ಮಾದಕ ವಸ್ತು ಪ್ರಕರಣ: ನ್ಯಾಯಾಲಯಕ್ಕೆ ಘಟನೆ ವಿವರಿಸಿದ ಶಾರುಖ್‌ ಪುತ್ರ ಆರ್ಯನ್‌ ಖಾನ್‌

ಅಕ್ಟೋಬರ್‌ 2ರಂದು ದಾಳಿ ನಡೆದ ಸಂದರ್ಭದಲ್ಲಿ ಏನೆಲ್ಲಾ ನಡೆಯಿತು ಎಂದು ಆರ್ಯನ್‌ ಖಾನ್‌ ಪರ ವಕೀಲ ಸತೀಶ್‌ ಮಾನೆಶಿಂಧೆ ಅವರು ತಮ್ಮ ವಾದದ ಸಂದರ್ಭದಲ್ಲಿ ವಿವರಿಸಿದ್ದಾರೆ.
Aryan Khan
Aryan Khan
Published on

ಮುಂಬೈ ನ್ಯಾಯಾಲಯವು ಗುರುವಾರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಖಾನ್ ಅವರ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿ ಮಾದಕವಸ್ತುಗಳ ನಿಯಂತ್ರಣ ಕಾಯಿದೆ (ಎನ್‌ಸಿಬಿ) ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಅಕ್ಟೋಬರ್‌ 2ರಂದು ದಾಳಿ ನಡೆದ ಸಂದರ್ಭದಲ್ಲಿ ಏನೆಲ್ಲಾ ನಡೆಯಿತು ಎಂದು ಆರ್ಯನ್‌ ಖಾನ್‌ ಪರ ವಕೀಲ ಸತೀಶ್‌ ಮಾನೆಶಿಂಧೆ ಅವರು ತಮ್ಮ ವಾದದ ಸಂದರ್ಭದಲ್ಲಿ ವಿವರಿಸಿದ್ದಾರೆ.

ಸಂಘಟಕರೊಂದಿಗೆ ಸಂಪರ್ಕದಲ್ಲಿದ್ದ ಆರ್ಯನ್‌ ಸ್ನೇಹಿತ ಪ್ರತೀಕ್‌ ಅವರು ಆರ್ಯನ್‌ರನ್ನು ಸಂಘಟಕರಿಗೆ ಪರಿಚಯಿಸಿದ ಮೇಲೆ ಖಾನ್‌ ಮೋಜು ಕೂಟದಲ್ಲಿ ಭಾಗವಹಿಸಿದ್ದರು. ಖಾನ್‌ ಅವರನ್ನು ಅತಿಗಣ್ಯ ವ್ಯಕ್ತಿ ಎಂದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

“ಸಂಘಟಕರೊಂದಿಗೆ ಸಂಪರ್ಕ ಹೊಂದಿದ್ದ ನನ್ನ ಸ್ನೇಹಿತ ಪ್ರತೀಕ್ ಕಾರ್ಯಕ್ರಮ ಆಯೋಜಕರಿಗೆ ನನ್ನನ್ನು ಪರಿಚಯಿಸಿದ್ದರು. ನನ್ನನ್ನು ಅತಿಗಣ್ಯ ವ್ಯಕ್ತಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾಗಿ ತಿಳಿಸಿದರು. ವಿಲಾಸಿ ಹಡಗಿಗೆ ರಂಗು ತಂಬುವ ಏಕೈಕ ಉದ್ದೇಶದಿಂದ ನಾನು ಅಲ್ಲಿಗೆ ತೆರಳಿದೆ. ಅಲ್ಲಿ 1,300 ಮಂದಿ ಇದ್ದು, ಅವರು ಕೇವಲ 17 ಮಂದಿಯನ್ನು ಮಾತ್ರ ಬಂಧಿಸಿದ್ದಾರೆ” ಎಂದು ಮಾನೆಶಿಂಧೆ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಪ್ರತೀಕ್‌ ಮತ್ತು ಖಾನ್‌ ನಡುವಿನ ಮೊಬೈಲ್‌ ಚಾಟ್‌ನಲ್ಲಿ ವಿವರಣೆಯಿದೆ ಎಂದರು.

ಮೋಜಿನ ಕೋಟಕ್ಕೆ ಆಹ್ವಾನಿತರಾಗಿದ್ದ ಸಹ ಆರೋಪಿ ಅರ್ಬಾಜ್‌ ಮರ್ಚೆಂಟ್‌ ಅವರಿಗೂ ಪ್ರತೀಕ್‌ ಸ್ನೇಹಿತರಾಗಿದ್ದಾರೆ. ಆಹ್ವಾನದ ಹಿನ್ನೆಲೆಯಲ್ಲಿ ಮುಂಬೈ ಕಡಲಿನ ಅಂತಾರಾಷ್ಟ್ರೀಯ ಟರ್ಮಿನಲ್‌ಗೆ ಬಂದ ಖಾನ್‌ ಅವರಿಗೆ ಎನ್‌ಸಿಬಿ ಅಧಿಕಾರಿಗಳು ಮುಖಾಮುಖಿಯಾದರು. “ಅರ್ಬಾಜ್‌ ನಿಂತಿದ್ದ ಸ್ಥಳಕ್ಕೆ ನಾನು ತೆರಳಿದೆ. ಹಡಗಿನೊಳಗೆ ಪ್ರವೇಶಿಸುವುದಕ್ಕೂ ಮುನ್ನವೇ ಎನ್‌ಸಿಬಿ ಅಧಿಕಾರಿಗಳು ನಮ್ಮನ್ನು ಪ್ರಶ್ನಿಸಿದರು. ನಾನು ಹಡಗನ್ನು ಹೊಕ್ಕುತ್ತಿದ್ದಂತೆ ನಾನು ಡ್ರಗ್ಸ್‌ ತೆಗೆದುಕೊಂಡಿದ್ದೇನೆಯೇ ಎಂದು ಪ್ರಶ್ನಿಸಿದರು. ಬಳಿಕ ನನ್ನ ಬ್ಯಾಗ್‌ಗಳು ಮತ್ತು ವಸ್ತುಗಳನ್ನು ಪರಿಶೀಲಿಸಿದರು. ಅವರಿಗೆ ಏನೂ ಸಿಗಲಿಲ್ಲ” ಎಂದು ಮಾನೆಶಿಂಧೆ ಹೇಳಿದರು.

Also Read
ವಿಲಾಸಿ ಹಡಗಿನ ಡ್ರಗ್ಸ್ ಪ್ರಕರಣ: ಮಧ್ಯಾಹ್ನ 12.30ಕ್ಕೆ ಆರ್ಯನ್‌ ಜಾಮೀನು ಮನವಿ ಆಲಿಸಲಿರುವ ಮುಂಬೈ ನ್ಯಾಯಾಲಯ

“ಸಂಘಟಕರೊಂದಿಗೆ ನನಗೆ ಯಾವುದೇ ಸಂಪರ್ಕ ಇರಲಿಲ್ಲ. ಅರ್ಬಾಜ್‌ ಜೊತೆ ನನ್ನ ಗೆಳೆತನವನ್ನು ನಾನು ನಿರಾಕರಿಸುವುದಿಲ್ಲ. ಆದರೆ, ಅವರ ಚಟುವಟಿಕೆಗಳ ಬಗ್ಗೆ ನನಗೆ ತಿಳಿದಿಲ್ಲ. ಅವರು ಸಹ ತಾನೇ ಬಂದಿದ್ದೇನೆ ಎಂದು ಹೇಳಿದ್ದಾರೆ” ಎಂದರು.

Kannada Bar & Bench
kannada.barandbench.com