![[ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ] ನೌಕರರ ವಜಾಕ್ಕೆ ಆಂತರಿಕ ದೂರು ಸಮಿತಿಯ ವರದಿಯಷ್ಟೇ ಸಾಲದು: ಕರ್ನಾಟಕ ಹೈಕೋರ್ಟ್](https://gumlet.assettype.com/barandbench-kannada%2F2021-08%2F412346fd-ab46-478c-a2e3-3522800dc489%2Fbarandbench_2020_03_5ca16d29_906d_45f6_9fda_a2088d27e551_High_Court_of_Karnataka.jpg?auto=format%2Ccompress&fit=max)
ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ದೂರು ಬಂದ ಸಂದರ್ಭದಲ್ಲಿ, ಆರೋಪಿಯನ್ನು ವಜಾ ಮಾಡುವಂತಹ ಯಾವುದೇ ಶಿಕ್ಷೆ ನೀಡುವಾಗ ಉದ್ಯೋಗದಾತರು ಸೇವಾ ನಿಯಮಗಳನ್ನು ಪಾಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. (ಡಾ. ಅರಬಿ ಯು ಮತ್ತು ಮಂಗಳೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ನಡುವಣ ಪ್ರಕರಣ).
ಅಂತಹ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013ರ ಅಡಿ ರಚಿಸಲಾದ ಆಂತರಿಕ ದೂರು ಸಮಿತಿ (ಐಸಿಸಿ), ಸತ್ಯ ಶೋಧನಾ ವರದಿಯಾಗಿ ಕೆಲಸ ಮಾಡಬಲ್ಲದು. ಆದರೆ ಅದೊಂದೇ ಕೆಲಸದಿಂದ ವಜಾಗೊಳಿಸಲು ಆಧಾರವಾಗದು ಎಂದು ನ್ಯಾಯಾಲಯ ಹೇಳಿದೆ.
ಸೇವಾ ನಿಯಮಗಳ ಅಡಿಯಲ್ಲಿನ ಪ್ರಕ್ರಿಯೆ ಅನಿವಾರ್ಯವಾದುದು ಎಂದು ನ್ಯಾಯಾಲಯ ಒತ್ತಿಹೇಳಿತು.
"ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ ನಿಷೇಧ ಮತ್ತು ಪರಿಹಾರ) ಕಾಯಿದೆ -2013 ಮತ್ತು ನಿಯಮಗಳ ಅಡಿ ನಿಸ್ಸಂದೇಹವಾಗಿ ಹೊರಹೊಮ್ಮುವುದೇನೆಂದರೆ ಎಲ್ಲಿ ಸೇವಾ ನಿಯಮ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿ ಆಂತರಿಕ ದೂರು ಸಮಿತಿಯ ವರದಿಯು ಸತ್ಯ ಶೋಧನೆ ವರದಿ ಅಥವಾ ಪ್ರಾಥಮಿಕ ವರದಿಯಾಗಿ ಮಾರ್ಪಡುತ್ತದೆ ಮತ್ತು ಯಾವುದೇ ದೊಡ್ಡ ದಂಡ ವಿಧಿಸುವ ಮೊದಲು ಸೇವಾ ನಿಯಮಗಳ ಅಡಿಯಲ್ಲಿ ಮುಂದುವರೆಯುವುದಕ್ಕೆ ಉದ್ಯೋಗದಾತ ಬದ್ಧವಾಗಿರುತ್ತಾನೆ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅಭಿಪ್ರಾಯಪಟ್ಟರು.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ 60 ವರ್ಷದ ಅರಬಿ. ಯು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. 2018 ರ ಏಪ್ರಿಲ್‌ನಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅರಬಿ ಅವರ ವಿರುದ್ಧ ವಿದ್ಯಾರ್ಥಿನಿಯೊಬ್ಬರು ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ವಿಶ್ವವಿದ್ಯಾಲಯ ಮೊದಲು ಅವರನ್ನು ಕೇಳಿತ್ತು. ಆದರೆ ತೃಪ್ತವಾಗದ ವಿವಿ ಬಳಿಕ ಕಾಯಿದೆಯಡಿ ರಚಿಸಲಾದ ಆಂತರಿಕ ದೂರು ಸಮಿತಿ ಎದುರು ವಿಚಾರಣೆಗಾಗಿ ದೂರನ್ನು ಇರಿಸಿತು.
ಸಮಿತಿ ಅರಬಿ ಅವರನ್ನು ಆರೋಪಿ ಎಂದು ಪರಿಗಣಿಸಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅರ್ಜಿದಾರರಿಗೆ ಶೋಕಾಸ್ ನೋಟಿಸ್ ನೀಡಿ ನಿಮ್ಮನ್ನು ಏಕೆ ಸೇವೆಯಿಂದ ವಜಾಗೊಳಿಸಬಾರದು ಎಂಬ ಕಾರಣ ನೀಡುವಂತೆ ಕೇಳಿತು. ಇದನ್ನು ಪ್ರಶ್ನಿಸಿ ಅರಬಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಸೇವಾ ನಿಯಮಗಳ ಅಡಿಯಲ್ಲಿ ಯಾವುದೇ ವಿಚಾರಣೆ ನಡೆಸದೆ, ಸಮಿತಿ ವರದಿಯೊಂದನ್ನೇ ಆಧರಿಸಿ ಶೋಕಾಸ್ ನೋಟಿಸ್ ನೀಡಲಾಗಿದೆ. ಸೇವಾ ನಿಯಮಗಳ ಅಡಿಯಲ್ಲಿ ಪ್ರಕ್ರಿಯೆ ಅನುಸರಿಸಿದ ನಂತರವೇ ವಜಾ ಶಿಕ್ಷೆ ವಿಧಿಸಬಹುದು ಎಂಬುದು ಅರಬಿ ಅವರ ಆಕ್ಷೇಪವಾಗಿತ್ತು.
ಮತ್ತೊಂದೆಡೆ, ವಿಶಾಖಾ ಮತ್ತಿತರರು ಹಾಗೂ ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ ಹಾಗೂ ಮೇಧಾ ಕೊತ್ವಾಲ್ ಲೆಲೆ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣವನ್ನು ಉಲ್ಲೇಖಿಸಿದ ವಿಶ್ವವಿದ್ಯಾಲಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಪ್ಪಿತಸ್ಥನಾದ ಆರೋಪಿತ ನೌಕರನಿಗೆ ದಂಡ ವಿಧಿಸಲು ಆಂತರಿಕ ಸಮಿತಿ ವರದಿ ಸಾಕು ಎಂದಿತ್ತು.
ಪ್ರತಿವಾದಿಗಳ ಮನವಿ ಆಲಿಸಿದ ನ್ಯಾಯಾಲಯ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, ಸೆಕ್ಷನ್ 19 (i) ಅನ್ನು ಉಲ್ಲೇಖಿಸಿ ಲೈಂಗಿಕ ಕಿರುಕುಳವನ್ನು ಸೇವಾ ನಿಯಮಗಳ ಅಡಿ ದುರ್ವರ್ತನೆ ಎಂದು ಪರಿಗಣಿಸುವುದು ಉದ್ಯೋಗದಾತರ ಕರ್ತವ್ಯ ಮತ್ತು ಅಂತಹ ದುರ್ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿತು.
ಮಂಗಳೂರು ವಿವಿ ಉದ್ಯೋಗಿಗಳ ನಿಯಮಾವಳಿ ಕೂಡ ಕಾನೂನಿನಲ್ಲಿ ಸೂಚಿಸಲಾದ ಕಾರ್ಯವಿಧಾನದ ಪ್ರಕಾರ ನಡೆದ ವಿಚಾರಣೆಯ ಹೊರತಾಗಿ ಪ್ರಮುಖ ದಂಡ ವಿಧಿಸುವ ಯಾವುದೇ ಆದೇಶ ಮಾಡಬಾರದು ಎಂದು ಆದೇಶಿಸುತ್ತದೆ ಎಂಬುದಾಗಿಯೂ ನ್ಯಾಯಾಲಯ ತಿಳಿಸಿದೆ.
ಐಸಿಸಿ ವರದಿಯ ಆಧಾರದ ಮೇಲೆ ರದ್ದುಗೊಳಿಸಿದ ಆದೇಶವು ಕಾನೂನುಬಾಹಿರವಾಗಿದೆ ಮತ್ತು ಸೇವಾ ನಿಯಮಗಳ ಪ್ರಕಾರ ನಿಯಮಿತ ವಿಚಾರಣೆ ಅಥವಾ ಇಲಾಖಾ ಕ್ರಮ ಅನಿವಾರ್ಯ ಎಂದು ಸುಪ್ರೀಂಕೋರ್ಟ್‌ನ ವಿವಿಧ ನಿರ್ಧಾರಗಳು ಸ್ಪಷ್ಟವಾಗಿ ಹೇಳಿವೆ ಎಂದು ನ್ಯಾಯಾಲಯ ಗಮನಿಸಿದೆ.
ಸಮಿತಿಯ ವರದಿ ಆಧರಿಸಿ ಮಾಡಲಾದ ವಜಾ ಆದೇಶ ಕಾನೂನುಬಾಹಿರವಾಗಿದ್ದು ಸೇವಾ ನಿಯಮಗಳ ಪ್ರಕಾರ ನಿಯಮಿತ ವಿಚಾರಣೆ ಅಥವಾ ಇಲಾಖಾ ಕ್ರಮ ಅನಿವಾರ್ಯ ಎಂದು ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳು ಸ್ಪಷ್ಟವಾಗಿ ಹೇಳಿವೆ ಎಂದು ನ್ಯಾಯಾಲಯ ವಿವರಿಸಿತು.
ನ್ಯಾಯಾಲಯವು (ಸಮಿತಿಯದ್ದು) ತೀರ್ಪಿನಾಚೆಗಿನ ವಿಚಾರಣೆಯಾಗಿರುವುದರಿಂದ, ಅರ್ಜಿದಾರರನ್ನು ವಜಾಗೊಳಿಸುವ ನಿರ್ಧಾರವು ನ್ಯಾಯವ್ಯಾಪ್ತಿಯಿಲ್ಲದ ಕ್ರಿಯೆಯಾಗಿದೆ, ಏಕೆಂದರೆ ಸೇವಾ ನಿಯಮಗಳ ಅಡಿ ಪರಿಗಣಿಸಲಾಗಿರುವ ಯಾವುದೇ ವಿಚಾರಣೆಯನ್ನು ಅರ್ಜಿದಾರರ ವಿರುದ್ಧ ಆರಂಭಿಸಲಾಗಿಲ್ಲ. ಆದ್ದರಿಂದ, ಅರ್ಜಿದಾರರಿಗೆ ನ್ಯಾಯಾಲಯವನ್ನು ಸಂಪರ್ಕಿಸುವ ಹಕ್ಕಿದೆ ಎಂದು ಪೀಠ ಹೇಳಿದೆ. ಈ ಅವಲೋಕನಗಳೊಂದಿಗೆ, ಅರ್ಜಿದಾರರ ಮನವಿಯನ್ನು ಅನುಮತಿಸಿದ ನ್ಯಾಯಾಲಯ ಅರಬಿ ಅವರನ್ನು ವಜಾಗೊಳಿಸುವ ಶೋಕಾಸ್ ನೋಟಿಸ್ ರದ್ದುಗೊಳಿಸಿತು.