ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯಾಲಯಕ್ಕೆ ʼಬಿʼ ವರದಿ ಸಲ್ಲಿಕೆ

ಸೂರಜ್‌ ತನ್ನ ಮೇಲೂ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚೇತನ್‌ ವಿರುದ್ಧ ದೂರು ಕೊಡಿಸಲು ಸಚಿನ್‌, ರಕ್ಷಿತ್‌ ಮೂಲಕ ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ದೂರಲಾಗಿತ್ತು.
Suraj Revanna
Suraj Revanna
Published on

ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮತ್ತು ಜೀವ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸಿದ್ದಾರೆ.

ಹೊಳೆ ನರಸೀಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಎರಡನೇ ಎಫ್‌ಐಆರ್‌ ಕುರಿತಂತೆ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ʼಬಿʼ ಅಂತಿಮ ವರದಿಯನ್ನು 42ನೇ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಸೂರಜ್ ರೇವಣ್ಣ ಬ್ರಿಗೇಡ್ ಖಜಾಂಚಿ ನೀಡಿದ ದೂರಿನ ಆಧಾರದಡಿ ಸೂರಜ್ ರೇವಣ್ಣ ವಿರುದ್ಧ 2024ರ ಜೂನ್‌ 22ರಂದು ಪ್ರಕರಣ ದಾಖಲಾಗಿತ್ತು. ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಲಭ್ಯವಿಲ್ಲ ಎಂಬ ಕಾರಣ ನೀಡಿ ಬಿ ಅಂತಿಮ ವರದಿ ಸಲ್ಲಿಸಿದ್ದಾರೆ.

Also Read
ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್‌ ನಿರೀಕ್ಷಣಾ ಜಾಮೀನು ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಸೂರಜ್‌ ಆಪ್ತ ಎನ್ನಲಾದ ಶಿವಕುಮಾರ್‌ ನೀಡಿದ ದೂರಿನ ಮೇರೆಗೆ ಸೂರಜ್‌ ರೇವಣ್ಣ, ಚನ್ನರಾಯಪಟ್ಟಣದ ರಕ್ಷಿತ್‌ ಮತ್ತು ಹಾಸನದ ಸಚಿನ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 342, 506, 377 ಜೊತೆಗೆ 34ರ ಅಡಿ ಜೂನ್‌ 25ರಂದು ಹೊಳೆನರಸೀಪುರದ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸೂರಜ್‌ ತನ್ನ ಮೇಲೂ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚೇತನ್‌ ವಿರುದ್ಧ ದೂರು ಕೊಡಿಸಲು ಸಚಿನ್‌, ರಕ್ಷಿತ್‌ ಮೂಲಕ ತನ್ನ ಮೇಲೆ ಒತ್ತಡ ಹೇರಿದ್ದಾರೆ. ಸೂರಜ್‌ ಪ್ರಭಾವಿ ಕುಟುಂಬದವರಾಗಿದ್ದು ಭಯದಿಂದ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎಂದು ಶಿವಕುಮಾರ್‌ ದೂರಿನಲ್ಲಿ ವಿವರಿಸಿದ್ದರು.

Kannada Bar & Bench
kannada.barandbench.com