

ಐದು ವರ್ಷಗಳ ಹಿಂದೆ ಅಂದರೆ 2020ರ ದೆಹಲಿ ಗಲಭೆಯ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ ಘಟನೆಯನ್ನು ದೆಹಲಿ ಪೊಲೀಸರ ತನಿಖೆ ನಡೆಸಿರುವ ರೀತಿಯನ್ನು ದೆಹಲಿ ಹೈಕೋರ್ಟ್ ಈಚೆಗೆ ಟೀಕಿಸಿದೆ [ ನರೇಶ್ ತ್ಯಾಗಿ ಮತ್ತು ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸಿದ ನ್ಯಾ. ನೀನಾ ಬನ್ಸಾಲ್ ಕೃಷ್ಣ ಘೋಂಡಾ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಖಲಾಗಿರುವ ಸಾಮಾನ್ಯ ಎಫ್‌ಐಆರ್ ಆಧಾರದಲ್ಲಿಯೇ ತನಿಖೆ ನಡೆಸಬಹುದು ಎಂದರು. ಇದೇ ವೇಳೆ, ಪೊಲೀಸರು ಪ್ರಕರಣಗಳನ್ನು ತಮಗೆ ಬೇಕಾದಂತೆ ಆಯ್ಕೆ ಮಾಡಿಕೊಂಡು ಕಳಪೆಯಾಗಿ ತನಿಖೆ ನಡೆಸಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಸಂತ್ರಸ್ತ ಮೊಹಮ್ಮದ್ ನಾಸಿರ್ ಅವರಿಗೆ ಗುಂಡೇಟು ತಗುಲಿದ ಪ್ರಕರಣವನ್ನು ಈಗಾಗಲೇ ಪರಿಗಣಿಸಲಾಗಿದ್ದು ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ನಿರ್ದೇಶಿಸುವಂತಹ ಸನ್ನಿವೇಶ ಇಲ್ಲ ಎಂದಿತು
ಪ್ರಕರಣದ ಆರೋಪಿಗಳು ದೆಹಲಿಯಲ್ಲೇ ಇರಲಿಲ್ಲ ಎಂಬ ನೆಪದಲ್ಲಿ ಅವರನ್ನು ಪೊಲೀಸರು ದೋಷಮುಕ್ತಗೊಳಿಸಿದ್ದರು. ಆದರೆ ಬೇರೊಂದು ಗಲಭೆ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಆರೋಪಿಗಳು ದೆಹಲಿಯಲ್ಲೇ ಇದ್ದುದು ಕಂಡುಬಂದಿತ್ತು ಎಂದು ದೂರುದಾರ ಹೇಳಿದ್ದರು.
ಅದೇ ರೀತಿ, ಆಸ್ಪತ್ರೆಗೆ ದಾಖಲಾದ ನಾಸಿರ್ ಹಾಗೂ ಇತರ ಗಾಯಾಳುಗಳ ದಾಖಲೆಗಳನ್ನು ಪೊಲೀಸರು ಪಡೆದಿದ್ದರೂ, ಅವರ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗದೇ ಇದ್ದುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಪೊಲೀಸರು ಪ್ರಕರಣಗಳನ್ನು ತಮಗೆ ಬೇಕಾದಂತೆ ಆಯ್ಕೆ ಮಾಡಿಕೊಂಡಿರುವುದಲ್ಲದೆ ಕಳಪೆಯಾಗಿ ತನಿಖೆ ನಡೆಸಿದ್ದಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಅಂತಿಮವಾಗಿ, ನಿಜವಾದ ಅಪರಾಧಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂಬ ದೂರುದಾರರ ಅಸಮಾಧಾನವನ್ನು ಅದೇ ಎಫ್ಐಆರ್‌ನಲ್ಲಿ ಹೆಚ್ಚಿನ ತನಿಖೆಯನ್ನು ಕೋರುವ ಮೂಲಕ ಪರಿಹರಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಜೊತೆಗೆ ದೂರುದಾರರು ಪ್ರತಿರೋಧ ಅರ್ಜಿ ಸಲ್ಲಿಸಲು ಕೂಡ ಅವಕಾಶ ಕಲ್ಪಿಸಿತು.
ಹೀಗಾಗಿ, ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ನೀಡಿದ್ದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯ ದಾಖಲಿಸಿದ್ದ ಕೆಲ ಅವಲೋಕನಗಳನ್ನು ತೆಗೆದುಹಾಕುವಂತೆ ಸೂಚಿಸಿತು.ಆದರೆ ಇದೇ ವೇಳೆ ತನಿಖೆಯಲ್ಲಿ ಲೋಪವಿದ್ದರೂ, ಅದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದ ನ್ಯಾಯಾಲಯ ಡಿಸಿಪಿ ಅವರಿಗೆ ವಿಧಿಸಿದ್ದ ₹25,000 ದಂಡವನ್ನು ರದ್ದುಪಡಿಸಿತು.
[ಆದೇಶದ ಪ್ರತಿ]