ಪಿಎಸ್‌ಐ ಹಗರಣ: ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ಗೆ ಜಾಮೀನು ನೀಡಿದ ಹೈಕೋರ್ಟ್

ಜಾಮೀನು ಅವಧಿಯಲ್ಲಿ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಬಾರದು. ಹೊರ ದೇಶಕ್ಕೆ ಪ್ರಯಾಣ ಮಾಡಬಾರದು ಮುಂತಾಗಿ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ.
IPS officer Amrit Paul and Karnataka HC
IPS officer Amrit Paul and Karnataka HC

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಆರೋಪಿಯಾಗಿದ್ದ ಹಿರಿಯ ಪೊಲೀಸ್‌ ಅಧಿಕಾರಿ ಅಮೃತ್‌ ಪೌಲ್‌ ಅವರಿಗೆ ಸೋಮವಾರ ಕರ್ನಾಟಕ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ 25ನೇ ಆರೋಪಿಯಾಗಿರುವ ಅಮೃತ್‌ ಪೌಲ್‌ ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಎಂ ನವಾಜ್ ಅವರ ಪೀಠವು ಪೌಲ್‌ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. 545 ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಜರುಗಿದ್ದ ಅಕ್ರಮಗಳ ಹಗರಣದ ಪ್ರಕರಣ ಇದಾಗಿದೆ.

Also Read
ಪಿಎಸ್‌ಐ ನೇಮಕಾತಿ ಹಗರಣ: ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಅರ್ಜಿದಾರರ ಜಾಮೀನು ಸಿಕ್ಕ ಬಳಿಕ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಬಾರದು. ಹೊರ ದೇಶಕ್ಕೆ ಪ್ರಯಾಣ ಮಾಡಬಾರದು, ₹ 5 ಲಕ್ಷದ ಎರಡು ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು ಎಂದು ನ್ಯಾಯಪೀಠ ಷರತ್ತುಗಳನ್ನು ವಿಧಿಸಿದೆ. ವಿವರವಾದ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ ಹಿಂದೆ ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರಾಗಿದ್ದ ಪ್ರಸನ್ನ ಕುಮಾರ್, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಮೃತ್‌ ಪೌಲ್ ಉತ್ತರ ಪತ್ರಿಕೆಗಳನ್ನು ತಿದ್ದಲು ಕಾರಣರಾಗಿದ್ದರು. ಅಲ್ಲದೆ, ಹಗರಣದ ನಡೆದ ವೇಳೆ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು ಮತ್ತು ಆ ಸಮಯದಲ್ಲಿ ಅವರು ಕಚೇರಿಗೆ ವೈದ್ಯಕೀಯ ರಜೆ ಹಾಕುವ ಮೂಲಕ ಹಗರಣ ನಡೆಯಲು ಕಾರಣವಾಗಿದ್ದರು ಎಂದು ಆರೋಪಿಸಿದ್ದರು.

Also Read
ಪಿಎಸ್‌ಐ ಹಗರಣ: ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌

ಉತ್ತರ ಪತ್ರಿಕೆಗಳನ್ನು ತಿದ್ದಿದ 2021ರ ಅಕ್ಟೋಬರ್ 7, 8, ಮತ್ತು 16ರಂದು ಆರೋಪಿಯು ವೈದ್ಯಕೀಯ ರಜೆಯಲ್ಲಿ ಇದ್ದುದಾಗಿ ಹೇಳಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ, ಅವರು ಆ ದಿನಗಳಂದು ತಮ್ಮ ಪ್ರಮಾಣ ಪತ್ರದಲ್ಲಿ ಹೇಳಿರುವ ಯಲಹಂಕ ನ್ಯೂ ಟೌನ್‌ನಲ್ಲಿರುವ ನವಚೇತನ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ಪಡೆದೇ ಇಲ್ಲ. ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಅಂತೆಯೇ, ಆ ದಿನಗಳಲ್ಲಿ ಸ್ಟ್ರಾಂಗ್ ರೂಮ್ ಬೀಗಗಳನ್ನು ತಮ್ಮ ವೈಯಕ್ತಿಕ ಕೊಠಡಿಯಲ್ಲಿರಿಸಿದ್ದರು. ಅಲ್ಲಿಂದ ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ವಾದ ಮಂಡಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್, ಪ್ರಕರಣ ಕುರಿತಂತೆ ವಿಚಾರಣಾ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಹಂತ ಹಂತವಾಗಿ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದು ಇದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 173ಕ್ಕೆ ತದ್ವಿರುದ್ಧವಾಗಿದೆ. ಅರ್ಜಿದಾರರು ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ವಿಚಾರಣಾ ನ್ಯಾಯಾಲಯವು ಅವರ ವಿರುದ್ಧದ ಯಾವುದೇ ಅಪರಾಧಗಳನ್ನು ಸಂಜ್ಞೇಯ ಎಂದು ಪರಿಗಣಿಸದೇ ಇರುವ ಕಾರಣ ಅವರ ಬಂಧನ ಕಾನೂನು ಬಾಹಿರವಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com