ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್‌ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ವಿಶೇಷ ನ್ಯಾಯಾಲಯ

ಎಸ್‌ಐಟಿ ಪರವಾಗಿ ಹಾಜರಾದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.
Prajwal Revanna
Prajwal Revanna
Published on

ಮಗುವಿನ ಶಾಲಾ ಶುಲ್ಕ ತುಂಬಲು ಸಹಾಯ ಮಾಡುವ ಭರವಸೆ ನೀಡಿ ಮಹಿಳೆಯ ಮೊಬೈಲ್‌ ನಂಬರ್‌ ಸಂಗ್ರಹಿಸಿ ಆನಂತರ ಆಕೆಯ ಬೆತ್ತಲೆ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಜುಲೈ 18ಕ್ಕೆ ಮುಂದೂಡಿದೆ.

ಪ್ರಜ್ವಲ್‌ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ನಡೆಸಿದರು.

ಎಸ್‌ಐಟಿ ಪರವಾಗಿ ಹಾಜರಾದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: 2019ರ ಅಕ್ಟೋಬರ್‌ನಲ್ಲಿ ಸಂತ್ರಸ್ತೆಯು ತನ್ನ ಮಗುವಿನ ಶಾಲಾ ಶುಲ್ಕ ತುಂಬುವುದಕ್ಕೆ ನೆರವು ಕೋರಿ ಪ್ರಜ್ವಲ್‌ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವ ಭರವಸೆ ನೀಡಿದ್ದ ಪ್ರಜ್ವಲ್‌ ಆಕೆಯ ಮೊಬೈಲ್‌ ಸಂಖ್ಯೆ ಸಂಗ್ರಹಿಸಿದ್ದರು. ಆನಂತರ ಆಕೆಗೆ ವಿಡಿಯೋ ಕರೆ ಮಾಡಿ ಬೆತ್ತಲಾಗುವಂತೆ ಪುಸಲಾಯಿಸಿದ್ದರು. ಇದನ್ನು ರೆಕಾರ್ಡ್‌ ಮಾಡಿಕೊಂಡಿದ್ದರು. ಪದೇಪದೇ ಈ ತೆರನಾದ ಬೇಡಿಕೆ ಇಟ್ಟು, ಒಂದೊಮ್ಮೆ ಆಕೆ ತನ್ನ ಮನವಿಗೆ ಓಗೊಡದೇ ಇದ್ದರೆ ಹಿಂದಿನ ಕರೆಯನ್ನು ವಿಡಿಯೋ ಮಾಡಿರುವುದಾಗಿ ಹೇಳಿ ಪ್ರಜ್ವಲ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎನ್ನಲಾಗಿದೆ.

Also Read
ನೆರವಿನ ಸೋಗಿನಲ್ಲಿ ಲೈಂಗಿಕ ದೌರ್ಜನ್ಯ: ನಿರೀಕ್ಷಣಾ ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೆ ಪ್ರಜ್ವಲ್‌ ರೇವಣ್ಣ ಅರ್ಜಿ

2024ರ ಏಪ್ರಿಲ್‌ 21ರಂದು ಸಂತ್ರಸ್ತೆ ಹಾಗೂ ಪ್ರಜ್ವಲ್‌ ಒಳಗೊಂಡ ಚಿತ್ರ ವೈರಲ್‌ ಆಗಿದ್ದು, ಇದು ಆಕೆಯ ಪತಿಯ ಗಮನಕ್ಕೆ ಬಂದಿತ್ತು. ಇದರಿಂದ ವಿಚಲಿತವಾಗಿದ್ದ ಆಕೆಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆಕೆಯ ಕುಟುಂಬದವರು ಅವಳನ್ನು ಸಮಾಧಾನಪಡಿಸಿದ್ದರು.

ಸಂತ್ರಸ್ತೆಯ ದೂರು ಆಧರಿಸಿ ಜೂನ್‌ 10ರಂದು ಐಪಿಸಿ ಸೆಕ್ಷನ್‌ಗಳಾದ 354(ಎ), 354(ಬಿ), 354(ಡಿ) ಮತ್ತು 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಮತ್ತು 67 ಅಡಿ ಸಿಐಡಿಯ ಸೈಬರ್‌ ಅಪರಾಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

Kannada Bar & Bench
kannada.barandbench.com