ಶಕ್ತಿ ಯೋಜನೆ: 'ಸರ್ಕಾರ ಪಾವತಿಸಬೇಕಿರುವ ಬಾಕಿ ಎಷ್ಟು?' ಸಾರಿಗೆ ನಿಗಮಗಳಿಗೆ ಹೈಕೋರ್ಟ್‌ ಪ್ರಶ್ನೆ

ಕೋವಿಡ್‌ ಸಂದರ್ಭದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಪಾವತಿಸಲು ನಿಗಮಗಳ ಬಳಿ ಹಣವಿಲ್ಲ. ಅಲ್ಲದೇ, ಯಾವುದೇ ಸಂಪನ್ಮೂಲವೂ ಇಲ್ಲ. ನಿಗಮಗಳು ನಷ್ಟದಲ್ಲಿ ನಡೆಯುತ್ತಿದ್ದು, ವೇತನ ನೀಡುವುದೇ ದುರ್ಲಭವಾಗಿದೆ ಎಂದು ಅಲವತ್ತುಕೊಂಡ ಸಾರಿಗೆ ನಿಗಮಗಳು.
Shakti Scheme & Karnataka HC
Shakti Scheme & Karnataka HC
Published on

ಮಹಿಳೆಯರಿಗೆ ಉಚಿತ ಬಸ್‌ ಸೇವೆ ಕಲ್ಪಿಸುತ್ತಿರುವ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಭಾಗವಾಗಿ ಸಾರಿಗೆ ನಿಗಮಗಳಿಗೆ ಎಷ್ಟು ಹಣವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂಬುದನ್ನು ತಿಳಿಸುವಂತೆ ಸಾರಿಗೆ ನಿಗಮಗಳಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಕೋವಿಡ್‌ ಸಾಂಕ್ರಾಮಿಕದ ಕಾಲದಲ್ಲಿ ಸಾವನ್ನಪ್ಪಿದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ತಲಾ ₹30 ಲಕ್ಷ ಪರಿಹಾರ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ದಾವಣಗೆರೆಯ ತಾಹೀರ್‌ ಹುಸೇನ್‌ ಮತ್ತು ರಾಯಚೂರಿನ ಅಜೀಜ್‌ ಪಾಷಾ ಜಾಗೀರದರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರತಿನಿಧಿಸಿದ್ದ ವಕೀಲರು “ಕೋವಿಡ್‌ ಸಂದರ್ಭದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಪಾವತಿಸಲು ನಿಗಮಗಳ ಬಳಿ ಹಣವಿಲ್ಲ. ಅಲ್ಲದೇ, ಯಾವುದೇ ಸಂಪನ್ಮೂಲವೂ ಇಲ್ಲ. ನಿಗಮಗಳು ನಷ್ಟದಲ್ಲಿ ನಡೆಯುತ್ತಿದ್ದು, ವೇತನ ನೀಡುವುದೇ ದುರ್ಲಭವಾಗಿದೆ. ಕೊರೊನಾ ಸಂದರ್ಭದಲ್ಲಿ ಸರ್ಕಾರವು ನೆರವು ನೀಡಿದ್ದರಿಂದ ವೇತನ ಪಾವತಿಸಲು ಸಾಧ್ಯವಾಗಿತ್ತು. ಅಲ್ಲದೇ, ನಿಗಮಗಳು ಪರಿಹಾರ ಪಾವತಿ ಸಂಬಂಧ ಸರ್ಕಾರ ಹೊರಡಿಸಿದ್ದ ನಿರ್ಣಯ ಜಾರಿಗೊಳಿಸದಿರಲು ನಿರ್ಧರಿಸಿವೆ” ಎಂದರು.

ಆಗ ಪೀಠವು “ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅಪಾರ ಪ್ರಮಾಣದಲ್ಲಿ ಉಚಿತ ಬಸ್‌ ಸೇವೆ ನೀಡಲಾಗುತ್ತಿದೆ. ಉಚಿತ ಟಿಕೆಟ್‌ ನೀಡುತ್ತಿದ್ದಾರಲ್ಲಾ ಅದು ಹೇಗೆ ಕೆಲಸ ಮಾಡುತ್ತಿದೆ? ಇದುವರೆಗೆ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ? ಈ ಹಣ ಪಡೆದು ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಾವತಿಸಬಹುದಲ್ಲ? ಪರಿಹಾರ ಪಾವತಿಸಲು ಸಂಪನ್ಮೂಲ ಇಲ್ಲ ಎನ್ನುತ್ತಿದ್ದೀರಿ. ರಾಜ್ಯ ಸರ್ಕಾರವು ನಿಗಮಗಳಿಗೆ ಎಷ್ಟು ಉಚಿತ ಟಿಕೆಟ್‌ ಹಣ ಕೊಡಬೇಕು? ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಬಾಕಿ ಉಳಿಸಿಕೊಂಡಿದೆ? ಅದು ನಿಮ್ಮ ಸಂಪನ್ಮೂಲವೇ ಅಲ್ಲವೇ?” ಎಂದಿತು.

“ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ ಮತ್ತು ಕೋವಿಡ್‌ ಸಂದರ್ಭದಲ್ಲಿ ಸಾವನ್ನಪ್ಪಿದ ಸರ್ಕಾರಿ ಉದ್ಯೋಗಿಗಳಿಗೆ ರೂಪಿಸಿದ ಪರಿಹಾರ ಕಾರ್ಯಕ್ರಮದ ವಿವರವನ್ನು ದಾಖಲೆಯಲ್ಲಿ ಸಲ್ಲಿಸಬೇಕು. ಏಳು ಕುಟುಂಬಗಳಿಗೆ ಪರಿಹಾರ ನೀಡಿ ಉಳಿದವರಿಗೆ ನೀಡದೇ ತಾರತಮ್ಯ ಮಾಡಲಾಗದು” ಎಂದು ನ್ಯಾಯಾಲಯ ನಿರ್ದೇಶಿಸಿತು.

ಇದಕ್ಕೂ ಮುನ್ನ, ಅರ್ಜಿದಾರ ಪರ ವಕೀಲರು “ಕೋವಿಡ್‌ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಕೆಲಸ ಮಾಡುವಂತೆ ಬಲವಂತ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಾವನ್ನಪ್ಪಿದ ಏಳು ಮಂದಿಯ ಕುಟುಂಬಗಳಿಗೆ ₹30 ಲಕ್ಷ ಪರಿಹಾರ ಪಾವತಿಸಲಾಗಿದೆ. ಈ ಸಂಬಂಧ ನಿರ್ಣಯ ಪಾಸು ಮಾಡಲಾಗಿದೆ. ನಿರ್ಣಯ ಪಾಸು ಮಾಡಿ ಆನಂತರ ಅದನ್ನು ಹಿಂಪಡೆಯಲಾಗದು. ಕೋವಿಡ್‌ ಸಂದರ್ಭದಲ್ಲಿ ಶಿಕ್ಷಕರು ಮುಂಚೂಣಿ ಆರೋಗ್ಯ ಕಾರ್ಯಕರ್ತರಾಗಿರಲಿಲ್ಲ. ಆದರೂ ಅವರಿಗೆ ಯೋಜನೆ ವಿಸ್ತರಿಸಿ, ಪರಿಹಾರ ಪಾವತಿಸಲಾಗಿದೆ. ಆದರೆ, ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ಪಾವತಿಸಲು ಮೀನಮೇಷ ಎಣಿಸಲಾಗುತ್ತಿದೆ” ಎಂದು ಆಕ್ಷೇಪಿಸಿದರು.

ಸಾರಿಗೆ ನಿಗಮಗಳ ಪರ ವಕೀಲೆಯು “ಕೋವಿಡ್‌ ಸಂದರ್ಭದಲ್ಲಿ ಸಾರಿಗೆ ನಿಗಮಗಳ ಹಣಕಾಸು ಸ್ಥಿತಿಯು ದಯನೀಯ ಸ್ಥಿತಿ ತಲುಪಿದ್ದು, ಎರಡು ವರ್ಷಗಳ ಕಾಲ ಪರಿಸ್ಥಿತಿ ಚಿಂತಾಜನಕವಾಗಿತ್ತು. ಉದ್ಯೋಗಿಗಳಿಗೆ ವೇತನ ಪಾವತಿಸಲೂ ಸಾಧ್ಯವಾಗಿರಲಿಲ್ಲ. ಪರಿಹಾರ ಪಾವತಿಸಲು ಸಂಪನ್ಮೂಲ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಏಕೆಂದರೆ ಸಾವನ್ನಪ್ಪಿದವರಿಗೆ ಪರಿಹಾರ ನೀಡಬೇಕು ಎಂದು ನಿರ್ಣಯ ಪಾಸು ಮಾಡಿರುವುದು ಸರ್ಕಾರ. ಇತರೆ ನಿಗಮಗಳು ಸರ್ಕಾರದ ನಿರ್ಣಯವನ್ನು ಜಾರಿಗೊಳಿಸಿಲ್ಲ. 13.12.2020ರಂದು ಸಚಿವರು ನೀಡಿರುವ ಭರವಸೆ ಇದಾಗಿದೆ. ನಾವು ಪರಿಹಾರ ಕಾರ್ಯಕ್ರಮವನ್ನು ರೂಪಿಸಿಲ್ಲ. ಕೋವಿಡ್‌ ಸಂದರ್ಭದಲ್ಲಿ 323 ಮಂದಿ ಸಾವನ್ನಪ್ಪಿದ್ದು, ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ನಿಗಮವು ಸರ್ಕಾರಕ್ಕೆ ಪತ್ರ ಬರೆದಿದೆ. ಕೋವಿಡ್‌ ವೇಳೆ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರಿಗೆ ಪರಿಹಾರ ನೀಡಿದಂತೆ ಇವರಿಗೆ ನೀಡಲು ನಿಧಿ ನೀಡುವಂತೆ ಕೋರಿದ್ದೇವೆ. ಇದಕ್ಕೆ ರಾಜ್ಯ ಸರ್ಕಾರವು ನಿರಾಕರಿಸಿದೆ. ನಿಮ್ಮ ಸಂಪನ್ಮೂಲದಲ್ಲಿ ಅದನ್ನು ಸರಿ ಹೊಂದಿಸಬೇಕು ಎಂದು ಸರ್ಕಾರ ಹೇಳಿದೆ. ಇದನ್ನು ಜಾರಿಗೊಳಿಸಲಾಗದು ಎಂದು ನಿಗಮವು ಮಂಡಳಿಯ ಸಭೆಯಲ್ಲಿ ನಿರ್ಧರಿಸಿದೆ” ಎಂದರು.

ಮುಂದುವರಿದು, “ಸಾವನ್ನಪ್ಪಿರುವ 323 ಮಂದಿ ಸಿಬ್ಬಂದಿಗೆಯ ಕುಟುಂಬಕ್ಕೆ ತಲಾ ₹30 ಲಕ್ಷ ಪಾವತಿಸಬೇಕು. ಮೂರು ನಿಗಮಗಳು ಇದನ್ನು ಒಪ್ಪಿಕೊಂಡಿಲ್ಲ. ಆನಂತರ ನಿಗಮದ ಉದ್ಯೋಗಿಗಳು ಬಂದ್‌ ನಡೆಸಿದ್ದಾರೆ. ಇದು ಕೈಗಾರಿಕಾ ವಿವಾದ ಇತ್ಯರ್ಥ ನ್ಯಾಯಾಲಯದಲ್ಲಿ ಬಾಕಿ ಇದೆ. ನಾಲ್ಕು ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಎರಡು ವರ್ಷದಿಂದ ಬಿಎಂಟಿಸಿಯು ಉದ್ಯೋಗಿಗಳಿಗೆ ಗ್ರ್ಯಾಚುಟಿ ಹಣ ನೀಡಿಲ್ಲ. ಶಕ್ತಿ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣವನ್ನು ಗ್ರ್ಯಾಚುಟಿ ಮತ್ತಿತರ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತಿದೆ” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮಾರ್ಚ್‌ 23ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com