ಜಾಮಿಯಾ ಗಲಭೆ ಪ್ರಕರಣ: ಶಾರ್ಜೀಲ್ ಇಮಾಮ್ ವಿರುದ್ಧ ಆರೋಪ ನಿಗದಿಪಡಿಸಿದ ದೆಹಲಿ ನ್ಯಾಯಾಲಯ

ಜಾಮಿಯಾ ಗಲಭೆ ಹಿಂದಿನ ಪ್ರಧಾನ ಸಂಚುಕೋರ ಶಾರ್ಜೀಲ್ ಇಮಾಮ್ ಎಂದು ಕರೆದಿರುವ ನ್ಯಾಯಾಲಯ ಅವರು ಮಾಡಿದ ಭಾಷಣ ದ್ವೇಷ ಕಾರುವಂತಿತ್ತು ಎಂದಿದೆ.
Sharjeel Imam
Sharjeel Imam
Published on

ಡಿಸೆಂಬರ್ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಉಂಟಾದ ಜಾಮಿಯಾ ಗಲಭೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಸೋಮವಾರ ಶಾರ್ಜೀಲ್ ಇಮಾಮ್ ವಿರುದ್ಧ ಆರೋಪ ನಿಗದಿಪಡಿಸಿದೆ.

ಡಿಸೆಂಬರ್ 15, 2019ರಲ್ಲಿ ನಡೆದ ಪ್ರತಿಭಟನೆಗಳ ಸಮಯದಲ್ಲಿ ಸಾಮೂಹಿಕ ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರಕ್ಕೆ ಕಾರಣವಾದ ಪಿತೂರಿಯ ಹಿಂದಿನ ಪ್ರಧಾನ ಸೂತ್ರಧಾರ ಶಾರ್ಜೀಲ್‌ ಇಮಾಮ್ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಹೇಳಿದ್ದಾರೆ.

Also Read
ಶಾರ್ಜೀಲ್‌ ಇಮಾಮ್ ಶಸ್ತ್ರಾಸ್ತ್ರ ಹಿಡಿಯಲು ಹೇಳಲಿಲ್ಲವಾದರೂ ಅವರ ಭಾಷಣ ಜನರನ್ನು ಪ್ರಚೋದಿಸಿದವು: ದೆಹಲಿ ನ್ಯಾಯಾಲಯ

ಇಮಾಮ್‌ ಅವರ ದ್ವೇಷಪೂರ್ವಕ ಮತ್ತು ಪ್ರಚೋದನಕಾರಿ ಭಾಷಣಗಳು ಗಲಭೆಗೆ ಪ್ರಚೋದಿಸಿದವು. ಆತ ಕೇವಲ ಪ್ರಚೋದಕ ಮಾತ್ರವಾಗಿರದೆ ಜನರನ್ನು ಬೀದಿಗಿಳಿಯುವಂತೆ ಸಜ್ಜುಗೊಳಿಸಿದ ʼರಾಜಕಾರಣಿʼ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಿಎಎ ವಿರುದ್ಧ ಪ್ರತಿಭಟಿಸಲು ಇಮಾಮ್ ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯವನ್ನು ಬಳಸಿಕೊಂಡರು, ಅನೇಕ ರಾಜ್ಯಗಳಲ್ಲಿ ರಸ್ತೆ ತಡೆ ಮೂಲಕ ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸುವಂತೆ ಒತ್ತಾಯಿಸಿದರು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇಮಾಮ್ ಜೊತೆಗೆ, ಆಶು ಖಾನ್, ಚಂದನ್ ಕುಮಾರ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ವಿರುದ್ಧವೂ ನ್ಯಾಯಾಲಯ ಆರೋಪ  ನಿಗದಿಪಡಿಸಿದೆ.

ತಾನು ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದೆ ಎಂಬ ಶಾರ್ಜೀಲ್‌ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

Also Read
ಸಿಎಎ ವಿರೋಧಿ ಭಾಷಣ: ದೇಶದ್ರೋಹ, ಯುಎಪಿಎ ಪ್ರಕರಣದಲ್ಲಿ ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನಿರಾಕರಣೆ

ಡಿಸೆಂಬರ್ 15, 2019 ರಂದು ಜಾಮಿಯಾ ನಗರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಹಲವಾರು ಡಿಟಿಸಿ ಬಸ್‌ಗಳು, ಖಾಸಗಿ ವಾಹನಗಳು ಮತ್ತು ಪೊಲೀಸ್ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಲಾಯಿತು. ಜೊತೆಗೆ ಕಾನೂನು ಜಾರಿ ಅಧಿಕಾರಿಗಳ ಮೇಲೆ ಭಾರೀ ಕಲ್ಲು ತೂರಾಟವೂ ನಡೆಯಿತು. ಇದು ಸ್ವಯಂಪ್ರೇರಿತ ಗಲಭೆಯಲ್ಲ, ಬದಲಾಗಿ ವ್ಯವಸ್ಥಿತ ಯೋಜನೆಯ ಫಲ ಎಂದು ನ್ಯಾಯಾಲಯ ತಿಳಿಸಿದೆ.

ಈಗ ಆರೋಪ ನಿಗದಿಪಡಿಸಿರುವುದರಿಂದ ಡಿಸೆಂಬರ್ 15, 2019ರಂದು ನಡೆದ ಘಟನೆಗಳ ಪ್ರಮುಖ ಪ್ರಚೋದಕ ಇಮಾಮ್ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಾರ್ಜೀಲ್‌ ಇಮಾಮ್‌ ಅವರು ವಿಚಾರಣೆ ಎದುರಿಸಬೇಕಾಗುತ್ತದೆ.

Kannada Bar & Bench
kannada.barandbench.com