

ರೈಲುಗಳಲ್ಲಿ ಹಲಾಲ್ ಮಾಂಸವನ್ನಷ್ಟೇ ಪೂರೈಕೆ ಮಾಡುವ ಬಗ್ಗೆ ದೂರು ದಾಖಲಾಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಈ ಸಂಬಂಧ ಇತ್ತೀಚೆಗೆ ರೈಲ್ವೆ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ಹಲಾಲ್ ಮಾಂಸವನ್ನಷ್ಟೇ ಪೂರೈಕೆ ಮಾಡುವುದು ಮೇಲ್ನೋಟಕ್ಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸದಸ್ಯ ಪ್ರಿಯಾಂಕ್ ಕನೂಂಗೊ ಅಧ್ಯಕ್ಷತೆಯ ಎನ್‌ಎಚ್‌ಆರ್‌ಸಿ ಪೀಠ ಅಭಿಪ್ರಾಯಪಟ್ಟಿದೆ.
ಮಾಂಸ ವ್ಯಾಪಾರದಲ್ಲಿ ತೊಡಗಿರುವ ಪರಿಶಿಷ್ಟ ಜಾತಿಯ ಹಿಂದೂ ಸಮುದಾಯಗಳು ಹಾಗೂ ಉಳಿದ ಮುಸ್ಲಿಮೇತರ ಸಮುದಾಯಗಳ ಜೀವನೋಪಾಯದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಪೀಠ ನುಡಿದಿದೆ. ರೈಲ್ವೆ ಎಲ್ಲಾ ಧರ್ಮಗಳಿಗೆ ಸೇರಿದ ಜನರ ಆಹಾರ ಆಯ್ಕೆಯನ್ನು ಗೌರವಿಸಬೇಕು ಎಂದು ಅದು ಕಿವಿಮಾತು ಹೇಳಿದೆ.
“ದೂರಿನಲ್ಲಿ ಮಾಡಲಾದ ಆರೋಪಗಳು ಮೇಲ್ನೋಟಕ್ಕೆ ಜನರ ಮಾನವ ಹಕ್ಕುಗಳ ಉಲ್ಲಂಘನೆಯಾಗಿ ಕಂಡುಬರುತ್ತವೆ. ಕೇವಲ ಹಲಾಲ್ ಮಾಂಸ ಮಾತ್ರ ಮಾರಾಟ ಮಾಡುವುದು ಹಿಂದೂ ಪರಿಶಿಷ್ಟ ಜಾತಿ ಸಮುದಾಯಗಳ, ಇತರ ಮುಸ್ಲಿಮೇತರ ಸಮುದಾಯಗಳ ಜೀವನೋಪಾಯದ ಮೇಲೆ ಗಂಭೀರ ಹಾನಿ ಉಂಟುಮಾಡುತ್ತದೆ. ಜೊತೆಗೆ, ಸರ್ಕಾರದ ಸಂಸ್ಥೆಯಾಗಿರುವ ರೈಲ್ವೆ, ಭಾರತದ ಸಂವಿಧಾನದ ಧರ್ಮನಿರಪೇಕ್ಷತೆಗೆ ಅನುಗುಣವಾಗಿ, ಎಲ್ಲಾ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಜನರ ಆಹಾರದ ಆಯ್ಕೆ ಹಕ್ಕನ್ನು ಗೌರವಿಸಬೇಕು,” ಎಂದು ಎನ್‌ಎಚ್‌ಆರ್‌ಸಿ ನೋಟಿಸ್ ಹೇಳಿದೆ.
ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿರುವ ಎನ್ಎಚ್ಆರ್‌ಸಿ, ಕ್ರಮ ಕೈಗೊಂಡ ಕುರಿತ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ.
ರೈಲ್ವೆಯಲ್ಲಿ ಕೇವಲ ಹಲಾಲ್ ಮಾಂಸವನ್ನು ಮಾತ್ರ ಪೂರೈಕೆ ಮಾಡುವುದರಿಂದ ಸಾಂಪ್ರದಾಯಿಕವಾಗಿ ಮಾಂಸ ವ್ಯಾಪಾರದಲ್ಲಿ ಕೆಲಸ ಮಾಡುವ ಪರಿಶಿಷ್ಟ ಜಾತಿಯ ಹಿಂದೂ ಸಮುದಾಯಗಳಿಗೆ ತಾರತಮ್ಯ ಉಂಟು ಮಾಡಲಿದೆ ಎಂದು ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ- 1993ರ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಹಿಂದೂ ಮತ್ತು ಸಿಖ್ ಪ್ರಯಾಣಿಕರಿಗೆ ಅವರ ಧಾರ್ಮಿಕ ನಂಬಿಕೆಗಳಿಗೆ ಹೊಂದಿಕೆಯಾಗುವ ಆಹಾರ ಆಯ್ಕೆಗಳು ಸಿಗುತ್ತಿಲ್ಲ. ಇದರಿಂದ ಸಂವಿಧಾನದ 14, 15, 19(1)(ಜಿ), 21 ಮತ್ತು 25ನೇ ವಿಧಿಯಡಿ ಒದಗಿಸಲಾದ ಸಮಾನತೆ ಹಕ್ಕು, ತಾರತಮು ಮಾಡದಿರುವ ಹಕ್ಕು, ವೃತ್ತಿ ಸ್ವಾತಂತ್ರ್ಯ, ಗೌರವಯುತ ಜೀವನ ನಡೆಸುವ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ದೂರುದಾರರು ವಾದಿಸಿದ್ದರು.