
ಗಂಭೀರ ವಂಚನೆ ಪ್ರಕರಣಗಳನ್ನು ಅದರಲ್ಲಿಯೂ ಸರ್ಕಾರಿ ಅಧಿಕಾರಿಗಳು ಇಲ್ಲವೇ ವಿದೇಶಿ ಸಂಸ್ಥೆಗಳು ಭಾಗಿಯಾಗಿರುವ ದೂರುಗಳನ್ನು ಮಧ್ಯಸ್ಥಿಕೆ ನ್ಯಾಯಮಂಡಳಿಗಳಿಗಿಂತ ಸಿವಿಲ್ ನ್ಯಾಯಲಯಗಳೇ ಇತ್ಯರ್ಥಪಡಿಸುವುದು ಲೇಸು ಎಂದು ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ವಂಚನೆ ಆರೋಪಗಳ ಸಂಕೀರ್ಣತೆ ಮತ್ತು ಗಂಭೀರತೆಯಿಂದಾಗಿ ವ್ಯಾಜ್ಯವು ಮಧ್ಯಸ್ಥಿಕೆಗೆ ಒಳಪಡುವುದಿಲ್ಲ ಎಂಬ ಏಕ ಮಧ್ಯಸ್ಥಗಾರರ ತೀರ್ಪು ಎತ್ತಿಹಿಡಿದ ನ್ಯಾಯಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ವಿರುದ್ಧ ಬೆಂಟ್ವುಡ್ ಸೀಟಿಂಗ್ ಸಿಸ್ಟಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.
“ವ್ಯಾಜ್ಯ ನಿರ್ಣಯಿಸಲು ನ್ಯಾಯಾಲಯವೇ ಉತ್ತಮ ಎಂದು ಏಕ ಮಧ್ಯಸ್ಥಗಾರರು ನೀಡಿದ ತೀರ್ಪು ಯಾವುದೇ ಹಸ್ತಕ್ಷೇಪ ಬಯಸದು. ವಂಚನೆ ಕುರಿತು ಏಕ ಮಧ್ಯಸ್ಥಗಾರರು ಮೇಲ್ನೋಟಕ್ಕೆ ತೀರ್ಪು ನೀಡಿದ್ದಾರೆ ಎಂದು ಹೇಳಲಾಗದು. ದೇಶದ ಹೊರಗಿನ ಸಾಕ್ಷಿಗಳನ್ನು ಹಾಜರುಪಡಿಸುವುದು ಮತ್ತು ದೇಶದಾಚೆಗಿನ ದಾಖಲೆಗಳನ್ನು ಒಳಗೊಂಡಂತೆ ಈ ಸಮಸ್ಯೆಗಳು ಸಂಕೀರ್ಣ ಸ್ವರೂಪದ್ದಾಗಿವೆ” ಎಂದು ನ್ಯಾಯಾಲಯ ವಿವರಿಸಿದೆ.
ವಿವಿಧ ವಿಮಾನ ನಿಲ್ದಾಣಗಳಲ್ಲಿ 4,000 ಬ್ಯಾಗೇಜ್ ಟ್ರಾಲಿಗಳ ಪೂರೈಕೆ ಮತ್ತು ನಿರ್ವಹಣೆಗಾಗಿ 2017ರ ನವೆಂಬರ್‌ನಲ್ಲಿ ಎಎಐ ಟೆಂಡರ್ ಪ್ರಕಟಿಸಿತ್ತು. ಬೆಂಟ್‌ವುಡ್ ಸೀಟಿಂಗ್ ಸಿಸ್ಟಮ್ ಚೀನಾದ ತಯಾರಕರಾದ ಸುಝೌ ಜಿಂಟಾ ಮೆಟಲ್ ವರ್ಕಿಂಗ್ (SJM) ನ ಭಾರತೀಯ ಸಹವರ್ತಿ ಎಂದು ಹೇಳಿಕೊಂಡು ಬಿಡ್ ಸಲ್ಲಿಸಿತ್ತು. ಟೆಂಡರ್‌ನ ಅರ್ಹತಾ ಮಾನದಂಡಗಳನ್ನು ಪೂರೈಸಲು, ಮೇಲ್ಮನವಿದಾರರು ಇಂಗ್ಲೆಂಡ್‌ನ ಹೀಥ್ರೂ ವಿಮಾನ ನಿಲ್ದಾಣ ಮತ್ತು ವಿಯೆಟ್ನಾಂನ ನೋಯ್ ಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನೀಡಿರುವುದಾಗಿ ಹೇಳಲಾದ ತೃಪ್ತಿದಾಯಕ ಕಾರ್ಯಕ್ಷಮತೆ ಪ್ರಮಾಣಪತ್ರಗಳನ್ನು (SPCs) ಸಲ್ಲಿಸಿದ್ದರು.
ಆದರೆ ಅಕ್ಟೋಬರ್ 2017ರಲ್ಲಿ, ದೂರು ದಾಖಲಿಸಿದ ಗಿಲ್ಕೊ ಎಕ್ಸ್‌ಪೋರ್ಟ್ ಇಂಡಿಯಾ ಮೇಲ್ಮನವಿದಾರರು ಟೆಂಡರ್ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿತ್ತು.ಇದಲ್ಲದೆ, SJM ಮೇಲ್ಮನವಿದಾರರೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದು ದಾಖಲೆಗಳ ದೃಢೀಕರಣದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿತು.
ವಿಚಾರಣೆ ನಡೆಸಿದ ನ್ಯಾಯಾಲಯ ವಂಚನೆಯ ಆರೋಪಗಳು ಪಕ್ಷಗಳ ಆಂತರಿಕ ವ್ಯವಹಾರಗಳಿಗೆ ಸೀಮಿತವಾಗಿಲ್ಲ, ಬದಲಾಗಿ ವಿದೇಶಿ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳಿಂದ ದಾಖಲೆಗಳ ಸೃಷ್ಟಿಯನ್ನು ಒಳಗೊಂಡಿವೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ ಅಂತರರಾಷ್ಟ್ರೀಯ ಅಧಿಕಾರ ವ್ಯಾಪ್ತಿ ಬಳಸಿ ಸಾಕ್ಷಿಗಳನ್ನು ಕರೆಸುವ ಅಥವಾ ವಿದೇಶಾಂಗ ಸಚಿವಾಲಯದಿಂದ ಸಹಾಯ ಪಡೆಯುವ ಅಧಿಕಾರ ಮಧ್ಯಸ್ಥಗಾರರಿಗೆ ಇಲ್ಲ, ಆದ್ದರಿಂದ ಮಧ್ಯಸ್ಥಿಕೆಯ ಮೂಲಕ ವಿಷಯವನ್ನು ನಿರ್ಣಯಿಸುವುದು ಅಪ್ರಾಯೋಗಿಕವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.
ಅಲ್ಲದೆ ಪ್ರಕರಣದಲ್ಲಿನ ವಂಚನೆ ಆರೋಪಗಳು ಎಷ್ಟರ ಮಟ್ಟಿಗೆ ಗಂಭೀರವಾಗಿವೆಯೆಂದರೆ, ಅವು ಮಧ್ಯಸ್ಥಿಕೆ ಒಪ್ಪಂದ ಸೇರಿದಂತೆ ಇಡೀ ಒಡಂಬಡಿಕೆಯನ್ನೇ ಹಾಳುಮಾಡಿವೆ ಎಂದು ನ್ಯಾಯಾಲಯ ತಿಳಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]