ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಡೆಯ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣದಡಿ ಕ್ರಮಕ್ಕೆ ಆಗ್ರಹಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಸರ್ಕಾರದ ನೀತಿ, ಅಭಿಪ್ರಾಯಗಳಿಗೆ ಅಸಹಮತ ವ್ಯಕ್ತಪಡಿಸುವುದು ರಾಷ್ಟ್ರದ್ರೋಹದ ಕೃತ್ಯವಾಗುವುದಿಲ್ಲ ಎಂದು ಈ ವೇಳೆ ಅದು ಹೇಳಿದೆ (ರಜತ್ ಶರ್ಮಾ ವರ್ಸಸ್ ಭಾರತ ಸರ್ಕಾರ).
ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರಿದ್ದ ಪೀಠವು ಸರ್ಕಾರದ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ರಾಷ್ಟ್ರದ್ರೋಹವಾಗುವುದಿಲ್ಲ ಎಂದು ಹೇಳಿತು.
ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರವು 2019ರಲ್ಲಿ ತೆಗೆದುಕೊಂಡಿದ್ದ ನಿರ್ಧಾರದ ವಿರುದ್ಧ ಫಾರೂಕ್ ಅಬ್ದುಲ್ಲಾ ವ್ಯಕ್ತಪಡಿಸಿದ್ದ ಅಭಿಪ್ರಾಯದ ಬಗ್ಗೆ ಆಕ್ಷೇಪಿಸಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ಅರ್ಜಿದಾರರಾದ ರಜತ್ ಶರ್ಮಾ ಮತ್ತು ಡಾ. ನೇಹ್ ಶ್ರೀವಾಸ್ತವ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶರ್ಮಾ ಅವರು ‘ಸರ್ದಾರ್ ಪಟೇಲ್ ಅವರ ವಿಶ್ವಗುರು ಭಾರತದ ಮುಂಗಾಣ್ಕೆ’ ಎನ್ನುವ ಸಂಘಟನೆಯ ಕಾರ್ಯದರ್ಶಿಯಾಗಿದ್ದಾರೆ.