ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮೂರು ಗ್ರಾಮಾಂತರ ಜಿಲ್ಲೆಗಳಲ್ಲಿ 5, 8 ಮತ್ತು 9 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ (ಮಂಡಳಿ ಪರೀಕ್ಷೆ) ನಡೆಸುವ ತನ್ನ ಅಧಿಸೂಚನೆ ಹಿಂಪಡೆಯಲಾಗಿದೆ ಎಂದು ಕರ್ನಾಟಕ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ ].
ಕುತೂಹಲಕರ ಸಂಗತಿ ಎಂದರೆ, ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿರುವ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದರು.
ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಮಂಡಳಿ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿ ರಾಜ್ಯ ಸರ್ಕಾರ ತಪ್ಪೆಸಗಿದೆ ಎಂದು ಎಸ್‌ಜಿ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠಕ್ಕೆ ತಿಳಿಸಿದರು.
ಅರ್ಜಿ ಹಿಂಪಡೆಯಲಾಗಿದ್ದು ನಮ್ಮ ಕಡೆಯಿಂದ ತಪ್ಪಾಗಿದೆ. ಇದು ನಮ್ಮ ತಪ್ಪು. ಪರೀಕ್ಷೆ ನಡೆದರೂ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಪ್ರತಿವಾದಿಗಳ ಪರ ವಕೀಲರಿಗೆ ಭರವಸೆ ನೀಡಲಾಗುತ್ತಿದೆ. ಇದನ್ನು ನ್ಯಾಯಾಲಯ ದಾಖಲಿಸಿಕೊಳ್ಳಬಹುದು ಎಂದು ಮೆಹ್ತಾ ವಿವರಿಸಿದರು.
ಪೋಷಕರು ಮತ್ತು ಮಕ್ಕಳಿಗೆ ರಾಜ್ಯ ಸರ್ಕಾರ ತೊಂದರೆ ಮಾಡುವುದೇಕೆ ಸರ್ಕಾರಕ್ಕೆ ಪ್ರತಿಷ್ಠೆಯ ವಿಚಾರ ಇದ್ದಂತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಇದಕ್ಕೆ ಉತ್ತರಿಸಿದ ಮೆಹ್ತಾ ಅವರು ಮೂರು ಜಿಲ್ಲೆಗಳ ಅಂಕ ನೀಡುವಲ್ಲಿ ಕೆಲ ದೋಷಗಳಾಗಿದ್ದರಿಂದ ಪಬ್ಲಿಕ್ ಪರೀಕ್ಷೆ ನಡೆಸುವ ಅಧಿಸೂಚನೆ ಹೊರಡಿಸಲು ಕಾರಣವಾಗಿತ್ತು. ಆದರೆ, ನ್ಯಾಯಾಲಯದ ತಡೆಯಾಜ್ಞೆಯನ್ನು ಗಮನಿಸಿ ಈಗ ಅಧಿಸೂಚನೆಗಳನ್ನು ಹಿಂಪಡೆಯಲಾಗಿದೆ ಎಂದರು.
ಸರ್ಕಾರಕ್ಕೆ ಮಕ್ಕಳ ಪರ ಕಳಾಜಿ ಇದೆ. ಅವರ ಭವಿಷ್ಯ ಹಾಳು ಮಾಡುವ ಉದ್ದೇಶ ಸರ್ಕಾರದ್ದಲ್ಲ. ಇದು ನಮ್ಮ ತಪ್ಪು ಮತ್ತು ನಾವು ಅಧಿಸೂಚನೆ ಹಿಂಪಡೆದಿದ್ದೇವೆ ಎಂದು ಅವರು ವಿವರಿಸಿದರು.
ಮೆಹ್ತಾ ಅವರ ಅರ್ಜಿಗಳನ್ನು ಗಮನಿಸಿದ ನ್ಯಾಯಾಲಯ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಿತು.
ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಗೆ (ಕೆಎಸ್‌ಇಎಬಿ) ಸಂಯೋಜಿತವಾಗಿರುವ ಶಾಲೆಗಳಲ್ಲಿ 5,8, 9 ಮತ್ತು 11ನೇ ತರಗತಿಗಳಿಗೆ ಮಂಡಳಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಆದೇಶದ ಜಾರಿಯಾಗದಂತೆ ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು .