ನಟಿ ಸ್ವರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಎಜಿ ಬಳಿಕ ಎಸ್‌ ಜಿ ತುಷಾರ್ ಮೆಹ್ತಾ ಅನುಮತಿ ನಿರಾಕರಣೆ

ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಈಗಾಗಲೇ ಅನುಮತಿ ನಿರಾಕರಿಸಿರುವಾಗ, ಅರ್ಜಿದಾರರ ತಮಗೆ ಮಾಡಿರುವ ಮನವಿಯೇ "ತಪ್ಪು ಗ್ರಹಿಕೆ"ಯದು ಎಂದು ಎಸ್ ಜಿ ತುಷಾರ್ ಮೆಹ್ತಾ ಅನುಮತಿ ನಿರಾಕರಿಸಿದ್ದಾರೆ.
Tushar Mehta Swara Bhasker
Tushar Mehta Swara Bhasker

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣೆ ದಾಖಲಿಸಿಲು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅನುಮತಿ ನಿರಾಕರಿಸಿದ ಬೆನ್ನಿಗೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅದೇ ಹಾದಿ ಅನುಸರಿಸಿದ್ದಾರೆ.

ತಮ್ಮ ಸಮ್ಮತಿಯನ್ನು ನಿರಾಕರಿಸಿ ಬರೆದಿರುವ ಪತ್ರದಲ್ಲಿ ಅವರು, ಇದಾಗಲೇ ಎ ಜಿ ವೇಣುಗೋಪಾಲ್‌ ಅವರು ಮನವಿಗೆ ಒಪ್ಪಿಗೆಯನ್ನು ನೀಡಿಲ್ಲ, ಈ ಮನವಿ ಸಲ್ಲಿಸುವಿಕೆಯೇ 'ತಪ್ಪು ಗ್ರಹಿಕೆ'ಯದ್ದಾಗಿದೆ ಎಂದಿದ್ದಾರೆ. ಆ ಮೂಲಕ ಎ ಜಿ ಅವರ ಅಸಮ್ಮತಿಯ ನಂತರ ತಮಗೆ ಮನವಿ ಸಲ್ಲಿಸಿರುವ ಪ್ರಕ್ರಿಯೆಯೇ ಲೋಪದಿಂದ ಕೂಡಿರುವಂಥದ್ದು ಎಂದು ಬೆರಳು ಮಾಡಿದ್ದಾರೆ.

ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನ್ಯಾಯಾಂಗ ನಿಂದನೆ ಕಾಯ್ದೆಯಡಿ ಈ ಇಬ್ಬರು ಉನ್ನತ ಕಾನೂನು ಅಧಿಕಾರಿಗಳ ಒಪ್ಪಿಗೆ ಅಗತ್ಯವಾಗಿದೆ. ಅರ್ಜಿದಾರರಾದ ಉಷಾ ಶೆಟ್ಟಿ ಅವರು ಸುಪ್ರೀಂ ಕೋರ್ಟ್‌ ನಲ್ಲಿ ಸ್ವರಾ ಭಾಸ್ಕರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಬಯಸಿದ್ದರು.

ಆಗಸ್ಟ್‌ 23ರಂದು ಅನುಮತಿ ನಿರಾಕರಿಸಿದ್ದ ವೇಣುಗೋಪಾಲ್ ಅವರು ಸ್ವರಾ ನೀಡಿರುವ ಹೇಳಿಕೆ “ಸತ್ಯಾಂಶದಿಂದ ಕೂಡಿದೆ” ಅದು “ಭಾಷಣಕಾರರ ಗ್ರಹಿಕೆ” ಎಂದಿದ್ದರು.

ಸ್ವರಾ ಹೇಳಿಕೆಯ ಮೊದಲ ಭಾಗವು ನಿಂದನಾತ್ಮಕವಾಗಿದೆ ಎಂಬ ಅರ್ಜಿದಾರರ ವಾದಕ್ಕೆ ವೇಣುಗೋಪಾಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ:

“ಸುಪ್ರೀಂ ಕೋರ್ಟ್‌ ತೀರ್ಪನ್ನು ಆಧರಿಸಿ ಸ್ವರಾ ಹೇಳಿಕೆ ನೀಡಿದ್ದಾರೆಯೇ ವಿನಾ ಅದನ್ನು ಸಂಸ್ಥೆಯ ಮೇಲಿನ ದಾಳಿ ಎನ್ನಲಾಗದು. ಸುಪ್ರೀಂ ಕೋರ್ಟ್‌ ವಿರುದ್ಧ ಯಾವುದೇ ತೆರನಾದ ಹೇಳಿಕೆ ನೀಡಿಲ್ಲ ಅಥವಾ ಅಪನಿಂದಿಸುವ ಅಥವಾ ಅಪಮಾನಕ್ಕೆ ಈಡುಮಾಡುವ ಅಥವಾ ನ್ಯಾಯಾಲಯದ ಪರಮಾಧಿಕಾರವನ್ನು ಕುಂದಿಸುವ ಹೇಳಿಕೆಯನ್ನು ಅವರು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಹೇಳಿಕೆಯು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ವ್ಯಾಪ್ತಿಗೆ ಒಳಪಡುವುದಿಲ್ಲ”.
ಕೆ ಕೆ ವೇಣುಗೋಪಾಲ್, ಅಟಾರ್ನಿ ಜನರಲ್

ಸುಪ್ರೀಂ ಕೋರ್ಟ್‌ ನಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಾಗ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 15, ನಿಯಮ (3)ರ ಅಡಿ ಅಟಾರ್ನಿ ಜನರಲ್ ಒಪ್ಪಿಗೆ ಪಡೆಯಬೇಕಾಗುತ್ತದೆ. ಸ್ವರಾ ಭಾಸ್ಕರ್ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಿರುದ್ಧ “ಅವಹೇಳನಕಾರಿ ಮತ್ತು ವಿವಾದಾತ್ಮಕ” ಹೇಳಿಕೆ ನೀಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು "ಮುಂಬೈ ಕಲೆಕ್ಟೀವ್" ಸಮಾರಂಭದಲ್ಲಿ ನಟಿ ಸ್ವರಾ ಭಾಸ್ಕರ್ ಮಾಡಿದ್ದಾರೆ ಎನ್ನಲಾದ ಹೇಳಿಕೆಗಳನ್ನಾಧರಿಸಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಸ್ವರಾ ಭಾಸ್ಕರ್ ಅಂದಿನ ಸಮಾರಂಭದಲ್ಲಿ ನೀಡಿದ ಹೇಳಿಕೆ ಇಂತಿದೆ:

"ಬಾಬರಿ ಮಸೀದಿ ಧ್ವಂಸ ಅಕ್ರಮ ಎಂದು ಹೇಳುವ ನಮ್ಮ ಸುಪ್ರೀಂ ಕೋರ್ಟ್ ಅದೇ ತೀರ್ಪಿನಲ್ಲಿ ಮಸೀದಿ ಧ್ವಂಸ ಮಾಡಿದವರಿಗೇ ಬಹುಮಾನ ನೀಡುತ್ತದೆ. ಇಂಥ ದೇಶದಲ್ಲಿ ನಾವಿದ್ದೇವೆ. ನಮ್ಮ ಕೋರ್ಟ್‌ ಗಳೇ ಸಂವಿಧಾನವನ್ನು ನಂಬುತ್ತವೆಯೋ, ಇಲ್ಲವೋ ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ. ವಿದ್ಯಾರ್ಥಿಗಳು, ಮಹಿಳೆಯರು ಮತ್ತು ನಾಗರಿಕ ಹೋರಾಟಗಳಲ್ಲಿ ಭಾಗಿಯಾಗಿದ್ದವರು ನಮಗೆ ದಾರಿ ತೋರಿಸಿದ್ದಾರೆ. ಪ್ರತಿರೋಧ ದಾಖಲಿಸಲು ಅದೇ ನಮಗೆ ಉಳಿದಿರುವ ದಾರಿ ಎಂಬುದು ನನಗೆ ಖಾತರಿಯಾಗಿದೆ”.

ಸ್ವರಾ ಅವರ ಮೇಲಿನ ಹೇಳಿಕೆಯು ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವಂತಿದೆ. ಅಲ್ಲದೇ ಅವರು ನ್ಯಾಯಾಲಯದ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅರ್ಜಿದಾರರಾದ ಉಷಾ ಶೆಟ್ಟಿ ಅವರ ಪರ ವಕೀಲರಾದ ಅನೂಜ್ ಸೆಕ್ಸೇನಾ, ಪ್ರಕಾಶ್ ಶರ್ಮಾ ಮತ್ತು ಮಹೇಕ್ ಮಹೇಶ್ವರಿ ಮನವಿಯಲ್ಲಿ ವಿವರಿಸಿದ್ದರು.

Also Read
ಸ್ವರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅಟಾರ್ನಿ ಜನರಲ್ ವೇಣುಗೋಪಾಲ್ ನಕಾರ; ಎಸ್‌ ಜಿ ಬಳಿಗೆ ಅರ್ಜಿ

ಈ ಹಿನ್ನೆಲೆಯಲ್ಲಿ ಅದು ಕ್ರಿಮಿನಲ್ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುವುದಲ್ಲದೇ ನ್ಯಾಯಾಲಯವನ್ನು ಅಪನಿಂದೆ ಮಾಡುವ ಉದ್ದೇಶ ಹೊಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

“ನಮ್ಮ ಕೋರ್ಟ್‌ಗಳೇ ಸಂವಿಧಾನವನ್ನು ನಂಬುತ್ತವೆಯೋ, ಇಲ್ಲವೋ ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ” ಎಂಬ ಸ್ವರಾ ಭಾಸ್ಕರ್ ಅವರ ಅಭಿಪ್ರಾಯ ಬೀಸು ಹೇಳಿಕೆಯಾಗಿದ್ದು, ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದರು.

ಅಟಾರ್ನಿ ಜನರಲ್ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಲ್ಲಿ ನ್ಯಾಯಾಂಗ ನಿಂದನೆ ಕಾಯ್ದೆ 1971ರ ಸೆಕ್ಷನ್ 15ರ ಅಡಿ ನಿಯಮ 3ರ ಪ್ರಕಾರ ಸುಪ್ರೀಂ ಕೋರ್ಟ್‌ ನಿಂದನೆ 1975ರ ಪ್ರಕಾರ ಸ್ವರಾ ವಿರುದ್ಧ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರಿದ್ದರು.

Related Stories

No stories found.
Kannada Bar & Bench
kannada.barandbench.com