ಪುರುಷರ ವರ್ತನೆಯಿಂದ ಮಹಿಳೆಯರು ತುಳಿತಕ್ಕೊಳಗಾಗಿದ್ದಾರೆಯೇ ವಿನಾ ಕಾನೂನಿನಿಂದಲ್ಲ: ಹಿರಿಯ ನ್ಯಾಯವಾದಿ ಫಾಲಿ ನಾರಿಮನ್

ವಕೀಲೆಯರ ದಿನದ ಅಂಗವಾಗಿ ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (ಎಸ್‌ಐಎಲ್‌ಎಫ್) ಮಹಿಳಾ ಸಮೂಹ ದೆಹಲಿ ಹೈಕೋರ್ಟ್ ಅಂಗಳದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Senior Advocate Fali Sam Nariman
Senior Advocate Fali Sam Nariman

ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುವುದು ಕಾನೂನುಗಳಲ್ಲ ಬದಲಿಗೆ ಪುರುಷರ ವಕ್ರ ಧೋರಣೆ ಎಂದು ಕಾನೂನು ಲೋಕದ ದಂತಕತೆ, ಹಿರಿಯ ನ್ಯಾಯವಾದಿ ಫಾಲಿ ಎಸ್‌ ನಾರಿಮನ್‌ ಶನಿವಾರ ಬೇಸರ ವ್ಯಕ್ತಪಡಿಸಿದರು.

ವಕೀಲೆಯರ ದಿನದ ಅಂಗವಾಗಿ ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (ಎಸ್‌ಐಎಲ್‌ಎಫ್‌) ಮಹಿಳಾ ಸಮೂಹ ದೆಹಲಿ ಹೈಕೋರ್ಟ್ ಅಂಗಳದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಮಹಿಳೆಯರನ್ನು ದಮನ ಮಾಡುವುದು ಸಂಸತ್ತಿನ ಕಾನೂನುಗಳಲ್ಲ. ಮಹಿಳೆಯರಿಗೆ ವಿಶೇಷ ನಿಯಮಾವಳಿ ಕಲ್ಪಿಸುವುದನ್ನು ಯಾವುದೂ ತಡೆಯುವಂತಿಲ್ಲ ಎನ್ನುವ ಸಂವಿಧಾನದ ವಿಧಿ 15ರ ಉಪ-ಕಲಂಗೆ ಸಂಬಂಧಿಸಿದಂತೆ ಕಾನೂನುಗಳನ್ನು ಏಕರೂಪವಾಗಿ ಜಾರಿಗೊಳಿಸಲಾಗುತ್ತದೆ. ಮಹಿಳೆಯರ ಬಗ್ಗೆ ಪುರುಷರ ವಕ್ರ ಧೋರಣೆಯೇ ಮಹಿಳೆಯರನ್ನು ಹೆಚ್ಚು ದಬ್ಬಾಳಿಕೆಗೆ ಈಡುಮಾಡಿದೆ, ಇದು ವಿಷಾದದ ಸಂಗತಿ” ಎಂದು ನಾರಿಮನ್ ವಿವರಿಸಿದರು.

ʼಪುರುಷ ಪ್ರಾಬಲ್ಯದ ವರ್ತನೆಯಿಂದ ಪ್ರಪಂಚದಾದ್ಯಂತ ಮಹಿಳೆಯರು ಹತಾಶರಾಗಿದ್ದಾರೆʼ ಎಂದು ಅವರು ಹೇಳಿದರು. “ಈ ನಿಟ್ಟಿನಲ್ಲಿ ಫ್ರೆಂಚ್ ಪತ್ರಕರ್ತೆ ಫ್ರಾಂಕೋಯಿಸ್ ಗಿರೌಡ್ ಅವರನ್ನು ಲಿಂಗಗಳ ಸಮಾನತೆಗಾಗಿ ಎಷ್ಟು ದಿನ ಹೋರಾಡುತ್ತೀರಿ ಎಂಬ ಪ್ರಶ್ನೆ ಕೇಳಲಾಯಿತು. ಆಗ ಆಕೆ ಅಸಮರ್ಥ ಮಹಿಳೆಯರು ಪುರುಷರಂತೆ ಪ್ರಮುಖ ಉದ್ಯೋಗಗಳನ್ನು ಪಡೆಯುವವರೆಗೆ ಎಂದು ಉತ್ತರಿಸಿದ್ದರು ಎಂಬುದಾಗಿ ನಾರಿಮನ್‌ ನೆನೆದರು.

ಭಾರತದಲ್ಲಿ ಈ ಸಮಾನತೆ  ಸಾಧಿಸುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದಾದರೂ ನಾವದನ್ನು ಮುಂದುವರೆಸಬೇಕು ಎಂದು ಹೇಳಿದರು.

Also Read
ಮಹಿಳೆಯರು ವಕೀಲಿ ವೃತ್ತಿಯಲ್ಲಿ ತಮ್ಮನ್ನು ತಾವು ನಿರೂಪಿಸಲು ಸಂಪೂರ್ಣ ತೊಡಗಿಸಿಕೊಳ್ಳಬೇಕು: ನ್ಯಾ. ಪ್ರತಿಭಾ ಸಿಂಗ್

“ಎಷ್ಟು ದೂರ ಸಾಗಿ ಬಂದಿದ್ದೇವೆ ಎಂಬುದನ್ನು ನೋಡಿ, ಆದರೆ ಇನ್ನೆಷ್ಟು ದೂರ ಸಾಗುತ್ತೇವೆ ಎಂಬುದನ್ನು ಗಮನಿಸಿ” ಎಂದು ಟಿವಿಯೊಂದರಲ್ಲಿ ನಿರೂಪಕಿಯೊಬ್ಬರು ಹೇಳಿದ ಮಾತನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಭಾರತದಲ್ಲಿ ಕಾನೂನು ಪ್ರಾಕ್ಟೀಸ್‌ ಮಾಡಿದ ಮೊದಲ ಮಹಿಳೆ, ಹಲವು ಪ್ರಥಮಗಳಿಗೆ ಹೆಸರುವಾಸಿಯಾದ ಕಾರ್ನೆಲಿಯಾ ಸೊರಾಬ್ಜಿ ಅವರಿಗೆ ನಾರಿಮನ್‌ ಗೌರವ ಸಲ್ಲಿಸಿದರು. ಜೊತೆಗೆ ತಮ್ಮ ನಿರ್ಭೀತ ಧೋರಣೆಗೆ ಹೆಸರುವಾಸಿಯಾಗಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರುಮಾ ಪಾಲ್‌ ಅವರನ್ನು ನೆನೆದರು. ಸುಪ್ರೀಂ ಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವರಿಗೆ ಪ್ರಥಮ ಮಹಿಳಾ ನ್ಯಾಯಮೂರ್ತಿಯಾಗುವ ಅವಕಾಶ ಕೈತಪ್ಪಿತು ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಭಾಗವಹಿಸಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂದೇಶವನ್ನು ಸಹ ಈ ಸಂದರ್ಭದಲ್ಲಿ ಓದಲಾಯಿತು.

Related Stories

No stories found.
Kannada Bar & Bench
kannada.barandbench.com