತು. 2016 ರಲ್ಲಿ ತಮ್ಮ ಪತಿಯನ್ನು ವಿವಾಹವಾದ ಅರ್ಜಿದಾರರಿಗೆ ಹೆಂಡತಿ ʼರಂಧ್ರರಹಿತ ಕನ್ಯಾಪೊರೆʼ ಸಮಸ್ಯೆ ಇರುವುದು ತಿಳಿದುಬಂದಿತ್ತು.
ಕೃತಕವಾಗಿ ಯೋನಿ ಸೃಷ್ಟಿಸಿದರೂ ಪತ್ನಿ ಗರ್ಭಿಣಿ ಆಗುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದರು. ಇತ್ತ ಮಗಳನ್ನು ತವರಿಗೆ ಕರೆದೊಯ್ಯಿರಿ ಎಂದು ತಮ್ಮ ಮಾವನಿಗೆ ತಿಳಿಸಿದಾಗ ಅವರು ಅರ್ಜಿದಾರನನ್ನು ನಿಂದಿಸಿ ಹಲ್ಲೆಯ ಬೆದರಿಕೆ ಒಡ್ಡಿದ್ದರು ಎನ್ನಲಾಗಿತ್ತು. ಬಳಿಕ ಪತ್ನಿ ತನ್ನೊಂದಿಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತಮ್ಮ ಮದುವೆಯನ್ನು ವಿಸರ್ಜಿಸಬೇಕು ಎಂದು ಕೋರಿ ಅರ್ಜಿದಾರ ನ್ಯಾಯಾಲಯದ ಮೊರೆ ಹೋಗಿದ್ದರು. ವೈದ್ಯಕೀಯ ಸಾಕ್ಷ್ಯ ಇಲ್ಲದಿರುವುದರಿಂದ ವಿಚಾರಣಾ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತ್ತು. ಆದರೆ ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೆಂಡತಿ ಪಾಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಹೇಳಿದ್ದು ಸರಿ ಎಂಬ ನಿರ್ಧಾರಕ್ಕೆ ವಿಚಾರಣಾ ನ್ಯಾಯಾಲಯ ಬಂದಿತ್ತು.
ಆದರೆ ವೈದ್ಯಕೀಯ ಸಾಕ್ಷ್ಯ ಇಲ್ಲದೇ ಇರುವುದರಿಂದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದ ಹೈಕೋರ್ಟ್ ಸೆಕ್ಷನ್ 420 ಅಡಿ ವಂಚನೆ ಪ್ರಕರಣ ದಾಖಲಿಸಲಾಗದು ಎಂದಿತ್ತು. ಕೋವಿಡ್ ಕಾರಣದಿಂದಾಗಿ ಸಾಕ್ಷ್ಯಗಳನ್ನು ಸಲ್ಲಿಸಿಲ್ಲ ಎಂದು ಅರ್ಜಿದಾರ ಹೇಳಿದ ಹಿನ್ನೆಲೆಯಲ್ಲಿ ಅದು ಈ ಆದೇಶ ನೀಡಿತ್ತು. ಅರ್ಜಿದಾರ ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ವಕೀಲ ಪ್ರವೀಣ್ ಸ್ವರೂಪ್ ಮೂಲಕ ಅರ್ಜಿ ಸಲ್ಲಿಸಲಾಗಿದೆ.