ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಮರು ಆಯ್ಕೆಯಾಗಿದ್ದಾರೆ.
ಸಿಂಗ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಿರಿಯ ನ್ಯಾಯವಾದಿ ರಂಜಿತ್ ಕುಮಾರ್ ಅವರನ್ನು 251 ಮತಗಳಿಂದ ಸೋಲಿಸಿದರು. ಸಿಂಗ್ ಅವರು 1005 ಮತಗಳನ್ನು ಗಳಿಸಿದರೆ, ಕುಮಾರ್ ಅವರ 754 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಹಿರಿಯ ವಕೀಲ ಪ್ರದೀಪ್ ಕುಮಾರ್ ರೈ ಹಾಗೂ ಕಾರ್ಯದರ್ಶಿಯಾಗಿ ವಕೀಲ ರಾಹುಲ್ ಕೌಶಿಕ್ ಆಯ್ಕೆಯಾದರು.
ಕೋವಿಡ್ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಚುನಾವಣೆಗಳಿಗೆ ವ್ಯತಿರಿಕ್ತವಾಗಿ ಈ ಬಾರಿ ಭೌತಿಕವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾದ ವಿಕಾಸ್ ಸಿಂಗ್, ರಂಜಿತ್ ಕುಮಾರ್ ಹಾಗೂ ವಕೀಲ ನೀರಜ್ ಶ್ರೀವಾಸ್ತವ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾದ ಪ್ರದೀಪ್ ರೈ ಮತ್ತು ಸುಕುಮಾರ್ ಪಟ್ ಜೋಶಿ ಮತ್ತು ವಕೀಲ ಎಸ್ ಸದಾಶಿವ ರೆಡ್ಡಿ ಕಣದಲ್ಲಿದ್ದರು.
ಕಳೆದ 10 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರಿಗೆ ವಿನಾಯಿತಿ ನೀಡುವ ಸಲುವಾಗಿ ಅಡ್ವೊಕೇಟ್-ಆನ್-ರೆಕಾರ್ಡ್ ಪರೀಕ್ಷಾ ನಿಯಮಕ್ಕೆ ತಿದ್ದುಪಡಿ ಮಾಡುವ ವಿಚಾರವನ್ನು ಸಿಂಗ್ ಚುನಾವಣೆ ವೇಳೆ ಪ್ರಸ್ತಾಪಿಸಿದ್ದರು.