ಜಾಮಿಯಾ ಗಲಭೆ ಪ್ರಕರಣ: ಆರೋಪ ನಿಗದಿ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಶಾರ್ಜೀಲ್ ಇಮಾಮ್

ಜಾಮಿಯಾ ಗಲಭೆ ಪಿತೂರಿಯ ಹಿಂದಿನ ಪ್ರಧಾನ ಸೂತ್ರಧಾರ ಶಾರ್ಜೀಲ್ ಇಮಾಮ್ ಎಂದಿದ್ದ ನ್ಯಾಯಾಲಯ ಅವರ ಭಾಷಣ ನಂಜು ಕಾರುತ್ತಿತ್ತು ಎಂದು ಹೇಳಿದೆ.
Sharjeel Imam
Sharjeel Imam
Published on

ಡಿಸೆಂಬರ್ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಉಂಟಾದ ಜಾಮಿಯಾ ಗಲಭೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ  ದೆಹಲಿ ನ್ಯಾಯಾಲಯ ಈಚೆಗೆ ಆರೋಪ ನಿಗದಿಪಡಿಸಿದ್ದನ್ನು ಪ್ರಶ್ನಿಸಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ ದೆಹಲಿ ಹೈಕೋರ್ಟ್‌ ಕದ ತಟ್ಟಿದ್ದಾರೆ.

ಇಮಾಮ್ ಅವರ ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂಜೀವ್ ನರುಲಾ ಗುರುವಾರ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.

Also Read
ಜಾಮಿಯಾ ಗಲಭೆ ಪ್ರಕರಣ: ಶಾರ್ಜೀಲ್ ಇಮಾಮ್ ವಿರುದ್ಧ ಆರೋಪ ನಿಗದಿಪಡಿಸಿದ ದೆಹಲಿ ನ್ಯಾಯಾಲಯ

ಪ್ರತಿಭಟನೆ ಸಮಯದಲ್ಲಿ ಸಾಮೂಹಿಕ ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರಕ್ಕೆ ಕಾರಣವಾದ ಪಿತೂರಿಯ ಹಿಂದಿನ ಪ್ರಧಾನ ಸೂತ್ರಧಾರ ಶಾರ್ಜೀಲ್‌ ಇಮಾಮ್ ಎಂದು ಮಾರ್ಚ್ 7 ರಂದು ವಿಚಾರಣಾ ನ್ಯಾಯಾಲಯ ಹೇಳಿತ್ತು.

ಇಮಾಮ್‌ ಅವರ ದ್ವೇಷಪೂರ್ವಕ ಮತ್ತು ಪ್ರಚೋದನಕಾರಿ ಭಾಷಣಗಳು ಗಲಭೆಗೆ ಪ್ರಚೋದಿಸಿದವು. ಆತ ಕೇವಲ ಪ್ರಚೋದಕ ಮಾತ್ರವಾಗಿರದೆ ಜನರನ್ನು ಬೀದಿಗಿಳಿಯುವಂತೆ ಸಜ್ಜುಗೊಳಿಸಿದ 'ಪ್ರಧಾನ ಸೂತ್ರಧಾರʼ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇಮಾಮ್ ಜೊತೆಗೆ, ಆಶು ಖಾನ್, ಚಂದನ್ ಕುಮಾರ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ವಿರುದ್ಧವೂ ನ್ಯಾಯಾಲಯ ಆರೋಪ  ನಿಗದಿಪಡಿಸಿತ್ತು.

Also Read
ಜಾಮಿಯಾ ಗಲಭೆ ಪ್ರಕರಣ: ಶಾರ್ಜೀಲ್ ಇಮಾಮ್ ವಿರುದ್ಧ ಆರೋಪ ನಿಗದಿಪಡಿಸಿದ ದೆಹಲಿ ನ್ಯಾಯಾಲಯ

ಪ್ರಾಸಿಕ್ಯೂಷನ್ ಪ್ರಕಾರ, ಪ್ರಚೋದನಕಾರಿ ಭಾಷಣಗಳನ್ನು ಪ್ರಸಾರ ಮಾಡುವ ಮೂಲಕ ಮತ್ತು ಜನಸಮೂಹವನ್ನು ಕೆರಳಿಸಿ  ಅಶಾಂತಿ ಹೆಚ್ಚಿಸುವಲ್ಲಿ ಇಮಾಮ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಾಸಿಕ್ಯೂಷನ್‌ ದೂರಿತ್ತು.

ಆದರೆ ತಾನು ಹಿಂಸಾಚಾರದಲ್ಲಿ ತೊಡಗಿದ್ದ ಕಾನೂನುಬಾಹಿರ ಸಭೆಯ ಭಾಗವಾಗಿರಲಿಲ್ಲ ಮತ್ತು ತನ್ನ ಭಾಷಣವು ಹಿಂಸೆಗೆ ಪ್ರಚೋದನೆ ನೀಡಿರಲಿಲ್ಲ ಎಂದು ಇಮಾಮ್‌ ವಾದಿಸಿದ್ದರು. ಆದರೆ ಇಮಾಮ್‌ ಅವರ ವಾದ ಒಪ್ಪದ ನ್ಯಾಯಾಲಯ ಜಾಮಿಯಾ ಹಿಂಸಾಚಾರದಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು ಹೊಸ ಆರೋಪಗಳನ್ನು ಸಮರ್ಥಿಸುತ್ತದೆ ಎಂದಿತ್ತು.

Kannada Bar & Bench
kannada.barandbench.com